ಬೆಳಗಾವಿ: ರಾಜ್ಯದ ಶಿಕ್ಷಣ ಸಂಸ್ಥೆಗಳು ಮತ್ತು ಸರಕಾರಿ ಉದ್ಯೋಗಗಳಲ್ಲಿ ಪ್ರವೇಶದಲ್ಲಿ ಶೇ 12 ರಷ್ಟು ಮೀಸಲಾತಿ ನೀಡಬೇಕು ಎಂದು ಒಕ್ಕಲಿಗ ಸಮುದಾಯಕ್ಕೆ ಸೇರಿದ ಕರ್ನಾಟಕದ ಸಚಿವರು ಮತ್ತು ಬಿಜೆಪಿ ಶಾಸಕರು ಶುಕ್ರವಾರ ಒತ್ತಾಯಿಸಿದರು. ಕಂದಾಯ ಸಚಿವ ಆರ್.ಅಶೋಕ್ ನೇತೃತ್ವದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಮನವಿ ಸಲ್ಲಿಸಿ ಬಳಿಕ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್, ಒಕ್ಕಲಿಗ ಸಮುದಾಯದ ನ್ಯಾಯಯುತ ಬೇಡಿಕೆ ಇದಾಗಿದೆ. ಜನಸಂಖ್ಯೆ ಆಧಾರದಲ್ಲಿ ನಾವೂ ರಾಜ್ಯದಲ್ಲಿ 16% ಇದ್ದೇವೆ. ನಮ್ಮಲ್ಲೂ ತುಂಬಾ ಬಡವರಿದ್ದಾರೆ. ಜಮೀನುಗಳನ್ನು ಕಳೆದುಕೊಂಡವರಿದ್ದಾರೆ. ನಮ್ಮ ಸಮುದಾಯದ ಮೀಸಲಾತಿಯನ್ನ 4 ರಿಂದ 12 ಪರ್ಸೆಂಟ್ ಗೆ ಹೆಚ್ಚಿಸಬೇಕು ಎಂಬುದು ನಮ್ಮ ನ್ಯಾಯಯುತವಾದ ಬೇಡಿಕೆ ಎಂದರು.
ಒಕ್ಕಲಿಗ ಸಮುದಾಯವನ್ನ ಭಾಗ ಮಾಡಿ ಒಡೆದಿದ್ದಾರೆ. ಹೀಗಾಗಿ ಬಂಟರು, ರೆಡ್ಡಿ, ಕುಂಚಿಟಗರು ಸೇರಿದಂತೆ ಕೇಂದ್ರ ಓಬಿಸಿ ರಿಸರ್ವೇಶನ್ ನಲ್ಲಿ ಸೇರಿಸಬೇಕು. ಒಕ್ಕಲಿಗ ಸಮುದಾಯಕ್ಕೆ ಅಭದ್ರತೆ ಕಾಡಬಾರದು. ಇಡೀ ಒಕ್ಕಲಿಗ ಸಮುದಾಯವನ್ನ ಒಟ್ಟಿಗೆ ಸೇರಿಸಬೇಕು. ಕರ್ನಾಟಕದಲ್ಲಿ ಬಿಜೆಪಿ ಸರಕಾರವಿದೆ, ಹೀಗಾಗಿ ನಮಗೆ ನಂಬಿಕೆ ಇದೆ ಎಂದರು.
ನಮ್ಮ ಬೇಡಿಕೆಯನ್ನ ಗೌರವಿಸಿ ಪರಿಹಾರ ಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎನ್ನುವುದಾಗಿ ಸರಳ ಮುಖ್ಯಮಂತ್ರಿ ಬೊಮ್ಮಾಯಿಯವರು ಹೇಳಿದ್ದಾರೆ. ನಾವೂ ಗಲಾಟೆ, ಧಮ್ಕಿ ಮಾಡಲ್ಲ. ಶಾಂತಿಯುತವಾಗಿ ಎಲ್ಲರೂ ಸೇರಿ ಮನವಿ ಮಾಡುತ್ತಿದ್ದೇವೆ. ಸಮುದಾಯದ ಸ್ವಾಮೀಜಿಗಳನ್ನು ಜನವರಿ 4 ರಂದು ಭೇಟಿ ಮಾಡುತ್ತೇವೆ. ನಾವೆಲ್ಲರೂ ಒಟ್ಟಿಗೆ ಹೆಜ್ಜೆ ಹಾಕಿ, ನಮ್ಮ ಸಮುದಾಯಕ್ಕೆ ನ್ಯಾಯ ಕೊಡಿಸುವ ಕೆಲಸ ಮಾಡುತ್ತೇವೆ. ನಾವೂ ಯಾವುದೇ ಬೆದರಿಕೆ ಹಾಕುವುದಿಲ್ಲ ಎಂದರು.
ಒಕ್ಕಲಿಗ ಸಮಾಜದ ಜೊತೆ ಬೊಮ್ಮಾಯಿ, ಯಡಿಯೂರಪ್ಪ ಸದಾ ಇದ್ದಾರೆ.ವಿಧಾನ ಸೌಧದ ಮುಂದೆಯೂ ಕೆಂಪೇಗೌಡರ ಪ್ರತಿಮೆ ಮಾಡಲು ಹಣ ಬಿಡುಗಡೆ ಮಾಡಿದ್ದಾರೆ. ಒಕ್ಕಲಿಗರ ನಿಗಮ ಮಾಡಿ 120 ಕೋಟಿ ಹಣವನ್ನು ಕೊಟ್ಟಿದ್ದಾರೆ. ಹೀಗಾಗಿ ಮುಖ್ಯಮಂತ್ರಿಗಳ ಮಾತಿಗೆ ಮನ್ನಣೆ ಕೊಡುತ್ತೇವೆ ಎಂದರು.
ಜೆಡಿಎಸ್, ಕಾಂಗ್ರೆಸ್ ಶಾಸಕರು ಅಧಿಕಾರ ಇದ್ದಾಗ ಏನೂ ಮಾಡಿಲ್ಲ. ನಾವೂ ಈಗ ಏರ್ ಪೋರ್ಟ್ ನಲ್ಲಿ ಕೆಂಪೇಗೌಡರ ಪ್ರತಿಮೆ ಮಾಡಿದ್ದೇವೆ. ಒಕ್ಕಲಿಗರಿಗೆ ನ್ಯಾಯ ಒದಗಿಸಲು ನಾವೆಲ್ಲ ಸಚಿವರು, ಶಾಸಕರು ಒಂದಾಗಿ ಕೆಲಸ ಮಾಡುತ್ತೇವೆ ಎಂದರು.