ಚೆನ್ನೈ : ‘ಮಾಜಿ ಮುಖ್ಯಮಂತ್ರಿ ಓ ಪನ್ನೀರಸೆಲ್ವಂ ನನ್ನ ವಿರುದ್ಧ ಬಂಡೇಳುವುದರ ಹಿಂದೆ ಡಿಎಂಕೆ ಕೈವಾಡವಿದೆ’ ಎಂದು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ ಕೆ ಶಶಿಕಲಾ ಅವರು ಅತ್ಯಂತ ನಾಟಕೀಯ ವಿದ್ಯಮಾನದಲ್ಲಿ ಆರೋಪಿಸುವ ಮೂಲಕ ತಮ್ಮ ಮೌನವನ್ನು ಮುರಿದರು.
‘ಪಕ್ಷದ ಎಲ್ಲ ಶಾಸಕರು ಒಂದೇ ಕುಟುಂಬದ ರೀತಿ ಒಗ್ಗಟ್ಟಿನಿಂದ ಇದ್ದಾರೆ’ ಎಂದು ಶಶಿಕಲಾ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
‘ಪನ್ನೀರಸೆಲ್ವಂ ನನ್ನ ವಿರುದ್ಧ ಬಂಡೇಳುವಲ್ಲಿ ಡಿಎಂಕೆ ಕೈವಾಡವಿದೆ; ಇದಕ್ಕೆ ಸೆಲ್ವಂ ಮತ್ತು ಡಿಎಂಕೆ ಕಾರ್ಯಾಧ್ಯಕ್ಷ ಎಂ ಕೆ ಸ್ಟಾಲಿನ್ ನಡುವಿನ ಹೊಸ ದೋಸ್ತಿಯೇ ಕಾರಣವಾಗಿರುವುದು ಸ್ಪಷ್ಟವಿದೆ’ ಎಂದು ಶಶಿಕಲಾ ಹೇಳಿದರು.
ತನ್ನನ್ನು ಬಲವಂತದಿಂದ ಮತ್ತೆ ಬೆದರಿಕೆ ಒಡ್ಡಿ ಮುಖ್ಯಮಂತ್ರಿ ಪದದಿಂದ ಕೆಳಗಿಳಿಸಲಾಯಿತು ಎಂದು ಪನ್ನೀರಸೆಲ್ವಂ ಮಾಡಿರುವ ಆಪಾದನೆಯನ್ನು ತಿರಸ್ಕರಿಸಿದ ಶಶಿಕಲಾ, ‘ಇಂತಹ ಆರೋಪ ಮಾಡುವಂತೆ ಪನ್ನಿರಸೆಲ್ವಂ ಗೆ ಡಿಎಂಕೆ ಕುಮ್ಮಕ್ಕು ನೀಡಿದೆ’ ಎಂದು ಹೇಳಿದರು.
“ನೀವು ಶಾಸಕಾಂಗ ಪಕ್ಷದ ನಾಯಕಿಯಾಗಿ ಆಯ್ಕೆಯಾಗಿರುವ ಹೊರತಾಗಿಯೂ ರಾಜ್ಯಪಾಲ ವಿದ್ಯಾಸಾಗರ ರಾವ್ ಅವರು ನಿಮ್ಮ ಪದಗ್ರಹಣವನ್ನು ವಿಳಂಬಿಸುತ್ತಿದ್ದಾರೆ ಎಂದು ನಿಮಗನ್ನಿಸುತ್ತಿದೆಯೇ?’ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಶಶಿಕಲಾ, “ನಿಮ್ಮ ಅನ್ನಿಸಿಕೆಯೇ ನನ್ನ ಅನ್ನಿಸಿಕೆಯಾಗಿದೆ’ ಎಂದು ಚುರುಕಿನಿಂದ ಹೇಳಿದರು.
ಶಶಿಕಲಾ ಅವರು ತಮ್ಮ ನಿವಾಸದ ಹೊರಗೆ ಜಮಾಯಿಸಿದ್ದ ಪಕ್ಷದ ಬೆಂಬಲಿಗರತ್ತ ಎಐಎಡಿಎಂ ಪಕ್ಷದ ಎರಡೆಲೆಯ ಚಿಹ್ನೆಯನ್ನು ತೋರಿಸಿ ಬಳಿಕ ಒಡನೆಯೇ ಪತ್ರಿಕಾಗೋಷ್ಠಿ ಮುಗಿಸಿ ಒಳಗೆಹೋದರು.