ನಮ್ಮದು ವಿಶ್ವದ ಅತ್ಯಂತ ದೊಡ್ಡ ಮತ್ತು ಪ್ರಬಲ ಪ್ರಜಾಪ್ರಭುತ್ವ ರಾಷ್ಟ್ರ ಎಂದು ದೇಶ ವಾಸಿಗಳಾದ ನಾವೆಲ್ಲರೂ ಬಲು ಹೆಮ್ಮೆಯಿಂದಲೇ ಹೇಳಿಕೊಳ್ಳುತ್ತೇವೆ. ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ ಬಳಿಕ ವಿಶ್ವದಲ್ಲಿಯೇ ಅತ್ಯುತ್ಕೃಷ್ಟ ಎಂದು ಕರೆಸಿಕೊಳ್ಳುವ ಸಂವಿಧಾನವನ್ನು ಅಂಗೀಕರಿಸಿದಾಗಿನಿಂದ ಪ್ರಜೆಗಳಾದ ನಮಗೆಲ್ಲರಿಗೂ ಮತದಾನದ ಹಕ್ಕು ಲಭಿಸಿದೆ. 18 ವರ್ಷ ಮೇಲ್ಪಟ್ಟವರೆಲ್ಲರಿಗೂ ಗ್ರಾಮ ಪಂಚಾಯತ್‌ನಿಂದ ಹಿಡಿದು ಲೋಕಸಭೆ ಚುನಾವಣೆವರೆಗೂ ಈ ಹಕ್ಕನ್ನು ಚಲಾಯಿಸುವ ಅಧಿಕಾರವಿದೆ. ಪ್ರತೀ ಚುನಾವಣೆ ಯಲ್ಲೂ ಆಯಾಯ ವ್ಯಾಪ್ತಿಯ ಅರ್ಹರೆಲ್ಲರೂ ಮತ ಚಲಾಯಿಸಿದಾಗ ಮಾತ್ರವೇ ಈ ಹಕ್ಕಿಗೊಂದು ಮೌಲ್ಯ ಮತ್ತು ಅದರ ನೈಜ ಉದ್ದೇಶ ಈಡೇರಲು ಸಾಧ್ಯ. ಜತೆಯಲ್ಲಿ ಪ್ರಜಾಪ್ರಭುತ್ವ ಮತ್ತು ದೇಶದ ಗೌರವವನ್ನು ಎತ್ತಿ ಹಿಡಿದಂತೆ. ನಾವೆಲ್ಲರೂ ಈಗ ಅರ್ಥ ಮಾಡಿಕೊಳ್ಳಬೇಕಾದ ಪ್ರಮುಖ ಸಂಗತಿಯೆಂದರೆ ಇದು ಬರೀ ಹಕ್ಕಲ್ಲ; ಹಕ್ಕಿಗಿಂತಲೂ ಪ್ರಾಥಮಿಕ ಕರ್ತವ್ಯ. ಅದನ್ನು ಕಡ್ಡಾಯವಾಗಿ ನಿಭಾಯಿಸಲೇಬೇಕಾದದ್ದು ನಮ್ಮ ಹೊಣೆಗಾರಿಕೆ ಹಾಗೂ ಉತ್ತರದಾಯಿತ್ವ ಸಹ.
ನಮ್ಮ ಪ್ರತಿನಿಧಿಗಳ ಆಯ್ಕೆಗಾಗಿ ನಿರ್ದಿಷ್ಟ ಅವಧಿಗೊಮ್ಮೆ ಚುನಾವಣೆ ಎಂಬ ವ್ಯವಸ್ಥೆ ಸಂರಚಿಸಿಕೊಂಡಿದ್ದೇವೆ. ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿಗಳ ಪೈಕಿ ಯೋಗ್ಯ ಮತ್ತು ಸಮರ್ಥರನ್ನು ನಮ್ಮ ಪ್ರತಿನಿಧಿಯಾಗಿ ಆಯ್ಕೆ ಮಾಡಿ ಶಾಸನ ಸಭೆಗಳಿಗೆ ಕಳುಹಿಸುವ ಗುರುತರ ಜವಾಬ್ದಾರಿ ಪ್ರತಿಯೊಬ್ಬ ಪ್ರಜೆಯ ಮೇಲಿದೆ. ಇಲ್ಲಿ ಪ್ರತಿಯೊಬ್ಬರ ಮತವೂ ಮುಖ್ಯ. ಇದು ನಮ್ಮ ದೇಶದ, ನಾಡಿನ ಭವಿಷ್ಯವನ್ನು ನಿರ್ಧರಿಸುತ್ತದೆ ಎಂಬುದನ್ನು ಗಂಭೀರವಾಗಿ ಸ್ವೀಕರಿಸಬೇಕು. ಯೋಗ್ಯರನ್ನು, ಯೋಗ್ಯತೆಯನ್ನು ಎತ್ತಿ ಹಿಡಿಯುವ ಸಂದರ್ಭವಿದು ಎಂಬುದು ನೆನಪಿರಲಿ. ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 75 ವರ್ಷಗಳು ಗತಿಸಿವೆ. ಈ ಅವಧಿಯಲ್ಲಿ ಅವೆಷ್ಟೋ ಚುನಾವಣೆಗಳು ನಡೆದಿವೆ. ಬಹುತೇಕ ಚುನಾವಣೆಗಳಲ್ಲಿ ಶೇ.30-40ರಷ್ಟು ಮತದಾರರು ಮತಗಟ್ಟೆಗಳಿಂದ ದೂರ ಉಳಿಯು ತ್ತಾರೆ. ಮತದಾನ ಪ್ರಮಾಣ ಕಡಿಮೆಯಾಗಲು ಬಲುಮುಖ್ಯ ಕಾರಣವೆಂದರೆ ಜನರ ಅಸಡ್ಡೆಯ ಮನೋಭಾವ. ಇದಕ್ಕೆ ಮದ್ದೆಂದರೆ ನಾವೇ ಸ್ವಯಂ ಜಾಗೃತರಾಗುವುದಷ್ಟೇ.
ಕೆಲವು ದಶಕಗಳ ಹಿಂದೆ ಗ್ರಾಮೀಣ ಪ್ರದೇಶದಲ್ಲಿ ಮತದಾನ ಪ್ರಮಾಣ ಕಡಿಮೆಯಾಗಿದ್ದರೆ ಕಳೆದೆರಡು ದಶಕದ ಅವಧಿಯಲ್ಲಿ ನಗರ ಪ್ರದೇಶದಲ್ಲಿಯೇ ನಿರೀಕ್ಷೆಯಷ್ಟು ಮತದಾನವಾಗುತ್ತಿಲ್ಲ.
ನಗರ ಪ್ರದೇಶಗಳಲ್ಲಿ ಬಹುತೇಕ ಸುಶಿಕ್ಷಿತರಿ ದ್ದಾಗ್ಯೂ ಮತದಾನದ ಬಗೆಗೆ ಇರುವ ನಿರ್ಲಕ್ಷ್ಯ ಖಂಡಿತಾ ಅಕ್ಷಮ್ಯವೇ ಸರಿ. ಇನ್ನು ದೇಶದ ರಾಜಕಾರಣ, ಮಿತಿಮೀರಿದ ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಮತ್ತಿತರ ವಿಷಯ ಗಳನ್ನು ಮುಂದಿಟ್ಟು ಇಡೀ ಚುನಾವಣ ಪ್ರಕ್ರಿಯೆಯಿಂದ ದೂರ ಇರುವವರು ಕಡಿಮೆ ಇಲ್ಲ. ಮಾತೆತ್ತಿದರೆ ವ್ಯವಸ್ಥೆಯೇ ಸರಿ ಇಲ್ಲ ಎಂದು ಸಬೂಬು ಹೇಳುವ ನಾವೂ ಈ ವ್ಯವಸ್ಥೆಯ ಪ್ರಮುಖ ಭಾಗವೆನ್ನುವುದನ್ನು ಯಾಕೆ ಅರ್ಥ ಮಾಡಿಕೊಳ್ಳುವುದಿಲ್ಲ? ಮತದಾನದಂಥ ಪ್ರಮುಖ ಕರ್ತವ್ಯ ನಿಭಾಯಿಸಲೂ ಹಿಂದೆ ಮುಂದೆ ನೋಡುವವರು ವ್ಯವಸ್ಥೆಯ ಬಗೆಗೆ ಮಾತನಾಡುವ ನೈತಿಕತೆಯನ್ನೇ ಕಳೆದುಕೊಳ್ಳುತ್ತಾರೆ.
ಬುಧವಾರ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯುತ್ತಿದೆ. ಇದು ಪ್ರಜಾತಂತ್ರದ ಹಬ್ಬ. ಮತಗಟ್ಟೆಗಳಲ್ಲಿ ಹಬ್ಬದ ಸಂಭ್ರಮ ಕಾಣಬೇಕೆಂದರೆ ಎಲ್ಲರೂ ಮತದಾನ ಕೇಂದ್ರಕ್ಕೆ ತೆರಳಿ ಹಕ್ಕು ಚಲಾಯಿಸಬೇಕು. ಪ್ರತಿಯೋರ್ವರೂ ತಮ್ಮ ವಿವೇಚನೆಯನ್ನು ಬಳಸಿ ಯಾವ ಅಭ್ಯರ್ಥಿ ತನ್ನ ಪ್ರತಿನಿಧಿಯಾಗಲು ಅರ್ಹ, ಯಾರಿಂದ ಕ್ಷೇತ್ರದ ಅಭಿವೃದ್ಧಿ ಸಾಧ್ಯ ಎಂಬುದನ್ನು ಪರಾಮರ್ಶಿಸಿ ಮತ ಚಲಾಯಿಸಬೇಕು. ಯಾವುದೇ ಆಮಿಷಕ್ಕೆ ಬಲಿಯಾಗದೆ ಮತ ಚಲಾಯಿಸುವ ಮೂಲಕ ತಮ್ಮ ಸಾಂವಿಧಾನಿಕ ಹೊಣೆ ಗಾರಿಕೆಯನ್ನು ಪ್ರತಿಯೊಬ್ಬರೂ ನಿಭಾಯಿಸಬೇಕು. ಒಂದು ಆಶಾವಾದದ ಸಂಗತಿ ಯೆಂದರೆ ಕಳೆದರಡು ಚುನಾವಣೆಗಳಲ್ಲಿ ಮಹಾ ನಗರ ಪ್ರದೇಶಗಳನ್ನು ಹೊರತುಪಡಿಸಿ ಉಳಿದೆಲ್ಲೆಡೆ ಮತದಾನದ ಪ್ರಮಾಣ ಕೊಂಚ ಏರುಗತಿಯಲ್ಲಿದೆ. ಈ ಧನಾತ್ಮಕ ಸನ್ನಿ ರಾಜ್ಯದಗಲಕ್ಕೆ ವಿಸ್ತರಿಸಲಿ. ಈ ಬಾರಿಯ ಚುನಾವಣೆಯಲ್ಲಿ ಗರಿಷ್ಠ ಪ್ರಮಾಣದಲ್ಲಿ ಮತದಾನ ಮಾಡೋಣ. ವಿಶ್ವ ದಾಖಲೆ ನಿರ್ಮಿಸುವ ಸಂಕಲ್ಪ ನಮ್ಮೆಲ್ಲರದಾಗಲಿ. ತನ್ಮೂಲಕ ರಾಜ್ಯ ಇಡೀ ದೇಶಕ್ಕೆ ಮಾದರಿಯಾಗಲಿ. ಪ್ರಜಾಪ್ರಭುತ್ವಂ ಗೆಲ್ಗೆ…