ಬಂಟ್ವಾಳ: ಮುಂಗಾರು ಹಂಗಾಮಿನ ಭತ್ತ ಬೇಸಾಯದಲ್ಲಿ ನಾಟಿ ಕಾರ್ಯ ಪೂರ್ಣಗೊಂಡು ಈಗಾಗಲೇ 15-20 ದಿವಸಗಳಾಗಿದ್ದು, ಕೆಲವೊಂದು ಗದ್ದೆಗಳಲ್ಲಿ ಕೀಟ ಹಾಗೂ ರೋಗ ಲಕ್ಷಣಗಳು ಕಂಡು ಬಂದಿದೆ. ಈ ನಿಟ್ಟಿನಲ್ಲಿ ಬಂಟ್ವಾಳ ಕೃಷಿ ಇಲಾಖೆ ತಂಡ ರೈತರ ಗದ್ದೆಗಳಿಗೆ ಭೇಟಿ ನೀಡಿ ಹತೋಟಿ ಕ್ರಮಗಳನ್ನು ಕೈಗೊಳ್ಳವುಂತೆ ಸಲಹೆ ನೀಡಿದೆ.
ಹೆಚ್ಚಿನ ಕಡೆ ಬೆಂಕಿ ರೋಗ ಕಂಡುಬಂದಿದ್ದು, ಪ್ರಾರಂಭದಲ್ಲಿ ಎಲೆಗಳ ಮೇಲೆ ಸುಮಾರು ಒಂದರಿಂದ ಮೂರು ಮಿ.ಮೀ. ಉದ್ದದ ಕಂದು ಬಣ್ಣದ ಚುಕ್ಕೆಗಳು ಕಂಡು ಬರುತ್ತವೆ. ಅನಂತರ ಇಂತಹ ಚುಕ್ಕೆಗಳ ಗಾತ್ರ ಹೆಚ್ಚಾಗುವುದಲ್ಲದೇ ಉದ್ದವಾಗಿ ಕದಿರಿನ ಆಕಾರವನ್ನು ಹೊಂದುತ್ತವೆ. ಮಧ್ಯಭಾಗವು ಬೂದಿ ಬಣ್ಣಕ್ಕೆ ತಿರುಗಿ ಸುತ್ತಲೂ ಕಂದು ಬಣ್ಣವಾಗುತ್ತದೆ. ಇದರ ಹತೋಟಿಗಾಗಿ ಸಾರಜನಕವನ್ನು ಮಣ್ಣು ಪರೀಕ್ಷೆ ಆಧಾರದ ಮೇಲೆ ಶಿಫಾರಸ್ಸು ಮಾಡಿದ ಪ್ರಮಾಣದಲ್ಲಿ ಕೊಡಬೇಕು. ಗದ್ದೆಯು ಬದುವಿನಲ್ಲಿರುವ ರೋಗದ ಆಸರೆಯಾಗಿರುವ ಹುಲ್ಲು ಮತ್ತು ಕಳೆಗಳನ್ನು ನಾಶ ಪಡಿಸಬೇಕು. ರೋಗದ ಬಾಧೆ ಶೇ. 5ಕ್ಕಿಂತ ಜಾಸ್ತಿ ಇದ್ದಲ್ಲಿ ಶಿಲೀಂದ್ರ ನಾಶಕಗಳಾದ ಎಡಿಫಿನ್‌ಫಾಸ್ 1.0 ಮಿ.ಮೀ. ಅಥವಾ ಕಾರ್ಬೆಡೆಜಿಮ್ 1.0 ಗ್ರಾಂ. ಅಥವಾ ಟ್ರೈಸ್ಟೆಕ್ಲಜೋಲ್ 0.6 ಗ್ರಾಂ ಪ್ರತೀ ಲೀಟರ್ ನೀರಿಗೆ ಬೆರೆಸಿ ಸಿಂಪಡಣೆ ಮಾಡಬೇಕು. ನಾಟಿ ಮಾಡಿದ ತೆನೆ ಹೊರಬರುವ ಸಮಯದಲ್ಲಿ ಮತ್ತು ತೆನೆ ಹೊರ ಬಂದ ಹತ್ತು ದಿನಗಳ ಅನಂತರ ಸಿಂಪಡಣೆ ಮಾಡಬೇಕು.
ಕಾಂಡ ಕೊರೆಯುವ ಹುಳು (ಕಂಡೆಪುರಿ)ಮರಿಹುಳ ಸಸ್ಯದ ಕಾಂಡವನ್ನು ಕೊರೆದು ತಿನ್ನುವುದರಿಂದ ಸುಳಿ ಒಣಗುತ್ತದೆ. ಇದರ ಹತೋಟಿಗೆ ಬೇಸಗೆಯಲ್ಲಿ ಆಳವಾದ ಉಳುಮೆ ಮಾಡಬೇಕು. ನಾಟಿ ಮಾಡುವ ಮುನ್ನ ಸಸಿ ಮಡಿಯ ಪೈರುಗಳ ತುದಿ ಭಾಗವನ್ನು ಕತ್ತರಿಸಿ ಹಾಕಬೇಕು. 1.3 ಮಿ.ಲೀ., ಮೋನೋಕ್ರೋಟೊಫಾಸ್ ಅಥವಾ 2.0ಮಿ.ಲೀ., ಕ್ಲೋರೋಫೈರಿಫಾಸ್ ಅನ್ನು ಒಂದು ಲೀಟರ್ ನೀರಿಗೆ ಬೆರೆಸಿ ಕೀಟದ ಬಾಧೆಯ ಮುಖ್ಯ ಬೆಳೆಯಲ್ಲಿ ಕಂಡುಬಂದಲ್ಲಿ ಸಿಂಪಡಿಸಬೇಕು.
ಎಲೆ ಸುರುಳಿ ಹುಳಗಳು ಎಲೆಯ ಅಂಚನ್ನು ಮಡಚಿ ಸುರುಳಿ ಸುತ್ತಿಕೊಂಡು ಎಲೆಯ ಹಸಿರು ಭಾಗವನ್ನು ಕೆರೆದು ತಿನ್ನುತ್ತವೆ. ಇದರಿಂದ ಪೈರು ಬೆಳ್ಳಗೆ ಬಿಳಿಚಿಕೊಂಡಂತೆ ಕಾಣಿಸುತ್ತದೆ. ಬಾಧೆಯು ತೀವ್ರವಾದಾಗ ಬೆಳವಣಿಗೆ ಕುಂಠಿತವಾಗಿ ತೆನೆ ಬಾರದೆ ನಷ್ಟವುಂಟಾಗುತ್ತದೆ. ಇದರ ಹತೋಟಿಗೆ ಗದ್ದೆಯು ಬದುವಿನಲ್ಲಿರುವ ಕಳೆಗಳನ್ನು ಕಿತ್ತು ಸ್ವತ್ಛಗೊಳಿಸಬೇಕು. ಕೀಟವಿರುವ ಸೂಚನೆಯನ್ನು ನೋಡಿ ಕೊಂಡು ಗದ್ದೆಯಲ್ಲಿಯಲ್ಲಿರುವ ನೀರನ್ನು ಬಸಿದು 2.0 ಮಿ.ಮೀ. ಕ್ವಿನಲ್‌ಫಾಸ್ ಅನ್ನು 25 ಇ.ಸಿ. ಪ್ರತೀ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು ಎಂದು ಕೃಷಿ ಇಲಾಖೆ ಅಧಿಕಾರಿಗಳ ತಂಡ ಸಲಹೆ ನೀಡಿದೆ.
ಬಂಟ್ವಾಳ ಕೃಷಿ ಇಲಾಖೆಯ ಸಹಾಯಕ ಕೃಷಿ ಅಧಿಕಾರಿ ಚೆನ್ನಕೇಶವ ಮೂರ್ತಿ, ತಾಂತ್ರಿಕ ಅಧಿಕಾರಿ ನಂದನ್ ಶೆಣೈ ಮತ್ತಿತರರು ತಾಲೂಕಿನ ವಿವಿಧ ಭಾಗಗಳ ರೋಗಬಾಧಿತ ಗದ್ದೆಗಳಿಗೆ ಭೇಟಿ ನೀಡಿದರು.