ಉಡುಪಿ: ಅದಮಾರು ಮಠದ ಹಿರಿಯ ಯತಿ ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರು, ಶ್ರೀ ಈಶಪ್ರಿಯತೀರ್ಥ ಶ್ರೀಪಾದರ ಆಶಯದಂತೆ ವಿಶ್ವಾರ್ಪಣಂ 35ರ ಕಾರ್ಯಕ್ರಮದಲ್ಲಿ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರಿಗೆ ಗುರುವಂದನೆ ಕಾರ್ಯಕ್ರಮವು ಜ.4ರ ಮಧ್ಯಾಹ್ನ 2.30ಕ್ಕೆ ಉಡುಪಿಯ ಪೂರ್ಣಪ್ರಜ್ಞ ಆಡಿಟೋರಿಯಂನಲ್ಲಿ ನಡೆಯಲಿದೆ.
ದೇಶದ ಪ್ರಖ್ಯಾತ ಚಿಂತಕಿ, ಸನಾತನ ಧರ್ಮದಲ್ಲಿ ಆಳವಾಗಿ ಅಧ್ಯಯನ ಮಾಡಿರುವ ಮೀನಾಕ್ಷಿ ಶಹರಾವತ್ ಬಾಂಗ್ಲಾ ದೇಶದಲ್ಲಿ ನಡೆಯುತ್ತಿರುವ ವಿದ್ಯಮಾನಗಳಿಗೆ ಸಂಬಂಧಿಸಿ “ಬಾಂಗ್ಲಾ ಪಾಠ’ ವಿಷಯದಲ್ಲಿ ವಿಶೇಷ ಉಪನ್ಯಾಸ ನೀಡಲಿದ್ದಾರೆ.
ಇದೇ ಸಂದರ್ಭ ದಲ್ಲಿ ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀ ಶತೀರ್ಥ ಶ್ರೀಪಾದರಿಗೆ ಗುರುವಂದನೆ ನಡೆಯಲಿದೆ. ಈ ಹಿಂದೆ ಅದಮಾರು ಮಠದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರಿಗೆ, ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರಿಗೆ ಗುರುವಂದನೆ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಈಗ ಪಲಿಮಾರು ಹಿರಿಯ ಶ್ರೀಪಾದರಿಗೆ ಗುರುವಂದನೆ ನಡೆಯಲಿದೆ. ಪ್ರಸಿದ್ಧ ಗಾಯಕಿ ನಂದಿನಿ ಪುಣೆ ಅವರ ಸಂಗೀತ ಕಛೇರಿಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಗಲಿದೆ.
ಶ್ರೀ ನರಹರಿತೀರ್ಥ ಪ್ರಶಸ್ತಿ ಪ್ರದಾನ ಯಕ್ಷಗಾನ ಕಲೆಯನ್ನು ಪ್ರಾರಂಭಿಸಿದ ಆಚಾರ್ಯ ಮಧ್ವರ ನೇರ ಶಿಷ್ಯರಾದ ಶ್ರೀ ನರಹರಿತೀರ್ಥರ ನೆನಪಿನಲ್ಲಿ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ತಮ್ಮ ಪರ್ಯಾಯಾವಧಿಯಲ್ಲಿ ಆರಂಭಿಸಿದ 50,000 ರೂ. ಒಳಗೊಂಡ ನರಹರಿತೀರ್ಥ ಪ್ರಶಸ್ತಿಯನ್ನು ಯಕ್ಷಗಾನ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆಗೈದ ಕುಮಟಾ ತಾಲೂಕಿನ ಆನೆಗುಂದಿ ಕತಗಾಲದ ಶ್ರೀಧರ ಮಹಾಬಲೇಶ್ವರ ಷಡಕ್ಷರಿಯವರಿಗೆ ಪ್ರದಾನ ಮಾಡಲಾಗುವುದು. ಸಾಧಕತ್ರಯರಾದ ಡಾ| ಜಿ.ಎಸ್. ಚಂದ್ರಶೇಖರ್, ಡಾ| ವಿನೀತ್ ಆನಂದ ಭದ್ರಾವತಿ, ಮುರಳೀಧರ ಹತ್ವಾರ್ ಬೇಲೂರು ಅವರನ್ನು ಗೌರವಿಸಲಾಗುವುದು. ಪಲಿಮಾರು ಮಠದ ಕಿರಿಯ ಯತಿ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಉಪಸ್ಥಿತರಿರುವರು ಎಂದು ಶ್ರೀ ಕೃಷ್ಣ ಸೇವಾ ಬಳಗದ ಪ್ರಕಟನೆ ತಿಳಿಸಿದೆ.