ಬೆಂಗಳೂರು: ದಿವಂಗತ ಡಾ.ವಿಷ್ಣುವರ್ಧನ್ ಹುಟ್ಟು ಹಾಕಿದ್ದ ಸ್ನೇಹಲೋಕ ಕ್ರೀಡಾತಂಡದ ವತಿಯಿಂದ ಪ್ರತಿ ವರ್ಷ ನಡೆಯುತ್ತಿದ್ದ ಕ್ರಿಕೆಟ್ ಪಂದ್ಯಾವಳಿಯನ್ನು ಈ ಬಾರಿಯೂ ನಡೆಸಲು ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ನಿರ್ಧರಿಸಿದ್ದಾರೆ.
ಈ ವರ್ಷ ಆಯೋಜಿಸಿರುವ ಡಾ.ವಿಷ್ಣುವರ್ಧನ ಕಪ್ ಪಂದ್ಯಾವಳಿ ಫೆ.12ರಿಂದ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಫೆ.12ರಂದು ಜಯನಗರ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ನಡೆಯುವ ಪಂದ್ಯಾವಳಿಯನ್ನು ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ್ ಪ್ರಸಾದ್ ಮತ್ತು ನಗರ ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ಉದ್ಘಾಟಿಸಲಿದ್ದಾರೆ.
ಫೆ.12ರಿಂದ ಪ್ರತಿ ಭಾನುವಾರ ಬೆಳಗ್ಗೆ 9ರಿಂದ 1ಗಂಟೆವರೆಗೆ ಪಂದ್ಯಾವಳಿ ನಡೆಯಲಿವೆ. ಕಿಕ್ರೆಟ್ ಪಂದ್ಯಾವಳಿಯಲ್ಲಿ ಒಟ್ಟು 16 ತಂಡಗಳು ಭಾಗವಹಿಸಲಿವೆ. ಸಿನಿಮಾ ನಟರು, ತಾಂತ್ರಿಕ ವರ್ಗದವರು, ಮಾಧ್ಯಮ ಮತ್ತು ಕಾರ್ಪೋರೇಟ್ ಸಂಸ್ಥೆಗಳ ತಂಡಗಳು ಸೇರಿದಂತೆ ಇತರೆ ತಂಡಗಳು ಪಂದ್ಯದಲ್ಲಿ ಭಾಗವಹಿಸಲಿವೆ.
ಮೂರು ಕಾರ್ಪೋರೇಟ್ ಕಂಪನಿಗಳ ತಂಡವು ಈ ಬಾರಿ ಹೊಸದಾಗಿ ಸೇರ್ಪಡೆಯಾಗಿದ್ದು, ಉಳಿದಂತೆ ಹಳೆಯ ತಂಡಗಳೂ ಭಾಗವಹಿಸಲಿವೆ,” ಎಂದರು. ನಟರಾದ ಶಿವರಾಜಕುಮಾರ್, ಉಪೇಂದ್ರ, ದೇವರಾಜ್, ರಮೇಶ್‌ಭಟ್, ಸೃಜನ್ ಲೋಕೇಶ್, ಚೇತನ್, ಶೋಭ್‌ರಾಜ್, ರಮೇಶ್ ಅರವಿಂದ್ ಮತ್ತಿತರೆ ಕಲಾವಿದರು ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು.
ಮಾ.26 ರಂದು ಮೊದಲ ಸೆಮಿಫೈನಲ್ ಮತ್ತು ಏ.2ರಂದು ಎರಡನೇ ಸೆಮಿಫೈನಲ್ ಪಂದ್ಯ ನಡೆಯಲಿದೆ. ಸೆಮಿಫೈನಲ್‌ನಲ್ಲಿ ಗೆಲುವು ಸಾಧಿಸಿದ ತಂಡಗಳ ನಡುವೆ ಏ.9ರಂದು ಫೈನಲ್ ಹಣಾಹಣಿ ನಡೆಯಲಿದೆ ಎಂದು ತಿಳಿಸಿದರು.