ಮೈಸೂರು: ಸದ್ಯದಲ್ಲೇ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಲಿದ್ದೇನೆ. ತುಂಬಾ ನೋವಿನಿಂದ ಪಕ್ಷ ತೊರೆಯುವ ನಿರ್ಧಾರ ಕೈಗೊಳ್ಳುತ್ತಿದ್ದೇನೆ. ಮುಂದೆ ಯಾವ ಪಕ್ಷ ಸೇರಬೇಕೆಂಬುದನ್ನು ಇನ್ನೂ ನಿರ್ಧರಿಸಿಲ್ಲ. ಸ್ನೇಹಿತರು, ಹಿತೈಷಿಗಳು ಹಾಗೂ ಕ್ಷೇತ್ರದ ಮತದಾರರ ಜೊತೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ಸಂಸದ ಎಚ್.ವಿಶ್ವನಾಥ್ ತಿಳಿಸಿದ್ದಾರೆ.
ಶುಕ್ರವಾರ ಮೈಸೂರಿನ ಕೆಆರ್ ನಗರದಲ್ಲಿ ಅಭಿಮಾನಿಗಳು ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಿಂದ ಹೊರ ಬರುವ ಸಂದರ್ಭ ಒದಗಿ ಬಂದಿದೆ. ಹಾಗಾಗಿ ಪಕ್ಷ ತೊರೆಯುವ ನಿರ್ಧಾರ ಕೈಗೊಳ್ಳುತ್ತಿದ್ದೇನೆ. ಎಲ್ಲರ ಅಭಿಪ್ರಾಯ ಸಂಗ್ರಹಿಸಿ ತೀರ್ಮಾನ ಕೈಗೊಳ್ಳುವೆ ಎಂದರು.
ಕಾಂಗ್ರೆಸ್ ಪಕ್ಷದಲ್ಲಿ ಹಿರಿಯರನ್ನು ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿ ವಿಶ್ವನಾಥ್ ಅವರು ಈಗಾಗಲೇ ಸರ್ಕಾರ ಹಾಗೂ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಬಂದಿದ್ದರು. ಅಲ್ಲದೇ ಇತ್ತೀಚೆಗಷ್ಟೇ ರಾಜ್ಯಕ್ಕೆ ಆಗಮಿಸಿದ್ದ ನೂತನ ಉಸ್ತುವಾರಿ ಕೆಸಿ ವೇಣುಗೋಪಾಲ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ತನ್ನನ್ನು ಪಕ್ಷದಲ್ಲೇ ಉಳಿಸಿಕೊಳ್ಳುವ ಭರವಸೆ ನೀಡಿರುವುದಾಗಿ ಸುದ್ದಿಗೋಷ್ಠಿ ನಡೆಸಿ ಮುಂದೇನಾಗುತ್ತೆ ಕಾದು ನೋಡೋಣ ಎಂದು ಹೇಳಿದ್ದರು. ಇದೀಗ ಕೊನೆಗೂ ನಿರೀಕ್ಷೆಯಂತೆ ವಿಶ್ವನಾಥ್ ಅವರು ಕಾಂಗ್ರೆಸ್ ಪಕ್ಷ ತೊರೆಯುವುದು ಖಚಿತವಾಗಿದೆ. ವಿಶ್ವನಾಥ್ ಅವರು ಜೆಡಿಎಸ್ ಪಾಳಯಕ್ಕೆ ಜಿಗಿಯಲಿದ್ದಾರೆ ಎಂಬ ಗುಸುಗುಸು ಹರಡಿತ್ತು. ಆದರೆ ಜೆಡಿಎಸ್ ಜೊತೆ ಮೊದಲಿನಿಂದಲೂ ಕಿಡಿಕಾರುತ್ತಿದ್ದ ವಿಶ್ವನಾಥ್ ಯಾವ ಪಕ್ಷಕ್ಕೆ ಜಿಗಿಯಲಿದ್ದಾರೆ ಎಂಬುದು ಕುತೂಹಲದ ಪ್ರಶ್ನೆಯಾಗಿದೆ.