Advertisement

ವೃಂದಾವನಕ್ಕೆ ಅಮಿತ್‌ ಭೇಟಿ

06:15 AM Feb 27, 2018 | Team Udayavani |

ಸೇಡಂ: ಹೈದ್ರಾಬಾದ್‌ ಕರ್ನಾಟಕ ಭಾಗದ ಪ್ರಸಿದ್ಧ ಟೀಕಾಚಾರ್ಯರ (ಜಯತೀರ್ಥರು) ಉತ್ತರಾದಿ ಮಠಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಸೋಮವಾರ ಬೆಳಗ್ಗೆ ಭೇಟಿ ನೀಡಿದರು.

Advertisement

ತಾಲೂಕಿನ ಮಳಖೇಡದ ಉತ್ತರಾದಿ ಮಠಕ್ಕೆ ಪತ್ನಿ ಸಮೇತರಾಗಿ ಆಗಮಿಸಿದ ಅವರು, ಟೀಕಾಚಾರ್ಯರ(ಜಯತೀರ್ಥರು) ಮೂಲ ವೃಂದಾವನಕ್ಕೆ ನಮಸ್ಕರಿಸಿ, ದರ್ಶನ ಪಡೆದರು. ಈ ವೇಳೆ ದೇವಾಲಯ ಮುಖ್ಯ ಅರ್ಚಕ ವೆಂಕಣ್ಣಾಚಾರ್ಯ ಅವರು ಅಮಿತ್‌ ಶಾ ಅವರಿಗೆ ವೃಂದಾವನದ ಭಾವಚಿತ್ರ ನೀಡಿ ಸನ್ಮಾನಿಸಿದರು.

ಮಠದ ನಿಯಮದಂತೆ ಲುಂಗಿ ಧರಿಸಿ ದರ್ಶನ ಪಡೆದ ಶಾ ಅವರೊಂದಿಗೆ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ, ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ಬಿ.ಜಿ. ಪಾಟೀಲ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ರಾಜಕುಮಾರ ಪಾಟೀಲ ತೆಲ್ಕೂರ, ಮುಖಂಡ ಶಿವಕುಮಾರ ಪಾಟೀಲ ಜಿಕೆ ಇದ್ದರು.

ಚುನಾವಣೆ ಬಳಿಕ ಶಕ್ತಿ ಗೊತ್ತಾಗಲಿದೆ:ಈ ನಡುವೆ ಕಲಬುರಗಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಮಿತ್‌ ಶಾ, ಉತ್ತರ ಪ್ರದೇಶ ಚುನಾವಣೆ ಗೆದ್ದ ನಂತರವೇ ಅಮಿತ್‌ ಶಾ ಶಕ್ತಿ ಏನೆಂಬುದು ಜನರಿಗೆ ಗೊತ್ತಾಗಿದೆ.

ಕರ್ನಾಟಕದಲ್ಲೂ ಅದೇ ಆಗಲಿದೆ ಎಂದು ಹೇಳಿದರು. 3 ತಿಂಗಳಿಂದ ಸತತವಾಗಿ ಕರ್ನಾಟಕದ ಕರಾವಳಿ, ಮೈಸೂರು, ಮಧ್ಯ ಕರ್ನಾಟಕ, ಉತ್ತರ ಕರ್ನಾಟಕ ಹಾಗೂ ಹೈದ್ರಾಬಾದ್‌ ಕರ್ನಾಟಕದಲ್ಲಿ ಪ್ರವಾಸ ಮಾಡಿದ್ದೇನೆ. ಜನರನ್ನು, ಪಕ್ಷದ ಮುಖಂಡರನ್ನು ಭೇಟಿಯಾಗಿದ್ದೇನೆ.

Advertisement

ರಾಜ್ಯ ಸರ್ಕಾರದ ವಿರುದ್ಧ ಜನ ರೋಸಿ ಹೋಗಿದ್ದಾರೆ. ಜನರು ಬದಲಾವಣೆ ಬಯಸಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಖಂಡಿತವಾಗಿ ಬರುತ್ತದೆ ಎಂದರು.

ಅಮಿತ್‌ ಶಾ ಭೇಟಿ ವೇಳೆ
ಪಿಸ್ತೂಲ್‌ ಹೊಂದಿದ್ದ ವ್ಯಕ್ತಿ ವಶಕ್ಕೆ
ಕಲಬುರಗಿ:
ಜಿಲ್ಲೆಯ ಸೇಡಂ ತಾಲೂಕಿನ ಉತ್ತರಾದಿಮಠಕ್ಕೆ ಸೋಮವಾರ ಬೆಳಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಭೇಟಿ ವೇಳೆ ಪಿಸ್ತೂಲ್‌ ಹೊಂದಿದ್ದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಿಸಿ ನಂತರ ಬಿಡುಗಡೆ ಮಾಡಿದರು.

ಶಾ ಮಠಕ್ಕೆ ಭೇಟಿ ನೀಡಿ ದರ್ಶನ ಪಡೆಯಲು ಆಗಮಿಸಿದ್ದ ವೇಳೆ ಬಿಜೆಪಿ ಕಾರ್ಯಕರ್ತ ತುಬುìಲ್ಲಾ ಹಕ್‌ ಆಗಮಿಸಿದ್ದರು. ಈ ವೇಳೆ ಪೊಲೀಸರು ಪರಿಶೀಲಿಸಿ ಒಳ ಬಿಡುವಾಗ ಪಿಸ್ತೂಲ್‌ ಹೊಂದಿರುವುದು ಪತ್ತೆಯಾಯಿತು. ಆಗ ಗಾಬರಿಗೊಂಡ ಪೊಲೀಸರು, ಒಳಗಡೆ ಬಿಡದೇ ತಡೆದರು. ಆಗ ತುಬುìಲ್ಲಾ ಹಕ್‌ ತಾನು ಬಿಜೆಪಿ ಕಾರ್ಯಕರ್ತನಾಗಿದ್ದು, ಪಿಸ್ತೂಲಿಗೆ ಲೈಸನ್ಸ್‌ ಇದೆ. ತೆಲಂಗಾಣದಲ್ಲಿ ಎಎಸ್‌ಐ ಆಗಿದ್ದು, ಈಗ ನಿವೃತ್ತನಾಗಿದ್ದೇನೆ ಎಂದು ವಿವರಣೆ ನೀಡಿದರು. ಬಳಿಕ ಬಿಡುಗಡೆ ಮಾಡಲಾಯಿತು ಎಂದು ಪೊಲೀಸರು ತಿಳಿಸಿದರು.

ಅಮಿತ್‌ ಶಾ ಅವರನ್ನು ಹೈ-ಕ ಭಾಗದ ಜನರು ಮೊದಲೇ ಗುರುತಿಸುವುದಿಲ್ಲ. ಅವರು ಚುನಾವಣಾ ಪ್ರಚಾರ ನಡೆಸಿದರೆ ಕಾಂಗ್ರೆಸ್‌ಗೆ ಯಾವುದೇ ಪರಿಣಾಮ ಬೀರುವುದಿಲ್ಲ. ಈ ಭಾಗದಲ್ಲಿ ಬಿಜೆಪಿಯ ಎಷ್ಟೇ ಪ್ರಭಾವಿ ರಾಜಕೀಯ ವ್ಯಕ್ತಿಗಳು ಪ್ರಚಾರ ನಡೆಸಿದರೂ ಮತದಾರರಿಗೆ ಯಾರು, ಎಷ್ಟು ಅಭಿವೃದ್ಧಿ ಮಾಡಿದ್ದಾರೆಂಬುದು ಚೆನ್ನಾಗಿ ಗೊತ್ತಿದೆ.
– ಡಾ.ಶರಣಪ್ರಕಾಶ ಪಾಟೀಲ್‌, ವೈದ್ಯಕೀಯ ಶಿಕ್ಷಣ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next