ಚೆನ್ನೈ: ದೇಶದಲ್ಲಿ ಕುತೂಹಲ ಕೆರಳಿಸಿರುವ ತಮಿಳುನಾಡು ಚುನಾವಣೆಯ ಮತದಾನ ಪ್ರಕ್ರಿಯೆ ಇಂದು ನಡೆಯುತ್ತಿದೆ. ಆದರೆ ಮತದಾರರ ಪಟ್ಟಿಯಲ್ಲಿ ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಆಪ್ತೆ, ವಿ.ಕೆ.ಶಶಿಕಲಾ ಅವರ ಹೆಸರು ತಪ್ಪಿ ಹೋಗಿದ್ದು, ಕಾನೂನು ಸಮರಕ್ಕೆ ಮುಂದಾಗಿದ್ದಾರೆ.
ಇತ್ತೀಚೆಗಷ್ಟೇ ರಾಜಕೀಯ ನಿವೃತ್ತಿ ಪಡೆದಿರುವ ವಿ.ಕೆ.ಶಶಿಕಲಾ ಅವರು ಇಂದು ಮತದಾನ ಮಾಡಬೇಕಿತ್ತು. ಆದರೆ ಮತದಾರರ ಪಟ್ಟಿಯಿಂದ ಚಿನ್ನಮ್ಮನ ಹೆಸರನ್ನು ತೆಗೆದು ಹಾಕಲಾಗಿದೆ. ಇದರಿಂದ ಆಕ್ರೋಶಗೊಂಡಿರುವ ಆಕೆ, ಈ ‘ಅನ್ಯಾಯ’ಕ್ಕೆ ಸಂಬಂಧಪಟ್ಟ ಅಧಿಕಾರಿಗಳು ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.
ಆದರೆ ಈ ಬಗ್ಗೆ ಮಾಹಿತಿ ನೀಡಿರುವ ಚುನಾವಣಾಧಿಕಾರಿಗಳು, ಇದರಲ್ಲಿ ಯಾವುದೇ ಪಿತೂರಿಯಿಲ್ಲ. ಮತದಾರರ ಪಟ್ಟಿಯಲ್ಲಿ ಹೆಸರು ಇದೆಯೇ ಇಲ್ಲವೋ ಎಂದು ಖಚಿತ ಪಡಿಸಿಕೊಳ್ಳುವುದು ಅವರ ಕರ್ತವ್ಯ ಎಂದಿದ್ದಾರೆ.
ವಿ.ಕೆ.ಶಶಿಕಲಾ ಅವರು ಈ ಹಿಂದೆ ಜಯಲಲಿತಾ ಅವರ ಪೋಯಸ್ ಗಾರ್ಡನ್ ನಿವಾಸದಲ್ಲಿ ನೆಲೆಸಿದ್ದರು. ಹೀಗಾಗಿ ಅವರು ಥೌಸಂಢ್ ಲೈಟ್ಸ್ ವಿಧಾನಸಭಾ ಕ್ಷೇತ್ರದಲ್ಲಿ ಮತದಾನದ ಹಕ್ಕು ಹೊಂದಿದ್ದರು. ಆದರೆ ಜಯಲಲಿತಾ ಮರಣಾನಂತರ ಆ ನಿವಾಸವನ್ನು ಸ್ಮಾರಕವನ್ನಾಗಿ ಮಾಡಲಾಗಿದೆ.
ಜೈಲುವಾಸ ಅನುಭವಿಸಿದ್ದ ಶಶಿಕಲಾ ಕಳೆದ ಜನವರಿಯಲ್ಲಿ ಬಿಡುಗಡೆಯಾಗಿದ್ದು, ರಾಜಕೀಯದಿಂದ ದೂರ ಸರಿಯುವುದಾಗಿ ಘೋಷಿಸಿದ್ದರು