Advertisement

“ವಿಶ್ವನಾಥ್‌ ಟೀಕೆಗೆ ನೊಂದು ರಾಜೀನಾಮೆ’

11:13 PM Oct 16, 2019 | Team Udayavani |

ಮೈಸೂರು: “ಮಾಜಿ ಸಚಿವ ಎಚ್‌.ವಿಶ್ವನಾಥ್‌ ಅವರು ನನ್ನ ಬಗ್ಗೆ ವೈಯಕ್ತಿಕ ಟೀಕೆ ಮಾಡಿದ್ದರಿಂದ ಮನನೊಂದು ಸೆ.18ರಂದೇ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ. ನನ್ನ ರಾಜೀನಾಮೆ ವಿಚಾರ ಸ್ಪೀಕರ್‌ ಮುಂದಿದೆ’ ಎಂದು ಮಾಜಿ ಸಚಿವ ಸಾ.ರಾ.ಮಹೇಶ್‌ ತಿಳಿಸಿದರು.

Advertisement

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ನನ್ನ ರಾಜಕೀಯ ಜೀವನದಲ್ಲಿ ಯಾರ ಬಗ್ಗೆಯೂ ವೈಯಕ್ತಿಕವಾಗಿ ಟೀಕೆ ಮಾಡಿರಲಿಲ್ಲ. ಮಾಡುವುದೂ ಇಲ್ಲ. ಆದರೆ, ವಿಶ್ವನಾಥ್‌ ಅವರು ನನ್ನ ಬಗ್ಗೆ ವೈಯಕ್ತಿಕವಾಗಿ ಮೂರು ಬಾರಿ ಟೀಕೆ ಮಾಡಿದ್ದರಿಂದ ಮನನೊಂದು, ಸದನದಲ್ಲೇ ಎಲ್ಲವನ್ನೂ ಹೇಳಿದ್ದೇನೆ.

ಈ ಎಲ್ಲ ಬೆಳವಣಿಗೆಗಳಿಂದ ಮಾನಸಿಕವಾಗಿ ನೊಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ. ಸೆ.18ರಂದೇ ರಾಜೀನಾಮೆ ಸಲ್ಲಿಸಿದ್ದು, ಅಂದು ವಿಧಾನಸಭಾಧ್ಯಕ್ಷರು ಕೇಂದ್ರಸ್ಥಾನದಲ್ಲಿ ಇಲ್ಲದ ಕಾರಣ ವಿಧಾನಸಭೆಯ ಕಾರ್ಯದರ್ಶಿಗೆ ರಾಜೀನಾಮೆ ಸಲ್ಲಿಸಿ ಬಂದಿದ್ದೆ. ನಂತರ ಸ್ಪೀಕರ್‌ ಎರಡು ಬಾರಿ ನನ್ನನ್ನು ಕರೆಸಿ ಮನವೊಲಿಸುವ ಪ್ರಯತ್ನ ಮಾಡಿದರಾದರೂ ನಾನು ರಾಜೀನಾಮೆ ವಾಪಸ್‌ ಪಡೆದಿಲ್ಲ’ ಎಂದರು.

“ರಾಜಕಾರಣದಲ್ಲಿ ಇರುವವರ ಸಾರ್ವಜನಿಕ ಹಾಗೂ ವೈಯಕ್ತಿಕ ಚರಿತ್ರೆ ಬಿಳಿ ಹಾಳೆಯಂತಿರಬೇಕು. ಹೌದು, ನಾನು ರಿಯಲ್‌ಎಸ್ಟೇಟ್‌ ವ್ಯವಹಾರ ಮಾಡಿದ್ದೇನೆ. ರಿಯಲ್‌ ಎಸ್ಟೇಟ್‌ ವ್ಯವಹಾರ ಕಾನೂನು ಬಾಹಿರ ಆಗಿದ್ದರೆ ರದ್ದು ಮಾಡಿಸಲಿ. ರಿಯಲ್‌ ಎಸ್ಟೇಟ್‌ ಹೊರತುಪಡಿಸಿ ಬೇರಾವುದೇ ಮೂಲದಿಂದ ನಾನು ಹಣ ಸಂಪಾದನೆ ಮಾಡಿಲ್ಲ. ವಿಶ್ವನಾಥ್‌ ಅವರು ನನ್ನ ವಿರುದ್ಧ ಬಳಸಿರುವ ಪದಗಳು ಮನಸ್ಸಿಗೆ ಘಾಸಿ ಉಂಟು ಮಾಡಿವೆ.

ಅಶ್ಲೀಲ ಆರೋಪ ಹೊತ್ತು ಸಾರ್ವಜನಿಕ ಜೀವನದಲ್ಲಿ ಇರಲು ನನಗೆ ಮನಸ್ಸಿಲ್ಲ. ಆದ್ದರಿಂದ ಸ್ವ ಇಚ್ಛೆಯಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ’ ಎಂದರು. “ವಿಶ್ವನಾಥ್‌ ಅವರನ್ನು ಜೆಡಿಎಸ್‌ಗೆ ಸೇರ್ಪಡೆ ಮಾಡಿಕೊಳ್ಳುವ ಸಂದರ್ಭದಲ್ಲಿ ವಿಶ್ವನಾಥ್‌ ಒಳ್ಳೆಯವರಲ್ಲ. ನಂಬಿಕೆಗೆ ಅರ್ಹರಲ್ಲ ಎಂದು ಜಿ.ಟಿ.ದೇವೇಗೌಡ ಹೇಳಿದ್ದರು. ಆದರೂ ಅವರ ಮನವೊಲಿಸಿ ಪಕ್ಷಕ್ಕೆ ಕರೆ ತಂದಿದ್ದು ದೊಡ್ಡ ತಪ್ಪಾಯಿತು ಅನಿಸಿದೆ’ ಎಂದು ಹೇಳಿದರು.

Advertisement

“ಡಿ.ದೇವರಾಜ ಅರಸು ಶಿಷ್ಯ ನಾನು ಎನ್ನುವ ವಿಶ್ವನಾಥ್‌, ದೇವರಾಜ ಅರಸರ ಪುತ್ರಿ ಹುಣಸೂರು ಕ್ಷೇತ್ರದಲ್ಲಿ ವಿಧಾನಸಭೆ, ಮೈಸೂರು ಕ್ಷೇತ್ರದಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದಾಗ ಯಾವ ರೀತಿ ನಡೆದುಕೊಂಡರು ಅನ್ನುವುದು ಜನರಿಗೆ ಗೊತ್ತಿದೆ. ಮಂತ್ರಿ ಮಾಡಿದ ಎಸ್‌.ಎಂ.ಕೃಷ್ಣರ ವಿರುದ್ಧವೇ ಪುಸ್ತಕ ಬರೆದ್ರೀ. ಸಿದ್ದರಾಮಯ್ಯ ವಿರುದ್ಧ ಸೋನಿಯಾಗಾಂಧಿಗೆ ದೂರು ನೀಡಿದ್ರೀ. ನಂಬಿದವರಿಗೆ ಮೋಸ ಮಾಡುವುದೇ ನಿಮ್ಮ ಕೆಲಸವಾಗಿದೆ’ ಎಂದು ಹರಿಹಾಯ್ದರು.

9 ಗಂಟೆಗೆ ಚಾಮುಂಡಿ ಬೆಟ್ಟಕ್ಕೆ ಬನ್ನಿ, ಪ್ರಮಾಣ ಮಾಡಿ: ಅನರ್ಹ ಶಾಸಕ ಎಚ್‌.ವಿಶ್ವನಾಥ್‌ ನೀಡಿರುವ ಪಂಥಾಹ್ವಾನ ಸ್ವೀಕರಿಸಿದ್ದು, ಅವರು ಹೇಳಿರುವಂತೆಯೇ ಗುರುವಾರ ಬೆಳಗ್ಗೆ 9 ಗಂಟೆಗೆ ಚಾಮುಂಡಿ ಬೆಟ್ಟದಲ್ಲಿರುತ್ತೇನೆ. ವಿಶ್ವನಾಥ್‌ ಅವರೂ ದೇವಿಯ ಸನ್ನಿಧಿಗೆ ಬಂದು ನಾನಾಗಲಿ, ನನ್ನ ಕುಟುಂಬದವರಾಗಲಿ ಯಾವ ಆಸೆ, ಆಮಿಷಕ್ಕೆ ಒಳಗಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲವೆಂದು ಪ್ರಮಾಣ ಮಾಡಲಿ ಎಂದು ಮಾಜಿ ಸಚಿವ ಸಾ.ರಾ.ಮಹೇಶ್‌ ಸವಾಲು ಹಾಕಿದ್ದಾರೆ.

ವಿಧಾನಸಭಾ ಅಧಿವೇಶನದಲ್ಲಿಯೇ ವಿಶ್ವನಾಥ್‌ ಆಮಿಷಕ್ಕೆ ಒಳಗಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಜೆಡಿಎಸ್‌ ತೊರೆದು ಹೋಗಿದ್ದಾರೆಂದು ಹೇಳಿದ್ದೇನೆ. ಹಣ ಕೊಟ್ಟಿರುವವರ್ಯಾರೂ ನಾನೇ ಕೊಟ್ಟಿದ್ದೇನೆಂದು ಹೇಳಲ್ಲ. ಆದರೆ, ನೀವು ಚಾಮುಂಡಿಬೆಟ್ಟಕ್ಕೆ ಬರುವಾಗ ಮಾಜಿ ಪತ್ರಕರ್ತ ಎಂ.ಬಿ.ಮರಮ್‌ಕಲ್‌ ಅವರನ್ನೂ ಕರೆದು ಕೊಂಡು ಬನ್ನಿ. ಅವರಿಗೂ ಕೆಲ ವಿಚಾರಗಳು ಗೊತ್ತಿವೆ. ಕೇವಲ ದುಡ್ಡಿನ ವಿಚಾರವಲ್ಲ, ನನ್ನ ಬಗ್ಗೆ ಮಾಡಿರುವ ವೈಯಕ್ತಿಕ ಟೀಕೆಗಳೂ ಸತ್ಯ ಎಂದು ಪ್ರಮಾಣ ಮಾಡಿದರೆ ಸಾಕು. ನಾನು ಹೇಳಿದ್ದು ಸುಳ್ಳು ಅಂತ ಪ್ರಮಾಣ ಮಾಡಿದರೆ ರಾಜ್ಯದ ಜನತೆಯ ಕ್ಷಮೆ ಕೋರುತ್ತೇನೆ’ ಎಂದು ಹೇಳಿದರು.

ಸಾ.ರಾ.ಮಹೇಶ್‌ ಅವರು ಎಚ್‌.ವಿಶ್ವನಾಥ್‌ ಆರೋಪದಿಂದ ನೊಂದು ರಾಜೀನಾಮೆ ನೀಡಿರುವುದು ನಿಜ. ಸ್ಪೀಕರ್‌ ಊರಲ್ಲಿ ಇರಲಿಲ್ಲ, ವಾಪಸ್‌ ಪಡೆಯಲು ಹೇಳಿದ್ದೇನೆ. ಗುರುವಾರ ವಾಪಸ್‌ ಪಡೆಯುತ್ತಾರೆ. ಒಬ್ಬರು ಚಾಮುಂಡಿ ಬೆಟ್ಟಕ್ಕೆ ಬನ್ನಿ ಅಂತಾರೆ, ಮತ್ತೂಬ್ಬರು ಅವಶ್ಯಕತೆ ಇಲ್ಲ ಅಂತಾರೆ. ಆರೋಪ-ಪ್ರತ್ಯಾರೋಪಗಳು ಸರಿಯಲ್ಲ.
-ಎಚ್‌.ಡಿ.ದೇವೇಗೌಡ, ಮಾಜಿ ಪ್ರಧಾನಿ

Advertisement

Udayavani is now on Telegram. Click here to join our channel and stay updated with the latest news.

Next