Advertisement

ಕೆಲಸ ಮಾಡದ ಪಿಡಿಒ ವರ್ಗಾವಣೆ: ಕಾಗೇರಿ

03:38 PM Feb 12, 2021 | Team Udayavani |

ಶಿರಸಿ: ತಾಲೂಕಿನಲ್ಲಿ ಕೇವಲ ಆರು ಕೋಟಿ ರೂ.ಗಳಷ್ಟು ಉದ್ಯೋಗ ಖಾತ್ರಿ ಯೋಜನೆಯಲ್ಲಿ ಖರ್ಚಾದ ಕುರಿತು ಗಂಭೀರವಾಗಿ ಆಕ್ಷೇಪಿಸಿ, ಅಸಮಾಧಾನ ವ್ಯಕ್ತಪಡಿಸಿದ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಪಿಡಿಒಗಳು ಆಸಕ್ತಿ ವಹಿಸದೇ ಇರುವುದರಿಂದ ಹಿನ್ನಡೆ ಆಗಿದೆ. ಕೆಲಸ ಮಾಡಲು ಆಸಕ್ತಿ ಇಲ್ಲದವರು ವರ್ಗಾವಣೆಗೊಳ್ಳಬಹುದು ಅಥವಾ ನಾವೇ ಮಾಡಿಸುತ್ತೇವೆ ಎಂದು ಖಡಕ್‌ ಎಚ್ಚರಿಕೆ ನೀಡಿದರು.

Advertisement

ಅವರು ಗುರುವಾರ ನಗರದ ಮಿನಿ ವಿಧಾನ ಸೌಧದಲ್ಲಿ ಇಲಾಖೆಗಳ ವಿವಿಧ ಯೋಜನಾ ಅನುಷ್ಠಾನ ಕುರಿತು ನಡೆಸಿದ ಸಭೆ ಅಧ್ಯಕ್ಷತೆವಹಿಸಿ ಮಾತನಾಡಿದರು. ಒಂದೊಂದು ಗ್ರಾಪಂ ಐದಾರು ಕೋಟಿ ರೂ. ಉದ್ಯೋಗ ಖಾತ್ರಿ ಕಾಮಗಾರಿ ಮಾಡುತ್ತವೆ. ಆದರೆ, ಇಲ್ಲಿ 32 ಪಂಚಾಯ್ತಿಗಳ ತಾಲೂಕಿನಲ್ಲೇ ಕೇವಲ 6 ಕೋಟಿ ಎಂದರೆ ಹೇಗೆ? ಜನರಿಗೆ ಅನುಕೂಲ ಮಾಡಿಕೊಡುವ ಈ ಯೋಜನೆಗೆ ಹಣ ಇದೆ. ಆದರೆ, ಅನುಷ್ಠಾನಕ್ಕೆ ಹಿನ್ನಡೆ ಏನು? ಕುಳಿತಲ್ಲೇ ಕೂತರೆ ಉದ್ಯೋಗ ಖಾತ್ರಿ ಯೋಜನೆ ಆಗದು. ಕ್ಷೇತ್ರ ಓಡಾಟ, ಜನರಿಗೆ ಪ್ರೇರಣೆ ಕೊಡಬೇಕು. ಜನಪರವಾಗಿ, ಸಮುದಾಯದ ಹಾಗೂ ವೈಯಕ್ತಿಕ ಕಾಮಗಾರಿ ಕೂಡ ಮಾಡಲು ಅವಕಾಶ ಇದೆ. ಪಿಡಿಓಗಳು ಕೆಲಸ ಮಾಡದೇ ಹೋದರೆ ದೂರದ ಜಿಲ್ಲೆಗೆ ವರ್ಗಾವಣೆ ಮಾಡಲಾಗುತ್ತದೆ. ಅವರವರೇ ಸಂಘಟನೆ ಮಾಡಿಕೊಂಡು ಅಭಿವೃದ್ಧಿಗೆ ಹಿನ್ನಡೆ ಮಾಡಿದರೆ ಕೇಳುವುದಿಲ್ಲ. ಈವರೆಗೆ ಎಲ್ಲರೂ ಸೇರಿ ಮಾಡೋಣ ಎಂದು ಸುಮ್ಮನಿದ್ದರೆ ಈಗ ಅಭಿವೃದ್ಧಿಗೇ ಹಿನ್ನಡೆ ಆಗುತ್ತಿದೆ ಎಂದರು.

ರೇಷ್ಮೆ, ಮೀನುಗಾರಿಕೆಯಂತಹ ಇಲಾಖೆಗಳಿಗೇ ಕೊರೊನಾ ಬಂದಂತೆ ಆಗಿದೆ. ರೇಷ್ಮೆಗೆ 50 ರೈತರು ಕೇವಲ 28 ಎಕರೆ ರೇಷ್ಮೆ ಬೆಳೆಯುತ್ತಿದ್ದಾರೆ. ಮೀನುಗಾರಿಕೆ ಇಲಾಖೆ ಕೂಡ ಕಾಣುವುದಿಲ್ಲ. ಈ ಬಾರಿ ಕದಂಬೋತ್ಸವ, ಫಲ ಪುಷ್ಪ ಪ್ರದರ್ಶನ ಕೂಡ ಇಲ್ಲ. ಕೃಷಿ, ತೋಟಗಾರಿಕೆ, ಪಶು ಸಂಗೋಪನಾ ಇಲಾಖೆಗಳು ಇನ್ನಷ್ಟು ವಿಸ್ತಾರವಾಗಬೇಕು ಎಂದ ಅವರು, ಇಡೀ ರಾಜ್ಯಕ್ಕೆ ನಮ್ಮ ವಿಧಾನಸಭಾ ಕ್ಷೇತ್ರ ಮಾದರಿಯಾಗಿರಬೇಕು. ಸ್ಪೀಕರ್‌ ಕ್ಷೇತ್ರದಲ್ಲಿ ಹೀಗಾಯ್ತು ಎನ್ನುವಂತೆ ಆಗಬಾರದು ಎಂದೂ ಸೂಚಿಸಿದರು.

ಎರಡು ವರ್ಷಗಳಿಂದ ಅನಾಥವಾಗಿರುವ ಮಾರಿಕಾಂಬಾ ದೇವಸ್ಥಾನ ಬಳಿಯ ಯಾತ್ರಿ ನಿವಾಸ ಇನ್ನೂ ಹಸ್ತಾಂತರ ಆಗಿಲ್ಲ. ನೀರು ಹರಿದು ಹೋಗುವ ವಿಷಯಕ್ಕೆ ಸಂಬಂಧಿಸಿ ಪೈಪ್‌ ಹಾಕಿಯಾದರೂ ಬಗೆಹರಿಸಬೇಕು. ಕೋಟಿ ರೂ. ಮೊತ್ತದ ಸರಕಾರಿ ಕಾಮಗಾರಿಯನ್ನು ಅದನ್ನೇನು ಮ್ಯೂಸಿಯಂ ಮಾಡಬೇಕಾ? ಕಳೆದ ಮಾರಿಕಾಂಬಾ ದೇವಿ ಜಾತ್ರೆಯೊಳಗೇ ಹಸ್ತಾಂತರಿಸಿ ಬಳಕೆಗೆ ನೀಡಲು ಹೇಳಿದ್ದೆವು. ತಹಶೀಲ್ದಾರರು ವಾರದೊಳಗೆ ಇದರ ಸಮಸ್ಯೆ ಬಗೆಹರಿಸಬೇಕು. ಇಲಾಖೆ ಅಧಿಕಾರಿಗಳು ಅವರವರ ವ್ಯಾಪ್ತಿಯ ಅಧಿಕಾರವನ್ನು ಜನರ ಹಿತಕ್ಕಾಗಿ ಬಳಸಬೇಕು. ಬೇಡದಲ್ಲಿ ಅಧಿಕಾರ ಬಳಸಿ ಗೊಂದಲ ಮಾಡದೇ ಜನರ ಕೆಲಸಕ್ಕಾಗಿ ಮಾಡಿದರೆ ಜನರಿಗೂ ಅನುಕೂಲ ಆಗುತ್ತದೆ. ಸರಕಾರದ ಆಸ್ತಿ ಪಾಸ್ತಿ ರಕ್ಷಣೆ ಎಲ್ಲರ ಜವಬ್ದಾರಿ. ಹಲ್ಲು ಇಲ್ಲದ ಇಲಾಖೆ ಆಗದೇ ಪವರ್‌ ತೋರಿಸಬೇಕು ಎಂದೂ ಹೇಳಿದರು.

ಲ್ಯಾಂಡ್‌ ಆರ್ಮಿ ದೇವಿಕೇರೆ ಕಾಮಗಾರಿಯನ್ನೂ ಸಮರ್ಪಕವಾಗಿ ಪೂರ್ಣಗೊಳಿಸಬೇಕು. ನಗರಸಭೆ ಅಧ್ಯಕ್ಷ ಗಣಪತಿ ಶೆಟ್ಟಿ, ಪೌರಾಯುಕ್ತರು ತಕ್ಷಣ ಕರೆಸಿ ನೋಡಬೇಕು. ಸಾಧ್ಯವಾದಷ್ಟೂ ಕಡೆಗೆ ಸಾರಿಗೆ ಬಸ್‌ ಓಡಿಸಬೇಕು. ಸರ್ಕಲ್‌ ಅಗಲೀಕರಣಕ್ಕೆ 5 ಕೋಟಿ ರೂ. ಬಂದಿದೆ. ಯಲ್ಲಾಪುರ ನಾಕಾ, ಮಹಾಸತಿ ವೃತ್ತ, ಅಶ್ವಿ‌ನಿ, ರಾಘವೇಂದ್ರ ಮಠ, ಝೂ ವೃತ್ತ ಹಾಗೂ ಐದು ರಸ್ತೆ ವೃತ್ತ ಸುಂದರಗೊಳಿಸಬೇಕು. 15 ಕೋ. ರೂ. ಮೊತ್ತದಲ್ಲಿ ಯಲ್ಲಾಪುರ ನಾಕಾದಿಂದ ಐದು ರಸ್ತೆ ತನಕ ಸುಂದರಗೊಳಿಸಿ ಅಗಲೀಕರಣಕ್ಕೆ ಹಣ ಬಿಡುಗಡೆ ಆಗಿದೆ. ಸರಕಾರ ನೀಡಿದ ಹಣದ ಸದ್ಬಳಕೆ ಆಗಬೇಕು ಎಂದೂ ಕಾಗೇರಿ ಹೇಳಿದರು.

Advertisement

ಜಿಪಂ ಸದಸ್ಯರಾದ ಜಿ.ಎನ್‌. ಹೆಗಡೆ ಮುರೇಗಾರ್‌, ಬಸವರಾಜ್‌ ದೊಡ್ಮನಿ, ತಾಪಂ ಅಧ್ಯಕ್ಷೆ ಶ್ರೀಲತಾ ಕಾಳೇರಮನೆ, ಉಪಾಧ್ಯಕ್ಷ ಚಂದ್ರು ಎಸಳೆ, ನಗರಸಭೆ ಅಧ್ಯಕ್ಷ ಗಣಪತಿ ಶೆಟ್ಟಿ, ಪೌರಾಯುಕ್ತ ರಮೇಶ ನಾಯಕ, ಲೋಕೋಪಯೋಗಿ ಅಧಿಕಾರಿ ಉಮೇಶ, ತಹಶೀಲ್ದಾರ್‌ ಎಂ.ಆರ್‌. ಕುಲಕರ್ಣಿ, ರಾಮಚಂದ್ರ ಗಾಂವಕರ್‌, ಇಓ ಚಿನ್ನಣ್ಣವರ್‌ ಇತರರು ಇದ್ದರು.

ಸ್ವತ್ಛತೆ ಪಾಠ ಮಾಡಿದ ಸ್ಪೀಕರ್‌!: ತಾಲೂಕಿನ ಯೋಜನಾ ಅನುಷ್ಠಾನ ಕುರಿತು ನಡೆಸಿದ ಸಭೆಯಲ್ಲಿ ಸ್ಪೀಕರ್‌ ಕಾಗೇರಿ ತಾಲೂಕು ಹಂತದ ಅಧಿಕಾರಿಗಳಿಗೆ ಸ್ವತ್ಛತೆ ಪಾಠ ಮಾಡಿದ ಘಟನೆ ಕೂಡ ನಡೆಯಿತು. ಕೇವಲ ಅಕ್ಟೋಬರ್‌ 2ಕ್ಕೆ ಮಾತ್ರ ಸ್ವತ್ಛತೆ ನೆನಪಾಗುತ್ತದೆ. ಗಾಂಧಿ ಜಯಂತಿಯಂದು ಮಾತ್ರ ಸ್ವತ್ಛತೆ ಪಾಲಿಸಿದರೆ ಆಗದು. ಪ್ರತೀ ಕಚೇರಿ ಆವಾರವನ್ನೂ ಸ್ವತ್ಛವಾಗಿಟ್ಟುಕೊಳ್ಳಿ ಎಂದು ಮತ್ತೆ ಹೇಳಬೇಕಾ? ಎಷ್ಟೋ ಕಚೇರಿ ನೋಡಿದರೆ ಕಸದ ರಾಶಿ ಕಾಣುತ್ತದೆ. ಮೊದಲು ಸ್ವತ್ಛವಾಗಿಟ್ಟುಕೊಳ್ಳಿ ಎಂದು ಬಿಗುವಾಗಿ ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next