Advertisement

Kota Srinivas Poojary; ಮೀನುಗಾರರ ಸಮಸ್ಯೆ, ಬೇಡಿಕೆಗಳಿಗೆ ಧ್ವನಿಯಾಗುವೆ

12:51 AM Apr 23, 2024 | Team Udayavani |

ಉಡುಪಿ: ಕರಾವಳಿ ಜಿಲ್ಲೆಗಳ ಆರ್ಥಿಕತೆಗೆ ಬಹುದೊಡ್ಡ ಕೊಡುಗೆ ನೀಡುತ್ತಿರುವ ಮೀನುಗಾರಿಕೆಗೆ ಶಕ್ತಿ ತುಂಬುವ ನಿಟ್ಟಿನಲ್ಲಿ ಸಮಸ್ತ ಮೀನುಗಾರರ ಬೇಡಿಕೆ ಸಮಸ್ಯೆಗಳ ಬಗ್ಗೆ ಧ್ವನಿಯಾಗಿ ಕೇಂದ್ರ ಸರಕಾರದ ಮೂಲಕ ಪರಿಹಾರ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

Advertisement

ಅವರು ಮಲ್ಪೆ ಮೀನುಗಾರ ಸಂಘದ ಸಭಾಭವನದಲ್ಲಿ ಮಲ್ಪೆಯ ಮೀನುಗಾರ ಮುಖಂಡರು ಹಾಗೂ ಸಂಘದ ಪದಾಧಿಕಾರಿಗಳನ್ನು ಭೇಟಿ ನೀಡಿ ಮತಯಾಚನೆ ಮಾಡಿ ಗೆಲುವಿಗೆ ಸಹಕಾರ ಕೋರಿದರು.

ಕರಾವಳಿ ಭಾಗದ ಮೀನುಗಾರರು ನಿರಂತರವಾಗಿ ರಾಷ್ಟ್ರೀಯತೆ, ಹಿಂದುತ್ವ ಹಾಗೂ ದೇಶದ ಸಮಗ್ರ ಅಭಿವೃದ್ಧಿಗಾಗಿ ಸದಾ ಬಿಜೆಪಿ ಪಕ್ಷವನ್ನು ಬೆಂಬಲಿಸುತ್ತಾ ಬಂದಿದ್ದು, ಈ ಬಾರಿ ಪ್ರಧಾನಿ ನರೇಂದ್ರ ಮೋದಿಯವರನ್ನು ಸತತ 3ನೇ ಬಾರಿಗೆ ಪ್ರಧಾನಿಯಾಗಿಸುವ ಸಂಕಲ್ಪ ಮಾಡಿದ್ದಾರೆ. ಈ ಹಿಂದೆ ಮೀನುಗಾರಿಕೆ ಸಚಿವನಾಗಿದ್ದಾಗ 60 ಕೋಟಿ ರೂ. ವೆಚ್ಚದಲ್ಲಿ 22 ಸಾವಿರ ಮಹಿಳಾ ಮೀನುಗಾರರ ಸಾಲ ಮನ್ನಾ, ಹಲವು ದಶಕಗಳ ಬೇಡಿಕೆಯಾಗಿದ್ದ ಹೆಜಮಾಡಿ ಮೀನುಗಾರಿಕೆ ಬಂದರು ಅಭಿವೃದ್ಧಿಗೆ 180 ಕೋಟಿ ರೂ. ಮಂಜೂರು ಹಾಗೂ ವಿವಿಧ ಮೀನುಗಾರಿಕೆ ಬಂದರುಗಳ ಅಭಿವೃದ್ಧಿಗೆ ಆದ್ಯತೆ ನೀಡಿದ್ದೇನೆ ಎಂದರು.

ಶಾಸಕ‌ ಯಶ್‌ಪಾಲ್‌ ಸುವರ್ಣ ಮಾತನಾಡಿ, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಪ್ರಧಾನಮಂತ್ರಿ ಮತ್ಸé ಸಂಪದ ಯೋಜನೆಯ ಮೂಲಕ ಮೀನು ಗಾರಿಕೆ ಅಭಿವೃದ್ಧಿಗೆ 26 ಸಾವಿರ ಕೋಟಿ ರೂ. ಅನುದಾನ ಒದಗಿಸಿದ್ದು, ಸಾಗರಮಾಲಾ ಯೋಜನೆಯ ಮೂಲಕ ಬಂದರುಗಳ ಅಭಿವೃದ್ಧಿ ಕರಾವಳಿ ಜಿಲ್ಲೆಯ ಉತ್ಪನ್ನವಾಗಿ ಸಾಗರೋತ್ಪನ್ನವನ್ನು ಆಯ್ಕೆ ಮಾಡಿದ್ದು, ಮೀನುಗಾರಿಕೆಗೆ ಪ್ರತ್ಯೇಕ ಸಚಿವಾಲಯ ಸ್ಥಾಪನೆ ಮಾಡುವ ಮೂಲಕ ಮೀನುಗಾರರ ಬಗ್ಗೆ ತನ್ನ ಬದ್ಧತೆಯನ್ನು ನಿರೂಪಿಸಿದೆ ಎಂದು ಅವರು ತಿಳಿಸಿದರು.

ಕೇಂದ್ರ ಸರಕಾರ ಮೀನುಗಾರಿಕೆಯ ಸಮಗ್ರ ಅಭಿವೃದ್ಧಿಯ ಜತೆಜತೆಗೆ ಮೀನುಗಾರರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹಲವು ಯೋಜನೆಗಳ ಅನುಷ್ಠಾನಕ್ಕೆ ಬದ್ಧವಾಗಿದ್ದು, ಈ ಬಾರಿ ಕೋಟ ಶ್ರೀನಿವಾಸ ಪೂಜಾರಿಯವರನ್ನು ಬಹುಮತದಿಂದ ಗೆಲ್ಲಿಸುವ ಮೂಲಕ ನರೇಂದ್ರ ಮೋದಿಗೆ ಶಕ್ತಿ ತುಂಬುವಂತೆ ಕರೆ ನೀಡಿದರು.
ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ದಯಾನಂದ ಸುವರ್ಣ ಹಾಗೂ ಮೀನುಗಾರ ಸಂಘಟನೆಗಳ ಪದಾಧಿಕಾರಿಗಳು, ಮೀನುಗಾರ ಮುಖಂಡರು ಉಪಸ್ಥಿತರಿದ್ದರು.

Advertisement

ಇಂದು ಅಣ್ಣಾಮಲೈ ಬೃಹತ್‌ ರೋಡ್‌ಶೋ
ಎ. 23ರ ಸಂಜೆ 4ಕ್ಕೆ ಬ್ರಹ್ಮಾವರ ಆಕಾಶವಾಣಿ ಕೇಂದ್ರದ ಬಳಿಯಿಂದ ಬಸ್‌ ನಿಲ್ದಾಣದ ವರೆಗೆ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರ ಬೃಹತ್‌ ರೋಡ್‌ ಶೋ ಜರಗಲಿದೆ. ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ, ಶಾಸಕರು ಮತ್ತು ಪಕ್ಷದ ವಿವಿಧ ಸ್ತರಗಳ ಮುಖಂಡರು ಭಾಗವಹಿಸಲಿದ್ದಾರೆ ಎಂದು ಉಡುಪಿ ಶಾಸಕ ಯಶ್‌ಪಾಲ್‌ ಸುವರ್ಣ ಅವರು ತಿಳಿಸಿದ್ದಾರೆ.

ಮೀನುಗಾರರಿಗೆ ಕಾಂಗ್ರೆಸ್‌ ಮೇಲೆ ಯಾವುದೇ ಭರವಸೆ ಉಳಿದಿಲ್ಲ
ಕರಾವಳಿಯ ಮೀನುಗಾರರಿಗೆ ಕಾಂಗ್ರೆಸ್‌ ಪಕ್ಷದ ಮೇಲೆ ಯಾವುದೇ ಭರವಸೆ ಉಳಿದಿಲ್ಲ. 2018ರ ಸುವರ್ಣ ತ್ರಿಭುಜ ಬೋಟ್‌ ದುರಂತ ಸಂದರ್ಭ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್‌ ಸರಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದೆ ಯಾವುದೇ ಪರಿಹಾರವನ್ನೂ ನೀಡದೆ ಅನ್ಯಾಯವೆಸಗಿತ್ತು. ಅನಂತರ ಬಂದ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ವಿಶೇಷ ಪ್ರಕರಣದಡಿ ಸಂತ್ರಸ್ತ ಮೀನುಗಾರರ ಕುಟುಂಬಕ್ಕೆ ಪರಿಹಾರ ನೀಡಿ ಆರ್ಥಿಕ ಸ್ಥೈರ್ಯ ತುಂಬಿದೆ. ಕಳೆದ ವರ್ಷ ಉಚ್ಚಿಲದಲ್ಲಿ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಅವರು ನಡೆಸಿದ ಮೀನುಗಾರರ ಸಂವಾದದಲ್ಲಿ ನೀಡಿದ ಯಾವುದೇ ಭರವಸೆಗಳನ್ನು ರಾಜ್ಯದ ಕಾಂಗ್ರೆಸ್‌ ಸರಕಾರ ಈಡೇರಿಸದೆ ನಿರಂತರವಾಗಿ ಮೀನುಗಾರರಿಗೆ ಚೊಂಬು ನೀಡಿ ಮೋಸ ಮಾಡಿದೆ.
-ರವಿರಾಜ್‌ ಸುವರ್ಣ, ಜಿಲ್ಲಾ ಸಂಚಾಲಕರು, ಬಿಜೆಪಿ ಮೀನುಗಾರ ಪ್ರಕೋಷ್ಠ

Advertisement

Udayavani is now on Telegram. Click here to join our channel and stay updated with the latest news.

Next