Advertisement

ವಿಟ್ಲ: ದನ ಕಳ್ಳ ಸಾಗಣೆ ವಿರೋಧಿಸಿ ಜನಜಾಗೃತಿ ಪ್ರತಿಭಟನ ಸಭೆ

10:34 AM Dec 20, 2017 | |

ವಿಟ್ಲ: ಅಪರಾಧ ತಡೆಯುವುದು ಪೊಲೀಸ್‌ ಇಲಾಖೆಯ ಕರ್ತವ್ಯ. ಆದರೆ ಇದು ಆಗುತ್ತಿಲ್ಲ. ರಾಜಕೀಯ ಶಕ್ತಿಗಳ ಒತ್ತಡ ಅಧಿಕಾರಿಗಳನ್ನು ಕೈಕಟ್ಟಿ ಕುಳಿತುಕೊಳ್ಳುವಂತೆ ಮಾಡಿದೆ. ಅಸಾಧ್ಯವೆಂದು ಒಪ್ಪಿಕೊಂಡು ಇಲಾಖೆ ಗೋವುಗಳ ರಕ್ಷಣೆಯ ಜವಾಬ್ದಾರಿ ನಮಗೆ ವಹಿಸಿಕೊಡಲಿ. ಯಾವುದೇ ಗೋವುಗಳು ಸಾಯದಂತೆ ನಾವು ನೋಡಿಕೊಳ್ಳುತ್ತೇವೆ. ಆದರೆ ಸಂರಕ್ಷಿಸುವ ಕಾರ್ಯಕರ್ತರ ಮೇಲೆ 307 ಪ್ರಕರಣ ದಾಖಲಿಸಿ, ಅಕ್ರಮ ಗೋ ಸಾಗಾಟ ಮಾಡುವವರಿಗೆ, ಅಕ್ರಮ ಕಸಾಯಿಖಾನೆ ನಡೆಸುತ್ತಿರುವವರಿಗೆ ಕೇವಲ 300 ರೂ. ದಂಡ ವಿಧಿಸಿ ಅವರನ್ನು ಬಿಟ್ಟು ಬಿಡುವ ಪ್ರವೃತ್ತಿ ನಡೆಯುತ್ತಿದೆ ಎಂದು ಬಜರಂಗದಳ ಪ್ರಾಂತ ಗೋರಕ್ಷಾ ಪ್ರಮುಖ್‌ ಮುರಳೀಕೃಷ್ಣ ಹಸಂತಡ್ಕ ತಿಳಿಸಿದರು. ಅವರು ಮಂಗಳವಾರ ವಿಟ್ಲ ಹಳೆ ಬಸ್‌ ನಿಲ್ದಾಣದಲ್ಲಿ ವಿಟ್ಲ ವಲಯದ 26 ಹಾಲು ಸೊಸೈಟಿಗಳ ಸದಸ್ಯರು ಹಾಗೂ ಸಾರ್ವಜನಿಕರ ವತಿಯಿಂದ ಏರ್ಪಡಿಸಿದ ದನ ಕಳ್ಳ ಸಾಗಣೆ ವಿರೋಧಿಸಿ ಜನಜಾಗೃತಿ ಮತ್ತು ಪ್ರತಿಭಟನ ಸಭೆಯಲ್ಲಿ ಮಾತನಾಡಿದರು.

Advertisement

ಚಂದಳಿಕೆ, ಅಳಿಕೆ, ಪುತ್ತೂರಿನಲ್ಲಿ ಗೋವುಗಳನ್ನು ಹಟ್ಟಿಯಿಂದ ಕದ್ದೊಯ್ಯುವ ದುಸ್ಸಾಹಸ ನಡೆಸುತ್ತಿದ್ದಾರೆ. ಕೃಷಿ ಕಾರ್ಯಕ್ಕಾಗಿ ನೂರಾರು ಗೋವುಗಳನ್ನು ಸಾಕಿ, ಸಲಹಿ, ಹೈನುಗಾರಿಕೆಯ ಮೂಲಕ ಜೀವನ ಸಾಗಿಸುವವರಿಗೆ ಆಗುತ್ತಿರುವ ಅನ್ಯಾಯವನ್ನು ಸರಕಾರ ತಡೆಯಬೇಕು. ದೇಶಕ್ಕೆ ಬ್ರಿಟಿಷರು ಕಸಾಯಿಖಾನೆಗಳನ್ನು ಕೊಡುಗೆಯಾಗಿ ನೀಡುವ ಮೂಲಕ ಗೋ ಸಂಪತ್ತನ್ನು ನಾಶ ಮಾಡುವ ಮೂಲಕ ದೇಶವನ್ನು ನಾಶಪಡಿಸುವ ಕೃತ್ಯ ಮಾಡಿದ್ದಾರೆ ಎಂದರು.

ದ.ಕ. ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಸುಚರಿತ ಶೆಟ್ಟಿ ಮಾತನಾಡಿ ಹೆತ್ತ ತಾಯಿ, ಹೊತ್ತ ಭೂಮಿ, ಹಾಲುಕೊಡುವ ಗೋವನ್ನು ಪೂಜಿಸುವಂತಹ ಭವ್ಯ ಭಾರತದ ಪ್ರಜೆಗಳು ನಾವಾಗಿದ್ದೇವೆ. ಆದರೆ ಇಂದು ಈ ವಿಷಯವನ್ನು ಪ್ರಸ್ತಾವ ಮಾಡಿದರೆ ಕೋಮುವಾದಿಗಳಾಗುತ್ತೇವೆ. ರಾಜಕೀಯ ಕಾರಣದಿಂದಲೇ ಹಟ್ಟಿಯಿಂದ ಗೋವುಗಳನ್ನು ದುರುಳರು ಕೊಂಡೊಯ್ಯುವ ಕಾರ್ಯವಾಗುತ್ತಿದೆ. ಅವಿಭಜಿತ ಜಿಲ್ಲೆಯಲ್ಲಿ 750ಕ್ಕೂ ಹೆಚ್ಚು ಹಾಲು ಉತ್ಪಾದಕರ ಸಂಸ್ಥೆಗಳಿದ್ದು, ಲಕ್ಷಾಂತರ ಹೈನುಗಾರರಿದ್ದಾರೆ. ಜಿಲ್ಲಾಡಳಿತ ಇವರ ಕಷ್ಟ ಅರಿತುಕೊಳ್ಳಬೇಕು. ವಿಟ್ಲದಲ್ಲಿ ಸಾಂಕೇತಿಕ ಪ್ರತಿಭಟನೆ ಆಯೋಜಿಸಲಾಗಿದ್ದು, ಆಡಳಿತ ವ್ಯವಸ್ಥೆ ಎಚ್ಚರಗೊಳ್ಳದೆ ಇದ್ದರೆ ಜಿಲ್ಲಾ ಮಟ್ಟದಲ್ಲಿ ಎಲ್ಲ ಹೈನುಗಾರರು ಒಟ್ಟಾಗಿ ಪ್ರತಿಭಟಿಸಬೇಕಾದೀತು ಎಂದು ಎಚ್ಚರಿಸಿದರು.

ಡಾ| ಕೃಷ್ಣ ಭಟ್‌ ಕೊಂಕೋಡಿ ಅಧ್ಯಕ್ಷತೆವಹಿಸಿ, ಮಾತನಾಡಿ ಗೋವು ಮತ್ತು ಭಗವದ್ಗೀತೆ ನಮ್ಮ ಎರಡು ಕಣ್ಣುಗಳಿದ್ದ ಹಾಗೆ. ಆಳುವವರು ಜನಸಾಮಾನ್ಯರನ್ನು ನಿರ್ಲಕ್ಷ್ಯ ಮಾಡಿದಾಗ ಸಂವಿಧಾನ ಕೊಟ್ಟ ಅಧಿಕಾರವಾದ ಪ್ರತಿಭಟನೆ ಅನಿವಾರ್ಯವಾಗುತ್ತದೆ. ಧರ್ಮ ಯಾವುದು ಎಂದು ತಿಳಿದಿದ್ದೂ ಆಚರಣೆ ಮಾಡಲಾಗುತ್ತಿಲ್ಲ. ಮುಖ್ಯಮಂತ್ರಿ, ಜಿಲ್ಲೆಯ ಉಸ್ತುವಾರಿ ಸಚಿವರು ಕಾನೂನು ಕೈಗೆತ್ತಿಕೊಳ್ಳುವ ಅಕ್ರಮ ಗೋಸಾಗಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ವೆಂಕಟೇಶ್ವರ ಅಮೈ, ಜಗನ್ನಾಥ ಕಾಸರಗೋಡು, ಡಾ| ರಮಾನಂದ ಶೆಟ್ಟಿ, ವಿಟ್ಲ ಪ.ಪಂ.ಅಧ್ಯಕ್ಷ ಅರುಣ ಎಂ. ವಿಟ್ಲ, ಸ್ಥಾಯೀ ಸಮಿತಿ ಅಧ್ಯಕ್ಷ ರಾಮದಾಸ ಶೆಣೈ, ಸದಸ್ಯರಾದ ಲೋಕನಾಥ ಶೆಟ್ಟಿ ಕೊಲ್ಯ, ಶ್ರೀಕೃಷ್ಣ ವಿಟ್ಲ, ವಿಟ್ಲಮುಟ್ನೂರು ಗ್ರಾ.ಪಂ.ಅಧ್ಯಕ್ಷೆ ಪ್ರೇಮಲತಾ, ವಿಟ್ಲ ನಗರ ಬಿಜೆಪಿ ಅಧ್ಯಕ್ಷ ಮೋಹನದಾಸ ಉಕ್ಕುಡ, ವಿಟ್ಲ ಪ್ರಖಂಡ ಬಜರಂಗ ದಳದ ಸಂಚಾಲಕ ಜಯಂತ ಸಿ.ಎಚ್‌. ವಿಟ್ಲ, ಸಂಕಪ್ಪ ಗೌಡ, ಪದ್ಮನಾಭ ಕಟ್ಟೆ, ಭಾರತೀಯ ಗೋ ಪರಿವಾರದ ಶೈಲಜಾ ಕೆ.ಟಿ. ಭಟ್‌, ಸವಿತಾ ಎಸ್‌. ಭಟ್‌ ಅಡ್ವಾಯಿ, ಜಯರಾಮ ಬಲ್ಲಾಳ್‌ ವಿಟ್ಲ ಅರಮನೆ, ಚಂದ್ರಶೇಖರ ಭಟ್‌ ಪಡಾರು, ಚರಣ್‌ ಕಾಪುಮಜಲು, ಜಗದೀಶ ಪಾಣೆಮಜಲು, ಯತೀಶ್‌ ಪೆರುವಾಯಿ, ಬೊಳಂತಿಮೊಗರು ಮಹಿಳಾ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷೆ ದೇವಕಿ ಮತ್ತು ಒಟ್ಟು 22 ಹಾಲು ಸೊಸೈಟಿಗಳ ಅಧ್ಯಕ್ಷರು, ನಿರ್ದೇಶಕರು ಉಪಸ್ಥಿತರಿದ್ದರು. ವಿಟ್ಲ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಮೋಹನ ಕಾಯರ್‌ಮಾರ್‌ ಸ್ವಾಗತಿಸಿದರು. ಗೋವರ್ಧನ್‌ ಕುಮಾರ್‌ ಇಡ್ಯಾಳ ವಂದಿಸಿದರು. ರಮೇಶ್‌ ಧರ್ಮನಗರ ಕಾರ್ಯಕ್ರಮ ನಿರೂಪಿಸಿದರು.

Advertisement

ಭಾರತೀಯ ಗೋ ತಳಿಯ ಶ್ರೇಷ್ಠತೆಯ ಬಗ್ಗೆ ವಿದೇಶೀ ವಿಜ್ಞಾನಿಗಳು ಹೇಳುವ ಸ್ಥಿತಿ ನಿರ್ಮಾಣವಾಗಿದೆ. ಗೋಮಾತೆಯ ಉಳಿವಿಗೋಸ್ಕರ ಈ ದೇಶದಲ್ಲಿ ಮತ್ತೆ ಸ್ವಾತಂತ್ರ್ಯ ಹೋರಾಟ ನಡೆಯಬೇಕಾದೀತು ಎನ್ನುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ನಿತ್ಯ ನಿರಂತರ ಆಕ್ರಮಣಗಳು ನಡೆಯುತ್ತಿದ್ದರೆ ಸುಮ್ಮನೆ ಕೂರಲು ಸಾಧ್ಯವಿಲ್ಲ.
– ಮುರಳೀಕೃಷ್ಣ ಹಸಂತಡ್ಕ

Advertisement

Udayavani is now on Telegram. Click here to join our channel and stay updated with the latest news.

Next