ದೃಷ್ಟಿಗೆ ತಕ್ಕ ಸೃಷ್ಟಿ ಇದೊಂದು ನಾಣ್ಣುಡಿ. ಅವರವರ ಭಾವನೆಗಳಿಗೆ ತಕ್ಕಂತೆ ಈ ಸೃಷ್ಟಿಯು ಕಾಣುತ್ತದೆ. ನೋಡುವ ದೃಷ್ಟಿ ಸರಿಯಾಗಿದ್ದರೆ ಸೃಷ್ಟಿಯೂ ಸರಿ ಇರುತ್ತದೆ. ಈ ಪ್ರಪಂಚದಲ್ಲಿ ಎಲ್ಲವೂ ನಾವು ನೋಡುವ ದೃಷ್ಟಿಯ ಮೇಲೆ ಅವಲಂಬಿತವಾಗಿರುತ್ತದೆ.
ನಾವು ಒಳ್ಳೆಯ ಮನಸ್ಸಿನಿಂದ ನೋಡಿದರೆ ನಮಗೆ ಎಲ್ಲವೂ ಒಳ್ಳೆಯದಾಗಿಯೇ ಕಾಣುತ್ತದೆ, ಹಾಗೆಯೇ ಕೆಟ್ಟ ಮನಸ್ಸಿನಿಂದ ನೋಡಿದರೆ ಎಲ್ಲವೂ ಕೆಟ್ಟದ್ದಾಗಿ ಕಾಣುತ್ತದೆ. ಎಲ್ಲವೂ ನೋಡುಗರ ದೃಷ್ಟಿಯ ಮೇಲೆ ಅವಲಂಬಿತ.
ನಾವು ಈ ಜಗತ್ತನ್ನು ರೋಗಪೀಡಿತವಾಗಿ ನೋಡಿದರೆ ನಮಗೆ ಇಲ್ಲಿ ರೋಗಿಗಳೇ ಕಾಣುತ್ತಾರೆ ಹೊರತು ಆರೋಗ್ಯವಂತರನ್ನು ಕಾಣಲು ಸಾಧ್ಯವಿಲ್ಲ. ಈ ಲೋಕದಲ್ಲಿರುವ ಭಯವನ್ನು ನೋಡುತ್ತಾ ಕುಳಿತರೆ ಧೈರ್ಯವನ್ನು ಎಲ್ಲೂ ಕಾಣಲು ಸಾಧ್ಯವಿಲ್ಲ.
ನನಗೆ ಯಾವಾಗಲೂ ಕಷ್ಟ, ದುಃಖದ ಪರಿಸ್ಥಿತಿಯೇ ಎಂದು ಕೊರಗುತ್ತಾ ಕುಳಿತರೆ ಆ ಪರಿಸ್ಥಿತಿಯನ್ನು ಎದುರಿಸಲು ಸಾಧ್ಯವಿಲ್ಲ. ಆದುದರಿಂದ ಕಷ್ಟಬಂದಾಗ ಅದನ್ನು ಹೇಗೆ ಎದುರಿಸಬೇಕೆಂದು ಎಂಬುದನ್ನು ಅರಿತು ಧೈರ್ಯದಿಂದ ಮುನ್ನಡೆದರೆ ಒಂದಲ್ಲಾ ಒಂದು ದಿನ ಗೆಲುವು ನಿಶ್ಚಿತವಾಗಿ ಲಭಿಸುತ್ತದೆ.
ಎಲ್ಲವನ್ನೂ ಧನಾತ್ಮಕವಾಗಿ ನೋಡುವುದು ಅಷ್ಟೊಂದು ಸುಲಭವಲ್ಲ. ಅದಕ್ಕೆ ತಾಳ್ಮೆ ಆತ್ಯವಶ್ಯಕವಾಗಿರುತ್ತದೆ. ಒಮ್ಮೆ ಜೀವನದಲ್ಲಿ ಎಲ್ಲವನ್ನೂ ಧನಾತ್ಮಕತೆಯಿಂದ ಕಾಣಲು ಶುರು ಮಾಡಿ ನೋಡಿ. ಆಗ ಏನೇ ಬಂದರೂ ಅದೆಲ್ಲವನ್ನು ಎದುರಿಸಲು ಮನಸ್ಸು ಸಿದ್ಧವಾಗಿರುತ್ತದೆ. ಜೀವನದಲ್ಲಿ ಬಂದದ್ದೆಲ್ಲವನ್ನೂ ಋಣಾತ್ಮಕವಾಗಿ ಚಿಂತಿಸಿದರೆ ನಮ್ಮ ಜೀವನವೇ ನೋವಿ ನಿಂದ ಕೂಡಿರುತ್ತದೆ. ನಾವು ಯಾವುದನ್ನು ಹೇಗೆ ಕಾಣುತ್ತೇವೋ ಅದರ ಮೇಲೆ ಎಲ್ಲವೂ ಅವಲಂಬಿತವಾಗಿದೆ.
-ಕಾವ್ಯಶ್ರೀ ಎಸ್. ಸಾಮೆತ್ತಡ್ಕ
ಸ.ಪ್ರ.ದ. ಮಹಿಳಾ ಕಾಲೇಜು, ಪುತ್ತೂರು