Advertisement

ವಿಟ್ಲ ಜಂಕ್ಷನ್‌ : ಕಾಂಗ್ರೆಸ್‌ ವಿಜಯೋತ್ಸವ

02:28 PM Apr 14, 2017 | Team Udayavani |

ವಿಟ್ಲ: ನಂಜನಗೂಡು ಹಾಗೂ ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಗೆಲುವು ಸಾಧಿಸಿದ್ದಕ್ಕಾಗಿ ವಿಟ್ಲದ ನಾಲ್ಕು ಮಾರ್ಗ ಸೇರುವ ಜಂಕ್ಷನ್‌ನಲ್ಲಿ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.

Advertisement

ಈ ಸಂದರ್ಭ ಮಾತನಾಡಿದ ಜಿ.ಪಂ. ಸದಸ್ಯ ಎಂ.ಎಸ್‌.ಮಹಮ್ಮದ್‌ ಅವರು ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭೂತಪೂರ್ವ ಗೆಲುವು ಪಡೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನಪರ ಕಾರ್ಯಗಳಿಗೆ ಮತದಾರ ಪ್ರಭುಗಳು ಶಕ್ತಿ ತುಂಬಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಗೆ ಈ ಫಲಿತಾಂಶ ದಿಕ್ಸೂಚಿಯಾಗಿದ್ದು, ಮತ್ತೆ ಕರ್ನಾಟಕದಲ್ಲಿ ಸಿದ್ದರಾಮಯ್ಯ ಅವರ ಸರಕಾರ  ಆಡಳಿತ ನಡೆಸಲಿದೆ. ವಿಪಕ್ಷದ ಯಾವುದೇ ಷಡ್ಯಂತ್ರಗಳು ನಡೆಯುವುದಿಲ್ಲ. ಎಸ್‌.ಎಂ.  ಕೃಷ್ಣ ಅವರು ದೇಶದಲ್ಲಿ ಕಾಂಗ್ರೆಸ್‌ ಪಕ್ಷ ಎಲ್ಲೆಲ್ಲ ಇದೆ ಎಂದು ಹುಡುಕಬೇಕು ಎಂದು ಹೇಳಿಕೆ ನೀಡಿದ್ದು, ಕೃಷ್ಣ ಅವರು ಎಲ್ಲೆಲ್ಲ ಹುಡುಕುವುದು ಬೇಡ. 

ನಂಜನಗೂಡು ಹಾಗೂ ಗುಂಡ್ಲು ಪೇಟೆಗೆ ಬಂದರೆ ಸಾಕು ಎಂದು ಅವರು ತಿರುಗೇಟು ನೀಡಿದರು. ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಭದ್ರವಾಗಿ ನೆಲೆಯೂರಿದೆ ಎಂಬುದನ್ನು ಕೃಷ್ಣ ಅವರು ಅರ್ಥಮಾಡಿಕೊಳ್ಳಬೇಕು. ತನ್ನನ್ನು ಮುಖ್ಯಮಂತ್ರಿ ಮಾಡಿದ ಪಕ್ಷವನ್ನು ಕೃಷ್ಣ ಅವರು ಕಡೆಗಣಿಸಬಾರದು ಎಂದರು.

ವಿಟ್ಲ ಪಟ್ಟಣ ಪಂಚಾಯತ್‌ ನಾಮನಿರ್ದೇಶಿತ ಸದಸ್ಯ ವಿ.ಎಚ್‌.ಸಮೀರ್‌ ಪಳಿಕೆ, ಕಾಂಗ್ರೆಸ್‌ ಮುಖಂಡರಾದ ಪ್ರಭಾಕರ್‌ ಭಟ್‌ ಮಾವೆ, ಎಲ್ಯಣ್ಣ ಪೂಜಾರಿ ಕುಂಡಡ್ಕ, ಸಿದ್ದೀಕ್‌ ಸರವು, ಅಬ್ದುಲ್‌ ರಹಿಮಾನ್‌ ಕುರುಂಬಳ, ಉಮ್ಮರ್‌ ಕೊಡಂಗೆ ಮೊದಲಾದವರು ಉಪಸ್ಥಿತರಿದ್ದರು.
 

Advertisement

Udayavani is now on Telegram. Click here to join our channel and stay updated with the latest news.

Next