Advertisement

ಬಿಜೆಪಿ ಯುವಮೋರ್ಚಾದಿಂದ ವಿವೇಕಾನಂದ ಜಯಂತಿ

02:30 PM Jan 13, 2018 | Team Udayavani |

ಬೆಳ್ತಂಗಡಿ: ದೇಶದ ತಾರುಣ್ಯವನ್ನು ಬಡಿದೆಬ್ಬಿಸಿದ ವಿವೇಕಾನಂದರ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕು. ಆಗ ಯುವಜನತೆ ದೇಶದ ಆಸ್ತಿಯಾಗಬಲ್ಲರು. ವಿವೇಕಾನಂದರು ಪ್ರತಿಪಾದಿಸಿದ ವಿಶ್ವಮಾನವ ಸಂದೇಶ ನಮ್ಮೆಲ್ಲರದ್ದಾಗಬೇಕು ಎಂದು ಜಿಲ್ಲಾ ಬಿಜೆಪಿ ವಕ್ತಾರ ಹರಿಕೃಷ್ಣ ಬಂಟ್ವಾಳ್‌ ಹೇಳಿದ್ದಾರೆ.

Advertisement

ಅವರು ಶುಕ್ರವಾರ ಇಲ್ಲಿನ ಸುವರ್ಣ ಆರ್ಕೇಡ್‌ನ‌ ಸಪ್ತಪದಿ ಸಭಾಂಗಣದಲ್ಲಿ ಬಿಜೆಪಿ ಯುವಮೋರ್ಚಾ ಬೆಳ್ತಂಗಡಿ ಮಂಡಲ ವತಿಯಿಂದ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ, ರಾಷ್ಟ್ರೀಯ ಯುವ ದಿನಾಚರಣೆ, ಯುವಭಾರತ ನವಭಾರತ ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣ ಮಾಡಿದರು.

ನಕಾರಾತ್ಮಕ ಚಿಂತನೆ ಬಿಡಿ. ವಿವೇಕಾನಂದರ ವಿಶ್ವಮಾನ್ಯ ಸಂದೇಶವನ್ನು ಅರ್ಥ ಮಾಡಿಕೊಳ್ಳಿ. ರಕ್ತಪಾತ ಬೇಡ. ಜಾತಿ, ಮತ, ಧರ್ಮ ಭೇದ ಬಿಟ್ಟು ಭಾರತೀಯರಾಗಲು ವಿವೇಕಾನಂದರ ವಿವೇಕದ ನುಡಿಗಳನ್ನು ಅಧ್ಯಯನ ಮಾಡಬೇಕು. ಆಗ ಕೋಮು ಸಾಮರಸ್ಯದ ಜಿಲ್ಲೆಯಾಗುತ್ತದೆ. ಅನ್ನ, ಜ್ಞಾನ, ನೀರು, ಗಾಳಿ, ಔಷಧ ಬದುಕಲು ಮುಖ್ಯ ವಿನಾ ರಾಜಕೀಯ, ಧರ್ಮ ಅಲ್ಲ. ಆದ್ದರಿಂದ ಮಹಾತ್ಮರು ಹೇಳಿದಂತೆ ಮನುಷ್ಯರಾಗಿ ಹುಟ್ಟಿದ ಬಳಿಕ
ಮನುಷ್ಯರಾಗಿ ಬದುಕಿ ಎಂದರು.

ಜಿಲ್ಲಾ ಬಿಜೆಪಿ ಸಹಪ್ರಭಾರಿ ಪ್ರತಾಪಸಿಂಹ ನಾಯಕ್‌ ಕಾರ್ಯಕ್ರಮ ಉದ್ಘಾಟಿಸಿ, ಹಿಂದುತ್ವದ ಅಗಾಧತೆ ವಿಶಾಲ ವಟವೃಕ್ಷದಂತೆ. ಸುಖ, ಶಾಂತಿ, ನೆಮ್ಮದಿ ನಮ್ಮೊಳಗೆಯೇ ಇದೆ ಎಂದು ತೋರಿಸಿಕೊಟ್ಟದ್ದು ಭಾರತೀಯತೆ. ಪರಧರ್ಮ ಸಹಿಷ್ಣುತೆ ಇಲ್ಲದಿದ್ದರೆ ಏಕಾತ್ಮತೆ ಬೋಧನೆ ಅಸಾಧು. ಅದರ ಪರಿಧಿ ಸಂಕುಚಿತವಾದಂತೆ ಆಗುತ್ತದೆ. ಧರ್ಮದ ಹೆಸರಿನಲ್ಲಿ ಕತ್ತಿ ಹಿಡಿದು ಹೋರಾಡುವ ಬದಲು ಅನ್ಯಾಯ, ತೊಂದರೆ ಆದಾಗ ಸಹನೆಯ ಮಿತಿಯನ್ನು ಕಾಯ್ದುಕೊಂಡು ಪ್ರತಿಭಟಿಸಬೇಕು. ಗುಡಿಯಲ್ಲಿರುವ ದೇವರ ಸೇವೆ ನಿಲ್ಲಿಸಿ ಕಷ್ಟದಲ್ಲಿರುವ ಬಡವರ ಸೇವೆ ಮಾಡಿ ಎಂಬ ವಿವೇಕಾನಂದರ ಮಾತುಗಳನ್ನು ಪಾಲಿಸಿ ಎಂದರು.

ಸವಣಾಲಿನ ಶ್ರೀ ರಾಮಕೃಷ್ಣ ಸೇವಾ ಸಮಿತಿಯ ಬಾಲಕೃಷ್ಣ ಶೆಟ್ಟಿ ಸಾಲಿಗ್ರಾಮ ಅವರು ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ತಾಲೂಕು ಅಧ್ಯಕ್ಷ ರಂಜನ್‌ ಜಿ. ಗೌಡ, ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಹರೀಶ್‌ ಪೂಂಜ, ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ರಕ್ಷಿತ್‌ ಶೆಟ್ಟಿ, ಕಾರ್ಯಕ್ರಮ ಸಂಯೋಜಕ ಸುಧಾಕರ ಗೌಡ, ಕರುಣಾಕರ ಬಡಕೋಡಿ, ಜಿ.ಪಂ. ಸದಸ್ಯೆ ಮಮತಾ ಎಂ. ಶೆಟ್ಟಿ, ತಾ.ಪಂ. ಉಪಾಧ್ಯಕ್ಷೆ ವೇದಾವತಿ, ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಪ್ರಭಾಕರ ಶೆಟ್ಟಿ ಉಪ್ಪಡ್ಕ ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಘಟಕ, ತಾಲೂಕು ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಸಂಪತ್‌ ಬಿ.
ಸುವರ್ಣ ಸ್ವಾಗತಿಸಿ, ರಾಜೇಶ್‌ ಪೆಂರ್ಬುಡ ಕಾರ್ಯಕ್ರಮ ನಿರ್ವಹಿಸಿದರು.

Advertisement

ಸಹಾಯನಿಧಿ, ಪುರಸ್ಕಾರ
ಕಾರ್ಯಕ್ರಮದಲ್ಲಿ ಶಿರ್ಲಾಲು ಗ್ರಾಮದ ವಿಟ್ಠಲ ಆಚಾರ್ಯ ಕುಟುಂಬಕ್ಕೆ ಸಹಾಯನಿಧಿ ನೀಡಲಾಯಿತು. ಕಾಟಿಪಳ್ಳದ ದೀಪಕ್‌ ರಾವ್‌ ಕುಟುಂಬಕ್ಕೆ ನಿಧಿ ಸಂಗ್ರಹಿಸಲಾಯಿತು. ತಾಲೂಕಿನ 25 ಯುವ ಸಂಘಟನೆಗಳಿಗೆ ಯುವ ಸಾಧನಾ ಭೂಷಣ ಪುರಸ್ಕಾರ ನೀಡಲಾಯಿತು. ಹರಿಕೃಷ್ಣ ಬಂಟ್ವಾಳ್‌ ಅವರು ಬಿಜೆಪಿ ವಕ್ತಾರರಾಗಿ ನೇಮಕಗೊಂಡ ಪ್ರಯುಕ್ತ ಅವರನ್ನು ಸಮ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next