Advertisement

ಅವಧಿಗೆ ಮುನ್ನವೇ ವಾಡಿಕೆ ಮಳೆ ಪೂರ್ಣ

10:20 AM Aug 26, 2018 | |

ಮಹಾನಗರ: ರಾಜ್ಯದ ಕರಾವಳಿ ಪ್ರದೇಶಗಳಲ್ಲಿ ಕೆಲವು ತಿಂಗಳಿನಿಂದ ಯಥೇತ್ಛವಾಗಿ ಮಳೆಯಾ ಗುತ್ತಿದ್ದು, ಜಿಲ್ಲೆಯಲ್ಲಿ ವಾರ್ಷಿಕ ವಾಡಿಕೆ ಮಳೆಯ ಪ್ರಮಾಣವು ವರ್ಷ ಕೊನೆಗೊಳ್ಳಲು ನಾಲ್ಕು ತಿಂಗಳಿರುವಾಗಲೇ ಗುರಿಮುಟ್ಟಿದೆ. ಕರಾವಳಿ ಪ್ರದೇಶದಲ್ಲಿ 2018ರ ಮುಂಗಾರು ಉತ್ತಮವಾಗಿರಲಿದೆ ಎಂದು ‘ಸೌತ್‌ ಏಶಿಯನ್‌ ಕ್ಲೈಮೇಟ್‌ ಔಟ್‌ ಲುಕ್‌ ಪೋರಂ’ ಈ ಹಿಂದೆಯೇ ಮಾಹಿತಿ ನೀಡಿತ್ತು. ಇದರಂತೆಯೇ ಈ ಬಾರಿ ದ.ಕ. ಜಿಲ್ಲೆಯಲ್ಲಿ ವಾಡಿಕೆಗಿಂತ ಜಾಸ್ತಿ ಮಳೆಯಾಗಿದೆ. ಕರಾವಳಿ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಡಿಸೆಂಬರ್‌ ತಿಂಗಳಿನವರೆಗೆ ಮಳೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಮಳೆ ಸುರಿಯುವ ನಿರೀಕ್ಷೆಯಿದೆ.

Advertisement

4,091.5 ಮಿ.ಮೀ. ಮಳೆ
ವಾಡಿಕೆಯಂತೆ ಜಿಲ್ಲೆಯ ಐದು ತಾಲೂಕುಗಳು ಸೇರಿ ಜನವರಿಯಿಂದ ಡಿಸೆಂಬರ್‌ ವರೆಗೆ 3,912.2 ಮಿ.ಮೀ. ವಾರ್ಷಿಕ ಮಳೆ ಆಗಬೇಕಿತ್ತು. ಆದರೆ ಹವಾಮಾನ ಇಲಾಖೆಯ ಆ. 25ರ ಅಂಕಿ ಅಂಶದಂತೆ ಈಗಾಗಲೇ 4,091.5 ಮಿ.ಮೀ. ಮಳೆಯಾಗಿದೆ. ಇದರಿಂದಾಗಿ ಡಿಸೆಂಬರ್‌ ಕೊನೆಗೊಳ್ಳಲು ಇನ್ನೂ 4 ತಿಂಗಳಿರುವಾಗಲೇ ವಾಡಿಕೆ ಮಳೆಯ ಗುರಿ ಮುಟ್ಟಿದಂತಾಗಿದೆ. 

ಆಗಸ್ಟ್‌ನಲ್ಲಿ 1,118.9 ಮಿ.ಮೀ. ಮಳೆ
ಜಿಲ್ಲೆಯಲ್ಲಿ ಕಳೆದ ವರ್ಷ ಆಗಸ್ಟ್‌ ತಿಂಗಳೊಂದರಲ್ಲಿ 565.3 ಮಿ.ಮೀ. ಮಳೆಯಾಗಿತ್ತು. ಆದರೆ ಈ ವರ್ಷ 1,118.9 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಆಗಸ್ಟ್‌ನಲ್ಲಿ 553.6 ಮಿ.ಮೀ. ಮಳೆ ಹೆಚ್ಚಳವಾಗಿದೆ. ಜಿಲ್ಲೆಯಲ್ಲಿ ಪೂರ್ವ ಮುಂಗಾರು ಕೂಡ ಉತ್ತಮವಾಗಿತ್ತು. (ಜನವರಿ- ಮೇ) ಜಿಲ್ಲೆಯ 5 ತಾಲೂಕುಗಳಲ್ಲಿ ಪೂರ್ವ ಮುಂಗಾರು ವೇಳೆ ಒಟ್ಟು 450.2 ಮಿ. ಮೀ.ಗಳಷ್ಟು ವಾಡಿಕೆ ಮಳೆಯಾಗಬೇಕಿತ್ತು. ಆದರೆ ಒಟ್ಟು 634.7 ಮಿ.ಮೀ. ಮಳೆ ಸುರಿದಿದೆ. 

ಉಷ್ಣಾಂಶ ಕಡಿಮೆಯಾಗುವ ಸಾಧ್ಯತೆ
ಹವಾಮಾನ ಇಲಾಖೆಯ ಅಧಿಕಾರಿಗಳ ಪ್ರಕಾರ, ಮುಂದಿನ ಮೂರು ದಿನಗಳಲ್ಲಿ ದ.ಕ. ಜಿಲ್ಲೆಯಲ್ಲಿ ಉತ್ತಮ ಮಳೆಯಾಗಲಿದೆ. ಈ ವೇಳೆ ವಾತಾವರಣದಲ್ಲಿ ಉಷ್ಣಾಂಶ ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಇದೆ. ಹವಾಮಾನ ಇಲಾಖೆ ನೀಡಿರುವ ಅಂಕಿ ಅಂಶದ ಪ್ರಕಾರ ಜಿಲ್ಲೆಯಲ್ಲಿ ಆಗಸ್ಟ್‌ ತಿಂಗಳಿನಲ್ಲಿ 1982ರ 24ರಂದು ಅತೀ ಕಡಿಮೆ ಉಷ್ಣಾಂಶ ಅಂದರೆ 20.1 ಡಿ.ಸೆ. ದಾಖಲಾಗಿತ್ತು. 

ರಾಜ್ಯದಲ್ಲಿ ಶೇ.13 ಮಳೆ ಹೆಚ್ಚಳ 
ರಾಜ್ಯದಲ್ಲಿ ಒಟ್ಟು 30 ಜಿಲ್ಲೆಗಳನ್ನು ಸೇರಿ ಜನವರಿಯಿಂದ ಆಗಸ್ಟ್‌ 25ರ ವರೆಗೆ 775 ಮಿ.ಮೀ. ವಾಡಿಕೆ ಮಳೆಯಾಗಬೇಕಿತ್ತು. ಆದರೆ ಸದ್ಯ 877 ಮಿ.ಮೀ. ಮಳೆಯಾಗಿದ್ದು, ವಾಡಿಕೆ ಮಳೆಗಿಂತ ಶೇ.13ರಷ್ಟು ಮಳೆ ಹೆಚ್ಚಳವಾಗಿದೆ.

Advertisement

ಈ ಬಾರಿ ಉತ್ತಮ ಮಳೆ
ಕರಾವಳಿ ಪ್ರದೇಶಗಳಲ್ಲಿ ಈ ಬಾರಿ ಮಳೆ ಪ್ರಮಾಣ ಉತ್ತಮವಾಗಿದೆ. ಸದ್ಯ ಪಶ್ಚಿಮ ಬಂಗಾಳದ ಉತ್ತರ ಭಾಗದಲ್ಲಿ ವಾಯು ಭಾರ ಕುಸಿತವಾಗಿದ್ದು, ಮುಂದಿನ 3 ದಿನ ಉತ್ತಮ ಮಳೆಯಾಗಬಹುದು.
– ಜಿ.ಎಸ್‌. ಶ್ರೀನಿವಾಸ ರೆಡ್ಡಿ,
ಕೆಎಸ್‌ಎನ್‌ಡಿಎಂಸಿ ನಿರ್ದೇಶಕ

ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next