ವಿಟ್ಲ : ಗೋವುಗಳ 97 ತಳಿಗಳನ್ನು ಹೊಂದಿದ್ದ ಭಾರತದಲ್ಲಿ ಇಂದು 37 ತಳಿ ಉಳಿದುಕೊಂಡಿದೆ. ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಗೋತಳಿ ಸಂರಕ್ಷಿಸುವ ಯೋಜನೆ ದೇಶವನ್ನು ಸಂರಕ್ಷಿಸಬಲ್ಲುದು. ಗೋಸ್ವರ್ಗ ಆರಂಭಿಸುವ ಮೂಲಕ ದೇಸೀ ಗೋವುಗಳನ್ನು ಉಳಿಸುವ ಅವರ ಸಾಹಸ ಜತೆಗೆ ನಾವು ಸೇರಿಕೊಳ್ಳಬೇಕು. ಗೋವನ್ನು ಸಾಕಿ ಪ್ರೀತಿಸಿದವರಿಗೆ ಮಾತ್ರ ಗೋಲೋಕ ಕಾಣಲು ಸಾಧ್ಯ ಎಂದು ಕಿನ್ನಿಗೋಳಿ ಶ್ರೀಶಕ್ತಿದರ್ಶನ ಯೋಗಾಶ್ರಮದ ಯೋಗಾಚಾರ್ಯ ದೇವಬಾಬಾ ಹೇಳಿದರು.
ಅವರು ಮಂಗಳವಾರ ವಿಟ್ಲದ ವಿಠ್ಠಲ ಪ.ಪೂ. ಕಾಲೇಜು ಸುವರ್ಣ ರಂಗಮಂದಿರದಲ್ಲಿ ವಿಟ್ಲ ವಿಶ್ವಮಾತಾ ಗೋಮಾತಾ ಸಮಿತಿ ವತಿಯಿಂದ ನಡೆದ 40ನೇ ಬಹುಮಾಧ್ಯಮ ಬಳಕೆಯ ವಿನೂತನ ಶೈಲಿಯ ನೃತ್ಯ ನಾಟಕ ವಿಶ್ವ ಮಾತಾ ಗೋಮಾತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಂಗಳೂರು ಬಂದರು ಶ್ರೀ ವೈಕುಂಠಂ ಫಾಮ್ಸ್ì ಮಾಲಕ ಕೆ. ಅನಂತ ಕಾಮತ್ ಮಾತನಾಡಿ, ಜರ್ಸಿ – ಎಚ್ ಎಫ್ ದನಗಳು ಗೋವಿನ ಆಕಾರದ ಪ್ರಾಣಿ ಅಷ್ಟೇ. ವಿದೇಶೀ ದನದ ಎ1 ಹಾಲಿನಿಂದ ಕ್ಯಾನ್ಸರ್ ಮತ್ತಿತರ ರೋಗ ಬರುತ್ತವೆ. ಆರೋಗ್ಯ ಕಾಪಾಡಲು ದೇಸೀ ಗೋವಿನ ಹಾಲನ್ನು ಸೇವಿಸಬೇಕು. ಆಮದು ಮಾಡಲು 6.5 ಲಕ್ಷ ಕೋಟಿ ರೂ. ಔಷಧಕ್ಕೆ, 7 ಲಕ್ಷ ಕೋಟಿ ರೂ. ಯೂರಿಯಾ ಗೊಬ್ಬರಕ್ಕೆ ಖರ್ಚು ಮಾಡುತ್ತೇವೆ. ಒಟ್ಟು 21 ಲಕ್ಷ ಕೋಟಿ ರೂ.ಗಳಿಗಿಂತ ಹೆಚ್ಚು ಮೊತ್ತವನ್ನು ನಾವು ನಮ್ಮ ದೇಶದಲ್ಲೇ ಗೋವನ್ನು ಸಾಕಿ ಉಳಿಸಿಕೊಳ್ಳಬಹುದು. ಗೋಮೂತ್ರಕ್ಕೆ ಕ್ಯಾನ್ಸರ್ ಗುಣಪಡಿಸುವ ಔಷಧೀಯ ಗುಣವಿದೆ. ತನ್ನ ತಂದೆಗೆ ಆ ರೋಗ ಗುಣವಾಗಿದೆ ಎಂದರು.
ಕಾಲ್ನಡಿಗೆಯಲ್ಲಿ ವಿಶ್ವ ಪರ್ಯಟನೆ ಮಾಡಿದ ಸೀತಾರಾಮ ಕೆದಿಲಾಯ, ವಿಠ್ಠಲ ವಿದ್ಯಾಸಂಘದ ಸಂಚಾಲಕ ಎಲ್.ಎನ್. ಕೂಡೂರು, ವಿಠ್ಠಲ ಪ.ಪೂ. ಕಾಲೇಜು ಪ್ರಾಂಶುಪಾಲ ಆದರ್ಶ ಚೊಕ್ಕಾಡಿ ಉಪಸ್ಥಿತರಿದ್ದರು. ವಿಟ್ಲ ವಿಶ್ವಮಾತಾ ಗೋಮಾತಾ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಪೈ ಸ್ವಾಗತಿಸಿ, ವಂದಿಸಿದರು.
ಹೆಚ್ಚಿನ ಅವಕಾಶ
ದೇಸೀ ಗೋವನ್ನು ವಧಿಸುವುದೆಂದರೆ ಮಹಾಪುರುಷರ ಮೇಲೆ ದಾಳಿ ಮಾಡಿದ ಹಾಗೆ. ಮಕ್ಕಳನ್ನು ಪ್ರೀತಿಸುವವರು ದೇಸೀ ಗೋವಿನ ಹಾಲನ್ನು ನೀಡಬೇಕು. ಬ್ರಿಟಿಷ್/ ಆಸ್ಟ್ರೇಲಿಯ ದನಗಳು ನೀಡುವ ಹಾಲು ಆರೋಗ್ಯಕ್ಕೆ ಹಿತಕರವಲ್ಲ. ಕಪಿಲ ಗೋವು ಜಗತ್ತಿನ ಶ್ರೇಷ್ಠ ಗೋವು. ಕೇರಳದಲ್ಲಿ ಶ್ರೀಕೃಷ್ಣನ ಗೋವು ಇಲ್ಲದ ಕಾರಣ ಹೆಚ್ಚು ರೋಗಗಳು ಪತ್ತೆಯಾಗುತ್ತಿವೆ.
– ಯೋಗಾಚಾರ್ಯ ದೇವಬಾಬಾ
ಶ್ರೀಶಕ್ತಿದರ್ಶನ ಯೋಗಾಶ್ರಮ