Advertisement

ಅಸಹಾಯಕ ವೃದ್ಧೆಯ ಮನೆಗೆ ಭೇಟಿ, ಪರಿಶೀಲನೆ

11:00 AM Dec 15, 2017 | |

ಉಪ್ಪಿನಂಗಡಿ: ಎಂಟು ಮಕ್ಕಳಿದ್ದೂ ವೃದ್ಧಾಪ್ಯದಲ್ಲಿ ಆಶ್ರಯ ಸಿಗದೆ ಅಸಹಾಯಕರಾಗಿರುವ ಉಪ್ಪಿನಂಗಡಿಯ ವೃದ್ಧೆ ಲಕ್ಷ್ಮೀ ಹೆಗ್ಡೆ ಅವರ ಇಳಂತಿಲ ಕುಂಟಾಲಕಟ್ಟೆಯ ಛಾವಣಿ ಮುರಿದು ಬಿದ್ದ ಮನೆಗೆ ಗುರುವಾರದಂದು ಉಪ್ಪಿನಂಗಡಿ ಎಸ್‌ಐ ನಂದಕುಮಾರ್‌ ಭೇಟಿ ನೀಡಿದರು. ಛಾವಣಿಯ ಪಕ್ಕಾಸು-ರೀಪುಗಳೆಲ್ಲವೂ ದುರ್ಬಲವಾಗಿ ಹೆಂಚುಗಳು ಬಿದ್ದು ಪುಡಿಯಾಗಿರುವುದು ಭೇಟಿಯ ವೇಳೆ ಕಂಡುಬಂತು.

Advertisement

ಮನೆ ಕಂಡು ಕಂಗೆಟ್ಟ ವೃದ್ಧೆ
ಒಂದೂವರೆ ವರ್ಷದ ಹಿಂದೆ ತನ್ನ ಮಗಳ ಮನೆಗೆ ಹೋಗುವ ಸಮಯದಲ್ಲಿ ಇದ್ದುದಕ್ಕಿಂತ ಮನೆ ಇನ್ನಷ್ಟು ಮುರುಕಲಾಗಿರುವುದನ್ನು ಕಂಡು ಕಳವಳಗೊಂಡ ಲಕ್ಷ್ಮೀ ಹೆಗ್ಡೆ, ತಾನು ದೈಹಿಕವಾಗಿ ದುರ್ಬಲವಾಗಿದ್ದು, ಮನೆ ದುರಸ್ತಿ ಮಾಡಿಕೊಟ್ಟರೂ ಒಬ್ಬಳೇ ವಾಸಿಸುವುದು ಅಸಾಧ್ಯ, ಅನಾಥಾ ಶ್ರಮಕ್ಕಾದರೂ ಸೇರಿಸಿ ಎಂದು ಗೋಗರೆದರು. ಮಕ್ಕಳ ಅಭಿಪ್ರಾಯವನ್ನು ಪಡೆದು ವೃದ್ಧಾಶ್ರಮಕ್ಕೆ ಸೇರಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‌ಐ ನಂದಕುಮಾರ್‌ ಭರವಸೆ ನೀಡಿದರು.

ವೃದ್ಧೆಯ ಸಂಕಷ್ಟದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾಗರಿಕ ಸಮಾಜದಲ್ಲಿ ಮಾನವೀಯ ಕರ್ತವ್ಯಗಳು, ಸಂಬಂಧಗಳು ಮರೆಯಾಗುತ್ತಿರುವುದು ಕಳವಳಕಾರಿ ವಿದ್ಯಮಾನ. ಈಗ ಯುವಕರಾಗಿರುವ ನಾವೂ ನಾಳೆ ವೃದ್ಧರಾಗುತ್ತೇವೆ ಎನ್ನುವ ಸತ್ಯವನ್ನು ಎಲ್ಲರೂ ಅರಿತಿರಬೇಕು. ಬಾಲ್ಯದಲ್ಲಿ ನಮ್ಮನ್ನು ಸಲಹಿದ ಹೆತ್ತವರ ಸಹನೆಯನ್ನು ವೃದ್ಧಾಪ್ಯದಲ್ಲಿ ಅವರಿಗೆ ಮರಳಿ ತೋರುವುದು ಮಾನವೀಯ ಧರ್ಮ. ವೃದ್ಧೆಯ ಪ್ರಕರಣ ಪತ್ರಿಕೆಯಲ್ಲಿ ಪ್ರಕಟವಾದ ಬಳಿಕ ಆಕೆಯ ಮಕ್ಕಳಿಬ್ಬರು ಆಶ್ರಯ ನೀಡಲು ಮುಂದೆ ಬಂದಿದ್ದರಂತೆ. ಆದರೆ ಅವರ ಮನೆಯಲ್ಲಿ ವೃದ್ಧೆ ಈ ಹಿಂದೆ ಅನುಭವಿಸಿದ ಕಹಿ ಪ್ರಸಂಗಗಳಿಂದಾಗಿ ಅವರ ಜತೆಗೆ ತೆರಳಲು ನಿರಾಕರಿಸಿದ್ದು, ಆಕೆಯ ಸ್ಥಿತಿ ಇನ್ನೂ ಅತಂತ್ರವಾಗಿಯೇ ಮುಂದುವರಿದಿದೆ ಎಂದರು.

ಮುಂದುವರಿದಿದೆ ಓಸ್ವಾಲ್ಡ್‌ ಪಿಂಟೋ ಆಶ್ರಯ ಲಕ್ಷ್ಮೀ ಹೆಗ್ಡೆ ಅವರು ಕಳೆದ ಎರಡೂವರೆ ತಿಂಗಳುಗಳಿಂದ ಉಪ್ಪಿನಂಗಡಿಯ ಏಂಜೆಲ್‌ ಪ್ರಿಂಟರ್ಸ್‌ ಮಾಲಕ ಓಸ್ವಾಲ್ಡ್‌ ಪಿಂಟೋ ಅವರ ಆಶ್ರಯದಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next