ಚೆನ್ನೈ/ನವದೆಹಲಿ: ಎಐಎಡಿಎಂಕೆ ಪಕ್ಷದಿಂದ ಉಚ್ಛಾಟನೆಗೊಂಡಿರುವ ವಿ.ಕೆ.ಶಶಿಕಲಾ ಅವರಿಗೆ ಸೇರಿರುವ ಸುಮಾರು 100 ಕೋಟಿ ರೂಪಾಯಿ ಮೌಲ್ಯದ ಹನ್ನೊಂದು ಆಸ್ತಿಗಳನ್ನು ಆದಾಯ ತೆರಿಗೆ ಇಲಾಖೆ ಜಪ್ತಿ ಮಾಡಿರುವುದಾಗಿ ಮೂಲಗಳು ತಿಳಿಸಿರುವುದಾಗಿ ವರದಿ ಹೇಳಿದೆ.
ಇದನ್ನೂ ಓದಿ:ಮುಂಬಯಿ ಷೇರುಪೇಟೆ ಸೆನ್ಸೆಕ್ಸ್, ನಿಫ್ಟಿ ಕುಸಿತ; ನಷ್ಟ ಅನುಭವಿಸಿದ ನೆಸ್ಲೆ, ಮಾರುತಿ ಷೇರುಗಳು
ತಮಿಳುನಾಡಿನ ಪಯನೂರು ಗ್ರಾಮದಲ್ಲಿರುವ 24 ಎಕರೆ ಸ್ಥಳವೂ ಸೇರಿದ್ದು, ಇದನ್ನು 1991ರಿಂದ 1996ರವರೆಗೆ ಜಯಲಲಿತಾ ಮುಖ್ಯಮಂತ್ರಿಯಾಗಿದ್ದಾಗ ಶಶಿಕಲಾ ಖರೀದಿಸಿರುವುದಾಗಿ ವರದಿ ವಿವರಿಸಿದೆ.
2014ರಲ್ಲಿ ಕರ್ನಾಟಕದ ವಿಶೇಷ ನ್ಯಾಯಾಲಯದ ಮಾಜಿ ನ್ಯಾಯಾಧೀಶರಾದ ಜಾನ್ ಮೈಕೇಲ್ ಕುನ್ಹಾ ಅವರು ನೀಡಿದ್ದ ತೀರ್ಪಿನಲ್ಲಿ ಅಕ್ರಮ ಆಸ್ತಿ ಗಳಿಕೆಯಲ್ಲಿ ಜಯಲಲಿತಾ, ಆಕೆ ಆಪ್ತ ಸಹಾಯಕಿ ಶಶಿಕಲಾ, ಸಂಬಂಧಿಗಳಾದ ಇಳವರಸಿ, ಸುಧಾಕರನ್ ಗೆ ಸೇರಿರುವ 11 ಆಸ್ತಿಗಳನ್ನು ಪಟ್ಟಿ ಮಾಡಿದ್ದರು.
1990ರಲ್ಲಿ ಈ ಆಸ್ತಿಯನ್ನು ಖರೀದಿಸಿದ ವೇಳೆ ಇದರ ಮೌಲ್ಯ ಅಂದಾಜು 20 ಲಕ್ಷ ಇದ್ದಿರಬಹುದು, ಆದರೆ ಪ್ರಸಕ್ತ ಈ ಆಸ್ತಿಯ ಮೌಲ್ಯ ಸುಮಾರು 100 ಕೋಟಿ ರೂಪಾಯಿಯದ್ದಾಗಿದೆ ಎಂದು ವರದಿ ತಿಳಿಸಿದೆ. 2014ರಲ್ಲಿ ನ್ಯಾಯಾಲಯ ನೀಡಿರುವ ತೀರ್ಪಿನ ಪ್ರಕಾರ, ಆದಾಯ ತೆರಿಗೆ ಇಲಾಖೆ ಬೇನಾಮಿ ಆಸ್ತಿ ವಹಿವಾಟು ನಿಷೇಧ ಕಾಯ್ದೆಯಡಿ ಆಸ್ತಿಯನ್ನು ಜಪ್ತಿ ಮಾಡಿರುವುದಾಗಿ ಹೇಳಿದೆ.
ಭ್ರಷ್ಟಾಚಾರ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಾಲ್ಕು ವರ್ಷ ಜೈಲುಶಿಕ್ಷೆ ಅನುಭವಿಸಿದ್ದ ನಂತರ ಶಶಿಕಲಾ ಬಿಡುಗೊಂಡು ತಮಿಳುನಾಡಿಗೆ ವಾಪಸ್ ಹೋಗಿದ್ದ ಸಂದರ್ಭದಲ್ಲಿ ಬೆಂಬಲಿಗರು ಅದ್ದೂರಿಯಾಗಿ ಸ್ವಾಗತಿಸಿದ್ದರು.