Advertisement
ಬಂಟ್ವಾಳ ತಾಲೂಕಿನ ವಿಟ್ಲ ಪೊಲೀಸ್ ಠಾಣೆ ವ್ಯಾಪ್ತಿಯ ಬೋಳಂತೂರು ಸಮೀಪದ ನಾರ್ಶ ಎಂಬಲ್ಲಿನ ನಿವಾಸಿ ಸುಲೈಮಾನ್ ಹಾಜಿ ಎಂಬವರು ಸಿಂಗಾರಿ ಬೀಡಿ ಸಂಸ್ಥೆಯನ್ನು ಅನೇಕ ವರ್ಷಗಳಿಂದ ನಡೆಸುತ್ತಿದ್ದಾರೆ. ಶುಕ್ರವಾರ ತಡರಾತ್ರಿ ಅವರ ಮನೆಗೆ ತಮಿಳುನಾಡು ಮೂಲದ ಕಾರಿನಲ್ಲಿ ಆಗಮಿಸಿದ ತಂಡವೊಂದು ದಾಳಿ ನಡೆಸಿದಂತೆ ನಟಿಸಿದೆ. ನಾವು ಇಡಿ ಅಧಿಕಾರಿಗಳು ಎಂದು ನಂಬಿಸಿ ಸುಮಾರು ಎರಡು ಗಂಟೆಗಳ ವರೆಗೆ ತನಿಖೆ ನಡೆಸಿದ ನಾಟಕ ಮಾಡಿ ಮನೆಯಲ್ಲಿ ಸಿಕ್ಕಿದ ಸುಮಾರು 30 ಲಕ್ಷ ರೂಪಾಯಿಗಳನ್ನು ದೋಚಿದ್ದಾರೆ.
ಮನೆಯವರು ಹೇಳುವ ಪ್ರಕಾರ ಆರು ಮಂದಿ ದರೋಡೆಕೋರರು ದೃಢಕಾಯದವರಾಗಿದ್ದರು. ದರೋಡೆಕೋರರು ಮನೆ ತುಂಬಾ ಹುಡುಕಾಡಿದಾಗ ಚಿನ್ನ, ಹಣ ಎಲ್ಲವೂ ಸಿಕ್ಕಿತ್ತು. ಆಗ ಚಿನ್ನ ಸಾಕಷ್ಟಿದ್ದರೂ ಸುಮಾರು 30 ಲಕ್ಷ ರೂ.ಗಳಷ್ಟು ನಗದು ಸಿಕ್ಕಿದ ಕಾರಣ ಅದರೊಂದಿಗೆ ಪರಾರಿಯಾಗಿದ್ದಾರೆ. ಚಿನ್ನವನ್ನು ಹೊತ್ತೂಯ್ಯುವ ಮನಸ್ಸು ಮಾಡಿಲ್ಲ. ಬಹುಶಃ ಚಿನ್ನವನ್ನು ನಗದೀಕರಿಸಿಕೊಳ್ಳುವಾಗ ಎಲ್ಲಾದರೂ ಸುಳಿವು ಸಿಗಬಹುದು ಎಂಬ ಭೀತಿ ದರೋಡೆಕೋರರಿಗಿತ್ತು ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲೇ ಚಿನ್ನದ ಬದಲಿಗೆ ಹಣವನ್ನೇ ಕೊಂಡೊಯ್ದರು ಎಂದು ಹೇಳಲಾಗುತ್ತಿದೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕ ಯತೀಶ್ ಎನ್. ಭೇಟಿ ನೀಡಿದ್ದು, ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.
Related Articles
ಸುಲೈಮಾನ್ ಹಾಜಿಯವರ ಮನೆಯಿಂದ ಸ್ವಲ್ಪ ಮುಂದೆ ಮೂರು ಕಡೆಗಳಿಗೆ ರಸ್ತೆ ಕವಲೊಡೆಯುತ್ತದೆ. ಒಂದು ಕಲ್ಲಡ್ಕಕ್ಕೆ, ಇನ್ನೊಂದು ಮಾದಕಟ್ಟೆಗೆ, ಮತ್ತೂಂದು ವಿಟ್ಲಕ್ಕೆ ಸಾಗುತ್ತದೆ. ಹೀಗೆ ಸಾಕಷ್ಟು ಹೊಂಚು ಹಾಕಿ ಸ್ಥಳೀಯರಿಗೇ ಗೊಂದಲ ಮೂಡಿಸಬಹುದಾದ ರಸ್ತೆಗಳ ದುರ್ಲಾಭವನ್ನು ದರೋಡೆಕೋರರು ಪಡೆದಿದ್ದಾರೆ ಎನ್ನುವ ಅನುಮಾನವಿದೆ.
Advertisement
ಮೂಡಿದ ಅನುಮಾನದರೋಡೆಕೋರರು ಮನೆ ಯಿಂದ ಹೊರಹೋಗುವ ವೇಳೆ ಸುಲೈಮಾನ್ ಅವರು ಮೊಬೈಲ್ ಫೋನ್‌ಗಳನ್ನು ವಾಪಸ್ ನೀಡುವಂತೆ ಕೇಳಿಕೊಂಡರು. ಆಗ ತಾವು ಬಿ.ಸಿ. ರೋಡ್‌ನ ಲಾಡ್ಜ್ನಲ್ಲಿ ತಂಗಿದ್ದೇವೆ. ನಮ್ಮನ್ನು ಫಾಲೊ ಮಾಡಿ ಬಂದು ಅಲ್ಲಿ ಮೊಬೈಲ್ ಪಡೆದುಕೊಳ್ಳಿ ಎಂದು ದರೋಡೆಕೋರರು ಹೊರಟರು. ಸುಲೈಮಾನ್ ಮತ್ತು ಅವರ ಮಗ ಫಾಲೊ ಮಾಡುತ್ತ ಮುಂದೆ ಸಾಗಿದಾಗ ಒಂದು ಹಂತದಲ್ಲಿ ದರೋಡೆಕೋರರಿದ್ದ ವಾಹನ ಇವರ ಕಣ್ಣುತಪ್ಪಿಸಿ ನಾಪತ್ತೆಯಾಯಿತು. ಆಗ ಸುಲೈಮಾನ್ ಅವರ ಪುತ್ರ ತನ್ನಲ್ಲಿದ್ದ ಇನ್ನೊಂದು ಮೊಬೈಲ್‌ನಿಂದ ಸುಲೈಮಾನ್ ಅವರ ಮೊಬೈಲ್‌ಗೆ ಕರೆ ಮಾಡಿದ್ದು, ಆಗ ಅದು ಸ್ವಿಚ್‌ಆಫ್ ಆಗಿತ್ತು. ಈ ಹಂತದಲ್ಲಿ ಇವರು ಇ.ಡಿ. ಅಧಿಕಾರಿಗಳಲ್ಲ ಎಂಬ ಅನುಮಾನ ಮೂಡಿತ್ತು ಎಂಬುದಾಗಿ ಮನೆಯವರು ತಿಳಿಸಿದ್ದಾರೆ. ಸುಮಾರು ಎರಡು ತಾಸುಗಳ ಕಾಲ ಎಲ್ಲವನ್ನೂ ಶೋಧಿಸುವ ನಾಟಕವಾಡಿ, 30 ಲಕ್ಷ ರೂ.ಗಳಿಗಿಂತಲೂ ಹೆಚ್ಚು ಹಣವನ್ನು ಚೀಲದಲ್ಲಿ ತುಂಬಿಕೊಂಡು ಪರಾರಿಯಾಗಿದೆ. ಕರೆಘಂಟೆ ಒತ್ತಿದ ದರೋಡೆಕೋರರು
ದರೋಡೆಕೋರರು ಶುಕ್ರವಾರ ರಾತ್ರಿ 7.30-8ರ ಸುಮಾರಿಗೆ ಸುಲೈಮಾನ್ ಅವರ ಮನೆಯ ಸಮೀಪ ಸುತ್ತಾಡುತ್ತಿದ್ದರು ಎನ್ನಲಾಗಿದೆ. ಬಳಿಕ 8.30ರಿಂದ 9 ಗಂಟೆಯ ನಡುವೆ ಅವರ ಮನೆಯ ಕರೆಘಂಟೆಯನ್ನು ಒತ್ತಿದರು. ಸುಲೈಮಾನ್ ಅವರೇ ಬಾಗಿಲು ತೆರೆದಿದ್ದು, “ಯಾರು’ ಎಂದು ಪ್ರಶ್ನಿಸುವಷ್ಟರಲ್ಲಿ ಒಳನುಗ್ಗಿದ ದರೋಡೆಕೋರರು, “ನಾವು ಇ.ಡಿ. ಯಿಂದ ಬಂದಿದ್ದೇವೆ. ಎಲ್ಲ ಮೊಬೈಲ್‌ಗಳನ್ನು ಕೊಡಿ’ ಎಂದು ಹೇಳಿ ಕಿತ್ತುಕೊಂಡರು. ಆಗ ಮನೆಯಲ್ಲಿ ಸುಲೈಮಾನ್ ಮತ್ತು ಅವರ ಪತ್ನಿ, ಮಗ ಮತ್ತು ಸೊಸೆ ಇದ್ದರು. ಮೊಬೈಲ್ ಕಿತ್ತುಕೊಂಡ ಕಾರಣ ಯಾರನ್ನೂ ಸಹಾಯಕ್ಕೆ ಕರೆಯುವ ಸಾಧ್ಯತೆಯೂ ಕ್ಷೀಣಿಸಿತು. ದರೋಡೆಕೋರರು ಸುಮಾರು 2 ಗಂಟೆಗಳ ಕಾಲ ಎಲ್ಲವನ್ನೂ ಹುಡುಕಾಟ ನಡೆಸಿ, ಬಳಿಕ ಸುಮಾರು 30 ಲಕ್ಷ ರೂ.ಗಳಷ್ಟು ಹಣವನ್ನು ಗೋಣಿ ಚೀಲದಲ್ಲಿ ತುಂಬಿಕೊಂಡು ಮನೆಯಲ್ಲಿದ್ದ ಐದು ಮೊಬೈಲ್ ಫೋನ್ ಸಹಿತ ಪರಾರಿಯಾಗಿದ್ದಾರೆ. ತಾವು ಪರಾರಿಯಾಗುವಾಗ ಮನೆಯವರು ಯಾರನ್ನೂ ಸಂಪರ್ಕಿಸ
ಬಾರದು ಎಂಬುದು ದರೋಡೆಕೋರರ ಉದ್ದೇಶವಾಗಿತ್ತು. ಮನೆ ಮಾಲಕರಿಗೆ ಸೇರಿದ ಬಿ.ಸಿ. ರೋಡ್ ಬಳಿಯ ಕಟ್ಟಡ
ವೊಂದರ ಮಾರಾಟ ಇತ್ತೀಚೆಗೆ ನಡೆದಿದ್ದು, ಆ ಹಣ ಮನೆಯಲ್ಲಿ ಇರಬಹುದು ಎಂಬ ಊಹೆಯಿಂದ ದರೋಡೆಕೋರರು ಕೃತ್ಯಕ್ಕೆಇಳಿದಿರಬಹುದು ಎಂದೂ ಹೇಳಲಾಗಿದೆ. ಶನಿವಾರ ಆದುದರಿಂದ ಕಾರ್ಮಿಕರ ಮಜೂರಿ ಪಾವತಿ
ಗಾಗಿಯೂ ಅಷ್ಟು ಹಣ ಇತ್ತು ಎನ್ನಲಾಗಿದೆ. ಅಡಿಕೆ ಮಾರಿದ ಹಣ, ಬೀಡಿ ಬೋನಸ್ ಪಾವತಿಗಾಗಿ ತಂದಿದ್ದ ಹಣ ಮನೆಯಲ್ಲಿತ್ತು ಎಂಬುದಾಗಿ ಮನೆಯವರು ಹೇಳಿಕೊಂಡಿದ್ದಾರೆ. ಹತ್ತಿರದಲ್ಲಿಲ್ಲ ಬೇರೆ ಮನೆ
ಸುಲೈಮಾನ್ ಹಾಜಿಯವರ ಮನೆಯ ಸಮೀಪ ಬೇರೆ ಮನೆಗಳಿಲ್ಲ. ಕೊಂಚ ದೂರದಲ್ಲಿ ಅವರದೇ ಎರಡು ಬೀಡಿ ಬ್ರ್ಯಾಂಚ್‌ಗಳಿವೆ. ಅದಾದ ಬಳಿಕ ಅವರದೇ ಹಳೆಯ ಮನೆಯೊಂದಿದೆ. ಬೂಟು ಧರಿಸಿಯೇ ಪ್ರವೇಶ
ದರೋಡೆಕೋರರು ಮನೆಯೊಳಗೆ ಬೂಟು ಧರಿಸಿಯೇ ಪ್ರವೇಶಿಸಿದ್ದರು ಎಂದು ಮನೆಯವರು ತಿಳಿಸಿದ್ದಾರೆ.
ಪೊಲೀಸರಿಗೆ ದೂರು ತಡರಾತ್ರಿ 11.30ರ ವೇಳೆಗೆ ದರೋಡೆಕೋರರು ತೆರಳಿದ್ದರೂ ಮನೆಯವರೆಲ್ಲರ ಮೊಬೈಲ್ ಫೋನ್‌ಗಳನ್ನು ಕಿತ್ತುಕೊಂಡು ಹೋಗಿದ್ದರಿಂದ ತತ್‌ಕ್ಷಣಕ್ಕೆ ಪೊಲೀಸರನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ. ಮಧ್ಯರಾತ್ರಿ 1 ಗಂಟೆಯ ವೇಳೆಗೆ ವಿಟ್ಲ ಪೊಲೀಸ್ ಠಾಣೆಗೆ ತೆರಳಿ ಪ್ರಕರಣದ ಮಾಹಿತಿ ನೀಡಲಾಯಿತು. ದೂರಿನ ವಿವರ
ಸುಲೈಮಾನ್ ಅವರ ಪುತ್ರ ಮಹಮ್ಮದ್ ಇಕ್ಬಾಲ್ (27) ನೀಡಿರುವ ದೂರಿನ ವಿವರ ಹೀಗಿದೆ: ಶುಕ್ರವಾರ ರಾತ್ರಿ 8.30ರ ಸುಮಾರಿಗೆ ನಮ್ಮ ಮನೆಗೆ ಕಾರಿನಲ್ಲಿ 6 ಜನ ಅಪರಿಚಿತರು ಬಂದು ತಮ್ಮನ್ನು ಇಡಿ ಅಧಿಕಾರಿ ಗಳು ಎಂದು ಪರಿಚಯಿಸಿಕೊಂಡು, ಮನೆ ಪರಿಶೀಲನೆಗೆ ಆದೇಶ ಹೊಂದಿರುವುದಾಗಿ ತಿಳಿಸಿದರು. ಮನೆಯಲ್ಲಿದ್ದ ಎಲ್ಲರ ಮೊಬೈಲ್‌ಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡ ಬಳಿಕ ಅವರಲ್ಲಿ ಕೆಲವರು ಮನೆ ಯಲ್ಲಿ ಹುಡುಕತೊಡಗಿದರು. ಬಳಿಕ ಕೋಣೆಯ ಕಪಾಟಿನಲ್ಲಿ ವ್ಯವಹಾರಕ್ಕಾಗಿ ಇಟ್ಟಿದ್ದ ಸುಮಾರು 25ರಿಂದ 30 ಲಕ್ಷ ರೂ. ಹಣವನ್ನು ತೆಗೆದುಕೊಂಡು, “ಇಷ್ಟು ಹಣವನ್ನು ನಿಮ್ಮಲ್ಲಿ ಇಟ್ಟುಕೊಳ್ಳುವಂತಿಲ್ಲ. ಹಾಗಾಗಿನಿಮ್ಮನ್ನು ಬಂಧಿಸಿ ವಿಚಾರಣೆ ನಡೆಸಲಾಗುವುದು’ ಎಂದು ಹೇಳಿದರು. ಬಳಿಕ 11.30ರ ಸುಮಾರಿಗೆ ದರೋಡೆಕೋರರು ಹೊರಟು, ಈ ಹಣಕ್ಕೆ ಸೂಕ್ತ ದಾಖಲೆಗಳನ್ನು ಬೆಂಗಳೂರಿನಲ್ಲಿರುವ ನಮ್ಮ ಕಚೇರಿಗೆ ನೀಡಿ ಪಡೆದುಕೊಳ್ಳಿ ಎಂದು ಹೇಳಿ ಪರಾರಿಯಾದರು ಎಂದು ದೂರಿನಲ್ಲಿ ವಿವರಿಸಲಾಗಿದೆ.