ಮುಂಬಯಿ: ಭಾರತ ಭೇಟಿಯ ಕೊನೆಯ ಚರಣದಲ್ಲಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಗುರುವಾರ ನಾರಿಮನ್ ಹೌಸ್‌ಗೆ ಭೇಟಿ ನೀಡಿದ್ದು, 26/11 ರ ದಾಳಿ ವೇಳೆ ಇಲ್ಲಿ ನಡೆದ ರಕ್ತಪಾತವನ್ನು ಉಲ್ಲೇಖೀಸಿದರು. ಈ ಪ್ರದೇಶವು ವಿಶಿಷ್ಟವಾದ ಪ್ರೀತಿ ಹಾಗೂ ದ್ವೇಷಕ್ಕೆ ದ್ಯೋತಕವಾಗಿದೆ ಎಂದು ಅವರು ಹೇಳಿದರು. ಇಲ್ಲಿನ ಯಹೂದಿ ಕುಟುಂಬವು ಎಲ್ಲ ಜನರಿಗೂ ಪ್ರೀತಿ ತೋರಿಸಿದೆ. ಆದರೆ ಉಗ್ರರು ಇಸ್ರೇಲಿಗಳ ವಿರುದ್ಧ ದ್ವೇಷ ಕಾರಿದ್ದರು ಎಂದರು. ಇದಕ್ಕೂ ಮೊದಲು ನೆತನ್ಯಾಹು 26/11ರ ದಾಳಿಯ ಸಂತ್ರಸ್ತರಿಗೆ ಗೌರವ ನಮನ ಸಲ್ಲಿಸಿದರು. ಇವರೊಂದಿಗೆ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಕೂಡ ಇದ್ದರು.
ಇಸ್ರೇಲ್ ಮೂಲದ ಮೊಶೆ ತನ್ನ ತಂದೆ ತಾಯಿಗಳನ್ನು ಕಳೆದುಕೊಂಡ ಸ್ಥಳ ಇದಾಗಿದ್ದು, ಮೊಶೆಯನ್ನು ಗುರುವಾರ ನೆತನ್ಯಾಹು ಭೇಟಿ ಮಾಡಿದರು. ಮೊಶೆಯ ತಂದೆ-ತಾಯಿ ಸೇರಿದಂತೆ ಆರು ಜನರ ಮೇಲೆ ಉಗ್ರರು ದಾಳಿ ನಡೆಸಿ ಹತ್ಯೆಗೈದಿದ್ದರು. ಈ ದಾಳಿಯ ವೇಳೆ ಎರಡು ವರ್ಷದ ಮಗುವಾಗಿದ್ದ ಮೊಶೆ ಅಚ್ಚರಿ ರೀತಿಯಲ್ಲಿ ಪಾರಾಗಿದ್ದ.
ಈ ಮಧ್ಯೆ ಮುಂಬಯಿಯಲ್ಲಿ ಇಂಡಿಯಾ- ಇಸ್ರೇಲ್ ಬ್ಯುಸಿನೆಸ್ ಸಮ್ಮೇಳನದಲ್ಲಿ ಮಾತ ನಾಡಿದ ನೆತನ್ಯಾಹು, ಇಸ್ರೇಲ್‌ನಲ್ಲಿ ಸೇನೆ ಯಿಂ ದಾಗಿ ನಿಜವಾದ ಶಿಕ್ಷಣ ಲಭ್ಯ ವಾಗುತ್ತಿದೆ. ಪ್ರತಿ ನಾಗರಿಕನೂ ಮೊದಲು ಸೇನೆಯಲ್ಲಿ ಸೇವೆ ಸಲ್ಲಿಸುವುದರಿಂದ ವಾಸ್ತವ ಶಿಕ್ಷಣವನ್ನು ಪಡೆಯುತ್ತಾನೆ. ಇದು ಬೇರೆ ಯಾವ ದೇಶದಲ್ಲೂ ಇಲ್ಲ ಎಂದರು. ಅಲ್ಲದೆ, ಭಾರತ-ಇಸ್ರೇಲ್ ಸಂಬಂಧ ರೂಪುಗೊಂಡಿದ್ದು ಸ್ವರ್ಗದಲ್ಲೇ ಎಂದೂ ನೆತನ್ಯಾಹು ಹೊಗಳಿದ್ದಾರೆ. ಸಮ್ಮೇಳನದಲ್ಲಿ ದೇಶದ ಪ್ರಮುಖ ಉದ್ಯಮಿಗಳು ಹಾಜರಿದ್ದರು. ಅಲ್ಲದೆ, ಉದ್ಯಮಿಗಳೊಂದಿಗೆ ನೆತನ್ಯಾಹು ಔತಣಕೂಟದಲ್ಲೂ ಭಾಗವಹಿಸಿದರು.
26/11ರ ಸಂತ್ರಸ್ತರ ನೆನಪಿಗಾಗಿ ನಾರಿಮನ್ ಹೌಸ್‌ನಲ್ಲಿ ಸ್ಮಾರಕ ಅನಾವರಣ ಬಳಿಕ ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರು ಮೋಶೆಯ ಹಣೆಗೆ ಮುತ್ತಿಕ್ಕಿದರು.