ಒಂದು ಅವಧಿಪೂರ್ಣ ಮಗು ಜನಿಸಿದಾಗ ಅದು ಎಲ್ಲ ದೃಷ್ಟಿ ಸಾಮರ್ಥ್ಯಗಳೊಂದಿಗೆ ಜನಿಸಿದರೂ ಕೆಲವು ಸಾಮರ್ಥ್ಯಗಳು ಮಗುವಿನ ಬೆಳವಣಿಗೆಯೊಂದಿಗೆ ಅಭಿವೃದ್ಧಿಗೊಳ್ಳುತ್ತವೆ. ಮಗು ಬೆಳೆದಂತೆ ಕಣ್ಣಿನ ನರಗಳ ಬೆಳವಣಿಗೆ ಮತ್ತು ಕಣ್ಣಿನ ಗುಡ್ಡೆಯ ಸುತ್ತಳತೆ ಹೆಚ್ಚಾದ ಹಾಗೆ ದೃಷ್ಟಿ ಸಾಮರ್ಥ್ಯ ಉತ್ತಮವಾಗುತ್ತದೆ.
ಮಗುವಿಗೆ 5 ವರ್ಷ ತುಂಬುವಾಗ ಎಮ್ಮೆಟ್ರೋಪೈಸೇಶನ್ ಎಂಬ ಪ್ರಕ್ರಿಯೆಯಿಂದ ದೃಷ್ಟಿ ಉತ್ತಮವಾಗುತ್ತದೆ. ಈ ಅವಧಿಯಲ್ಲಿ ಮಗುವಿಗೆ ಗರಿಷ್ಠ ದೃಷ್ಟಿ ಸಾಮರ್ಥ್ಯವನ್ನು ಪಡೆಯಲು ಸಾಧ್ಯವಾಗುತ್ತದೆ. ಮಗುವಿನ ಬೆಳವಣಿಗೆಯೊಂದಿಗೆ ಕೆಲವು ಮೈಲಿಗಲ್ಲುಗಳನ್ನು ಅವರಿಂದ ಸಾಧಿಸಲು ನಿರೀಕ್ಷಿಸಲಾಗಿದೆ. ಈ ಸಂದರ್ಭದಲ್ಲಿ ಮಗುವಿನಿಂದ ಹಲವು ಚಟುವಟಿಕೆಗಳನ್ನು ಸಾಧಿಸಲು ನಿರೀಕ್ಷಿಸಲಾಗಿದೆ- ಅದು ದೈಹಿಕ ಅಥವಾ ದೃಷ್ಟಿ ಮೈಲಿಗಲ್ಲುಗಳಾಗಿರಬಹುದು. ನಿರ್ದಿಷ್ಟ ಅವಧಿಯಲ್ಲಿ ಇವುಗಳನ್ನು ಸಾಧಿಸದಿದ್ದರೆ ಮಗುವಿನ ಬೆಳವಣಿಗೆಯಲ್ಲಿ ವಿಳಂಬವಿದೆ ಎಂದು ಶಂಕಿಸಬಹುದಾಗಿದೆ.
ಮಗುವಿನ ವಯಸ್ಸಿಗೆ ಅನುಗುಣವಾಗಿ ದೃಷ್ಟಿ ಮೈಲಿಗಲ್ಲುಗಳನ್ನು ಈ ಕೆಳಗಿನಂತೆ ನಿರೀಕ್ಷಿಸಲಾಗಿದೆ:
- ನವಜಾತ ಶಿಶುವಿನಿಂದ 3 ತಿಂಗಳವರೆಗೆ: ಶಿಶು ಹತ್ತಿರದ ವಸ್ತುಗಳ ಮೇಲೆ ಕೇಂದ್ರೀಕರಿಸುತ್ತದೆ ಮತ್ತು ಚಲಿಸುವ ವಸ್ತುಗಳನ್ನು ಅನುಸರಿಸುತ್ತದೆ.
- 4-6 ತಿಂಗಳುಗಳು: ಅವರು ವಸ್ತುಗಳನ್ನು ತಲುಪಲು ಮತ್ತು ವಸ್ತುವನ್ನು ಗ್ರಹಿಸಲು ಪ್ರಾರಂಭಿಸುತ್ತಾರೆ.
- 7-12 ತಿಂಗಳುಗಳು: ಶಿಶು ಸಾಮಾನ್ಯವಾಗಿ ಪರಿಚಿತ ಮುಖಗಳು ಮತ್ತು ವಸ್ತುಗಳನ್ನು ಗುರುತಿಸುತ್ತದೆ, ಬಣ್ಣದಲ್ಲಿ ಆಸಕ್ತಿಯನ್ನು ತೋರಿಸುತ್ತದೆ.
- 1 ರಿಂದ 2 ವರ್ಷಗಳು: ಚಿತ್ರ ಬಿಡಿಸುವುದು ಮತ್ತು ಪುಸ್ತಕದಲ್ಲಿ ಗೀಚುವ ಸಾಮರ್ಥ್ಯ ಪಡೆದಿರುತ್ತದೆ.
ಈ ಮೈಲಿಗಲ್ಲುಗಳನ್ನು ಸಮಯಕ್ಕೆ ಸರಿಯಾಗಿ ಸಾಧಿಸದಿದ್ದರೆ, ಬೆಳವಣಿಗೆಯ ವಿಳಂಬವಾಗಬಹುದು. ಅಧ್ಯಯನದ ಪ್ರಕಾರ ಭಾರತದಲ್ಲಿ 2 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಶೇ. 1.5-2.5ರಷ್ಟು ಬೆಳವಣಿಗೆ ವಿಳಂಬ ಕಂಡುಬಂದಿದೆ.
ವಕ್ರೀಕಾರಕ ದೋಷಗಳಲ್ಲಿ:
ಸಮೀಪದೃಷ್ಟಿ: ಒಂದು ಸಾಮಾನ್ಯ ದೃಷ್ಟಿ ಸ್ಥಿತಿ, ಇದರಲ್ಲಿ ಹತ್ತಿರದ ವಸ್ತುಗಳು ಸ್ಪಷ್ಟವಾಗಿ ಕಾಣಿಸುತ್ತವೆ, ಆದರೆ ದೂರದಲ್ಲಿರುವ ವಸ್ತುಗಳು ಅಸ್ಪಷ್ಟವಾಗಿ ಕಾಣುತ್ತವೆ.
ದೂರದೃಷ್ಟಿ: ಈ ಪರಿಸ್ಥಿತಿಯಲ್ಲಿ ದೂರದಲ್ಲಿ ಇರುವ ವಸ್ತುಗಳು ಸ್ಪಷ್ಟವಾಗಿದ್ದು ಸಮೀಪ ದೃಷ್ಟಿ ಮಬ್ಟಾಗುತ್ತದೆ.
ಅಸ್ಟಿಗ್‌ಮ್ಯಾಟಿಸಂ: ದೃಷ್ಟಿಯನ್ನು ಅಸ್ಪಷ್ಟವಾಗಿ ಅಥವಾ ವಿರೂಪಗೊಳಿಸಬಹುದಾದ ಸಾಮಾನ್ಯ ಕಣ್ಣಿನ ಸಮಸ್ಯೆ. ಜಾಗತಿಕ ಬೆಳವಣಿಗೆಯ ವಿಳಂಬದೊಂದಿಗೆ ಮಕ್ಕಳಲ್ಲಿ ಕಂಡುಬರುವ ಅತ್ಯಂತ ಸಾಮಾನ್ಯವಾದ ವಕ್ರೀಕಾರಕ ದೋಷ ಇದು.
ಸ್ಟ್ರಾಬಿಸ್ಮಸ್ (ಮೆಳ್ಳೆಗಣ್ಣು): ಇದು ಈ ಮಕ್ಕಳಲ್ಲಿ ಕಂಡುಬರುವ ಮಾತೊಂದು ಕಣ್ಣಿನ ಸಮಸ್ಯೆ. ಬೆಳವಣಿಗೆಯ ವಿಳಂಬದೊಂದಿಗಿನ ಮಕ್ಕಳಲ್ಲಿ ಜನ್ಮಜಾತ ಕಣ್ಣಿನ ಪೊರೆಯಂತಹ ಲೆನ್ಸ್ ಅಸಹಜತೆಗಳು ಕಂಡುಬರುತ್ತವೆ.
ಜಾಗತಿಕ ಬೆಳವಣಿಗೆಯ ವಿಳಂಬಕ್ಕೆ ವಿವಿಧ ಕಾರಣಗಳಿವೆ
ಅವಧಿಪೂರ್ವ ಹೆರಿಗೆ ಅಂದರೆ 37 ವಾರಗಳ ಮೊದಲು ಮಗುವಿನ ಜನನ, ಹೆರಿಗೆಯ ಸಮಯದಲ್ಲಿ ಆಮ್ಲಜನಕದ ಕೊರತೆ, ಅಪೌಷ್ಟಿಕತೆ, ಗರ್ಭಾವಸ್ಥೆಯಲ್ಲಿ ತಾಯಿ ಮದ್ಯವನ್ನು ಸೇವಿಸಿದರೆ ಇತ್ಯಾದಿ. ಇವುಗಳು ಜಾಗತಿಕ ಬೆಳವಣಿಗೆಯ ವಿಳಂಬವನ್ನು ಉಂಟುಮಾಡುವ ಅಂಶಗಳಾಗಿವೆ. ಬೆಳವಣಿಗೆಯ ವಿಳಂಬದೊಂದಿಗೆ ಮಕ್ಕಳಲ್ಲಿ ಇತರ ಸಮಸ್ಯೆಗಳ ಜತೆಗೆ ಕಣ್ಣಿನ ಸಮಸ್ಯೆ ಸಾಮಾನ್ಯವಾಗಿ ಕಂಡುಬರುತ್ತವೆ.
ಜಾಗತಿಕ ಬೆಳವಣಿಗೆಯ ವಿಳಂಬ ಹೊಂದಿರುವ ಮಕ್ಕಳು ವಕ್ರೀಕಾರಕ ದೋಷಗಳನ್ನು ಹೊಂದಿದ್ದಾರೆಂದು ಅಧ್ಯಯನವು ತಿಳಿಸುತ್ತದೆ. ಆರೋಗ್ಯವಂತ ಮಕ್ಕಳಿಗೆ ಹೋಲಿಸಿದರೆ ಈ ಮಕ್ಕಳಲ್ಲಿ ವಕ್ರೀಕಾರಕ ದೋಷಗಳು ಸಾಮಾನ್ಯವಾಗಿ ಕಂಡುಬರುತ್ತದೆ.
ಜಾಗತಿಕ ಬೆಳವಣಿಗೆಯ ವಿಳಂಬವಿರುವ ಮಕ್ಕಳಲ್ಲಿ ಆಪ್ಟೋಮೆಟ್ರಿಕ್ ನಿರ್ವಹಣೆ
ಮಗುವಿನಲ್ಲಿ ಸ್ಥಿರೀಕರಣ ಕೊರತೆ ಅಥವಾ ಮಗುವು ವಸ್ತುಗಳನ್ನು ಸರಿಯಾಗಿ ನೋಡದೆ ಇದ್ದಲ್ಲಿ ಮಗುವಿನ ಸ್ಥಿರೀಕರಣವನ್ನು ಸುಧಾರಿಸಲು ಲೈಟ್ ಸ್ಟಿಮುಲೇಶನ್ ನೀಡಲಾಗುತ್ತದೆ. ವಿಷುವಲ್ ಕಾರ್ಟೆಕ್ಸ್ ಮೆದುಳಿನ ಪ್ರಾಥಮಿಕ ಕಾರ್ಟಿಕಲ್ ಪ್ರದೇಶವಾಗಿದ್ದು ಅದು ರೆಟಿನಾದಿಂದ ಪ್ರಸಾರವಾಗುವ ದೃಶ್ಯ ಮಾಹಿತಿಯನ್ನು ಸ್ವೀಕರಿಸುತ್ತದೆ, ಸಂಯೋಜಿಸುತ್ತದೆ ಮತ್ತು ಪ್ರಕ್ರಿಯೆಗೊಳಿಸುತ್ತದೆ. ಇದು ವೇಗವಾಗಿ ಅಭಿವೃದ್ದಿ ಆಗುವ ಅಂಗವಾಗಿದೆ, ಆದ್ದರಿಂದ ಅತೀ ಶೀಘ್ರ ನಿರ್ವಹಣೆಯು ಆಗತ್ಯವಾಗಿರುತ್ತದೆ.
ವಿವಿಧ ಕಣ್ಣಿನ ಸಮಸ್ಯೆಗಳು ಜಾಗತಿಕ ಬೆಳವಣಿಗೆಯ ವಿಳಂಬಕ್ಕೆ ಸಂಬಂಧಿಸಿವೆ, ವಿಭಿನ್ನ ಸಮಸ್ಯೆಗಳು ವಿಭಿನ್ನ ಚಿಕಿತ್ಸೆಯನ್ನು ಹೊಂದಿವೆ. ಕಣ್ಣಿನ ಮುಖ್ಯ ಸಮಸ್ಯೆ ಕನ್ನಡಕದಿಂದ ಸರಿಪಡಿಸಬಹುದಾದ ವಕ್ರೀಕಾರಕ ದೋಷವಾಗಿರುವುದರಿಂದ, ಪೂರ್ಣ ಸೈಕ್ಲೋಪ್ಲೆಜಿಕ್ ವಕ್ರೀಭವನದ ಅನಂತರ ಕನ್ನಡಕವನ್ನು ಶಿಫಾರಸು ಮಾಡಬಹುದು. ಏಕೆಂದರೆ ಅವುಗಳನ್ನು ಸರಿಪಡಿಸದೆ ಬಿಟ್ಟರೆ ಅದು ಅಂಬ್ಲಿಯೋಪಿಯಕ್ಕೆ ಕಾರಣವಾಗುತ್ತದೆ. ಮೆಳ್ಳೆಗಣ್ಣನ್ನು ಸಂಪೂರ್ಣ ಕನ್ನಡಕ ತಿದ್ದುಪಡಿಯನ್ನು ಧರಿಸಿ ಸರಿಪಡಿಸಬಹುದು ಅಥವಾ ನೇತ್ರಶಾಸ್ತ್ರಜ್ಞರಿಂದ ಶಸ್ತ್ರಚಿಕಿತ್ಸೆಯನ್ನು ಮಾಡಲಾಗುತ್ತದೆ. ಜನ್ಮಜಾತ ಕಣ್ಣಿನ ಪೊರೆ ಇದ್ದರೆ ಕಣ್ಣಿನ ಪೊರೆಯನ್ನು ತೆಗೆದುಹಾಕಲು ಶಸ್ತ್ರಚಿಕಿತ್ಸೆಯನ್ನು ಮಾಡಬೇಕಾಗುತ್ತದೆ.
ಮುನ್ಸೂಚನೆ
ಹೆಚ್ಚಿನ ಬೆಳವಣಿಗೆಯ ವಿಳಂಬಗಳು ಸ್ವಯಂಪ್ರೇರಿತವಾಗಿ ಪರಿಹರಿಸುವುದರಿಂದ ಮುನ್ನರಿವು ಸಾಮಾನ್ಯವಾಗಿ ಉತ್ತಮವಾಗಿರುತ್ತದೆ. ಈ ಕಾರಣದಿಂದ ಬೆಳವಣಿಗೆ ವಿಳಂಬವು ಪರಿಹರಿಸುವ/ ವಿಕಾಸಗೊಳ್ಳುವವರೆಗೆ ಮಕ್ಕಳನ್ನು ಸೂಕ್ಷ್ಮವಾಗಿ ಅನುಸರಿಸಬೇಕು. ಗಂಭೀರ ಬೆಳವಣಿಗೆಯ ವಿಳಂಬಕ್ಕೆ ಕೆಲವು ಅಂಶಗಳು ಕಾರಣವಾಗಿವೆ: ಪೋಷಕರ ಅರಿವಿನ ಕೊರತೆ, ಗರ್ಭಾವಸ್ಥೆಯಲ್ಲಿ ರಕ್ತಹೀನತೆ, ಅಪೌಷ್ಟಿಕತೆ, ಅವಧಿಪೂರ್ಣ ಹೆರಿಗೆ, ಕಡಿಮೆ ಜನನ ತೂಕ, ಪ್ರಸವಪೂರ್ವ ಖನ್ನತೆ, ಗರ್ಭಾವಸ್ಥೆಯಲ್ಲಿ ತಂಬಾಕು ಅಥವಾ ಮದ್ಯದ ಸೇವನೆ ಮತ್ತು ಪೌಷ್ಟಿಕ ಆಹಾರ ಕೊರತೆಯಿಂದ ಮಗುವಿನಲ್ಲಿ ಬೆಳವಣಿಗೆ ವಿಳಂಬವು ಕಂಡುಬರಬಹುದು. ಆದ್ದರಿಂದ ಜಾಗತಿಕ ಬೆಳವಣಿಗೆಯಲ್ಲಿ ವಿಳಂಬ ಹೊಂದಿರುವ ಮಕ್ಕಳ ಎಲ್ಲ ಪೋಷಕರ ಜವಾಬ್ದಾರಿಯು ಮಗುವನ್ನು ಕಣ್ಣಿನ ತಪಾಸಣೆಗೆ ಕರೆದೊಯ್ಯುವುದು. ಇತರ ಅಂಗಗಳು ಮತ್ತು ಪ್ರಪಂಚವನ್ನು ಗ್ರಹಿಸಲು ಹಾಗೂ ಬೆಳೆಯುತ್ತಿರುವ ಮಗುವಿನ ಶಿಕ್ಷಣಕ್ಕಾಗಿ ಕಣ್ಣುಗಳು ಮುಖ್ಯವಾಗಿವೆ. ಜೀವಿತಾವಧಿಯಲ್ಲಿ ದೃಷ್ಟಿಹೀನತೆಯನ್ನು ತಡೆಗಟ್ಟಲು ಸರಿಯಾದ ಚಿಕಿತ್ಸೆಯನ್ನು ಸರಿಯಾದ ಸಮಯಕ್ಕೆ ಒದಗಿಸಬೇಕು.
-ಅನುಷಾ ಎಂ.,
ಆಪ್ತೊಮ್ ವಿದ್ಯಾರ್ಥಿನಿ,
ಆಪ್ತೊಮೆಟ್ರಿ ವಿಭಾಗ,
ಎಂಸಿಎಚ್‌ಪಿ, ಮಾಹೆ, ಮಣಿಪಾಲ
-ರಾಧಿಕಾ,
ಸಹಾಯಕ ಪ್ರಾಧ್ಯಾಪಕರು,
ಆಪ್ತೊಮೆಟ್ರಿ ವಿಭಾಗ,
ಎಂಸಿಎಚ್‌ಪಿ, ಮಾಹೆ, ಮಣಿಪಾಲ
(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಆಪೊ¤ಮಾಲಜಿ ವಿಭಾಗ, ಕೆಎಂಸಿ ಆಸ್ಪತ್ರೆ, ಮಂಗಳೂರು)