ವಿಟ್ಲ: ವಿಟ್ಲ ಹೋಬಳಿಯ ಪ್ರಮುಖ ಮತ್ತು ಉಪರಸ್ತೆಗಳ ಸ್ಥಿತಿ ಶೋಚನೀಯವಾಗಿದೆ. ವಿಟ್ಲ ಕಲ್ಲಡ್ಕ ರಸ್ತೆಯ ಬೊಬ್ಬೆಕೇರಿ ಸಮೀಪದ ಕರ್ಣಾಟಕ ಬ್ಯಾಂಕ್ ಶಾಖೆಯ ಮುಂಭಾಗದಲ್ಲಿ ರಸ್ತೆಯ ಹೊಂಡ ದೊಡ್ಡದಾಗಿ ಕೆರೆಯಂತಾಗಿದೆ. ಇದು ಆಗಾಗ ಪೇಟೆಯಲ್ಲಿ ಟ್ರಾಫಿಕ್ ಜಾಂ ಗೂ ಕಾರಣವಾಗುತ್ತಿದೆ.
ವಿಟ್ಲಪಟ್ನೂರು ಗ್ರಾಮದ ಕಡಂಬು ಎಂಬಲ್ಲಿ ಸುಮಾರು 300 ಮೀ ದೂರ ರಸ್ತೆ ಸಂಪೂರ್ಣ ಮಾಯವಾಗಿದೆ. ಮಣ್ಣಿನ ರಸ್ತೆಯಲ್ಲಿ ಸಂಚರಿಸುವ ಸ್ಥಿತಿ ಉಂಟಾಗಿದೆ. ವಿಟ್ಲದಿಂದ ಕಾಶಿಮಠ, ಅಪ್ಪೇರಿಪಾದೆ ಮೂಲಕ ಉಕ್ಕುಡ ಹಾಗೂ ಉಕ್ಕುಡ ಪಡಿಬಾಗಿಲು ವರೆಗೆ ಮಾರ್ಗ ಸಂಪೂರ್ಣ ಕೆಟ್ಟುಹೋಗಿದೆ. ವಿಟ್ಲ ಕನ್ಯಾನ ರಸ್ತೆಯೂ ನಾದುರಸ್ತಿಯಲ್ಲಿದೆ. ಕನ್ಯಾನದಿಂದ ಕರೋಪಾಡಿ ಮಾರ್ಗವಾಗಿ ಕೇರಳಕ್ಕೆ ಸಂಪರ್ಕಿಸುವ ರಸ್ತೆಯು ನೆಲ್ಲಿಕಟ್ಟೆ ಎಂಬಲ್ಲಿ ನಿರ್ಮಾಣವಾದ ಗುಂಡಿಗಳಲ್ಲಿ ಗಿಡಗಳನ್ನು ನೆಟ್ಟುಬಿಡುವ ದಿನ ದೂರವಿಲ್ಲ.
ಉಕ್ಕುಡ ಪುಣಚ ಮಾರ್ಗದಲ್ಲಿ ಅಲ್ಲಲ್ಲಿ ಡಾಮರು ಎದ್ದಿದೆ. ಹೊಂಡಗಳು ಜಾಸ್ತಿಯಾಗಿವೆ. ಪುಣಚ ಗ್ರಾಮದೊಳಗೆ ಅನೇಕ ಉಪರಸ್ತೆಗಳು ಸಂಚಾರಕ್ಕೆ ಅಯೋಗ್ಯವಾಗಿವೆ. ವಿಟ್ಲಮುಟ್ನೂರು ಗ್ರಾಮದ ಪ್ರಮುಖ ರಸ್ತೆಯ ಒಂದೆರಡು ಕಿಮೀ ದೂರಕ್ಕೆ ಕ್ರಮಿಸುವುದೆಂದರೆ ಭಯವನ್ನುಂಟುಮಾಡುತ್ತದೆ.
ವಿಟ್ಲ ಕಬಕ ರಸ್ತೆಯ ಇಡ್ಕಿದು ಗ್ರಾಮದ ಅಳಕೆಮಜಲು ಸಮೀಪ ದೊಡ್ಡದಾದ ಹೊಂಡ ಸೃಷ್ಟಿಯಾಗಿದೆ. ವಿಟ್ಲ ಮಾಣಿ ಸಂಪರ್ಕ ರಸ್ತೆಯಲ್ಲಿ ಮರುಡಾಮರು ಹಾಕಬೇಕಾಗಿದೆ. ಮಂಗಳಪದವು, ಮಾಮೇಶ್ವರ, ಅನಂತಾಡಿ, ಕೊಡಾಜೆ ವರೆಗೆ ರಸ್ತೆ ಸಂಪೂರ್ಣ ಕಡೆಗಣಿಸಲ್ಪಟ್ಟಿದೆ.
ಸಾಲೆತ್ತೂರು ಕಟ್ಟತ್ತಿಲ ರಸ್ತೆ, ಕನ್ಯಾನ ಆನೆಕಲ್ಲು ರಸ್ತೆ, ಕೋಡಪದವು ರಸ್ತೆ, ಮಾಣಿಲ ಮತ್ತು ಪೆರುವಾಯಿ ಗ್ರಾಮಗಳಿಗೆ ತೆರಳುವ ಪ್ರಮುಖ ಹಾಗೂ ಉಪ ರಸ್ತೆಗಳೂ ಅಭಿವೃದ್ಧಿ ಕಾಣದೇ ಕಂಗಾಲಾಗಿವೆ.
-ಉದಯಶಂಕರ್ ನೀರ್ಪಾಜೆ