ಪ್ರೀತಿ, ಒಂಚೂರು ಸಿಟ್ಟು, ಅಪಾರ ವಿನಯ, ಕಿಂಚಿತ್ ಸಂಕೋಚ, ಮುಚ್ಚುಮರೆಯಿಲ್ಲದ ಮಾತು, ಮನಗೆಲ್ಲುವ ಮಂದಹಾಸ- ಇವೆಲ್ಲದರ ಮೊತ್ತವಾಗಿದ್ದವರು ವಿಷ್ಣುವರ್ಧನ್. ಸಂಪತ್ ಕುಮಾರ್ ಆಗಿ ಚಿತ್ರರಂಗಕ್ಕೆ ಬಂದು “ವಂಶವೃಕ್ಷ’ದಲ್ಲಿ ಪುಟ್ಟ ಪಾತ್ರ ಮಾಡಿ, ರಾಮಾಚಾರಿಯಾಗಿ ಎದ್ದು ನಿಂತ ವಿಷ್ಣುವರ್ಧನ್ ಮತ್ತೆ ತಿರುಗಿ ನೋಡಲಿಲ್ಲ.
ಇನ್ನೂರು ಚಿತ್ರಗಳ ಗಡಿ ದಾಟಿದ ವಿಷ್ಣುವರ್ಧನ್ ಚಾರಿತ್ರಿಕ, ಪೌರಾಣಿಕ, ಸಾಮಾಜಿಕ ಪಾತ್ರಗಳಲ್ಲಿ ನಟಿಸಿ ಗೆದ್ದವರು. ಅಭಿಮಾನಿಗಳ ಪಾಲಿಗೆ “ಸಾಹಸ ಸಿಂಹ’, ಹೆಣ್ಮಕ್ಕಳ ಪಾಲಿಗೆ “ಬಂಧನ’ದ ಭಗ್ನಪ್ರೇಮಿ, “ಬಿಳಿಗಿರಿಯ ಬನ’ದ ಬಂಡಾಯಗಾರ, “ಹೊಂಬಿಸಿಲು’ ಚಿತ್ರದ ನಿಷ್ಪಾಪಿ, “ಸಿಡಿದೆದ್ದ ಸಹೋದರ’, “ಬಂಗಾರದ ಜಿಂಕೆ’ಯ ಬೆನ್ನಟ್ಟಿದ ಪ್ರೇಮಿ, “ಇಂದಿನ ರಾಮಾಯಣ’ದ ನ್ಯಾಯವಂತ, ದೆವ್ವಕ್ಕೆ ಸಡ್ಡು ಹೊಡೆದ “ಆಪ್ತಮಿತ್ರ’- ಹೀಗೆ ವಿಷ್ಣು ಎಲ್ಲ ಪಾತ್ರಗಳಲ್ಲೂ ನಟಿಸಿ ಗೆದ್ದವರು. ಅಪಾರ ಹಾಸ್ಯಪ್ರಜ್ಞೆ, ತುಂಬು ಮಾನವೀಯತೆ, ಸರಳ ಸಜ್ಜನಿಕೆಯ ವಿಷ್ಣು 71ನೇ ಹುಟ್ಟುಹಬ್ಬ ಈ ಬಾರಿ ಹಲವು ವಿಶೇಷತೆಗಳಿಂದ ಕೂಡಿದೆ.
ಬಲಗೈಲಿ ಕೊಟ್ಟದ್ದು ಎಡಗೈಗೆ ತಿಳಿಯಬಾರದು ಎಂಬಂತಿದ್ದವರು ವಿಷ್ಣು … ಯಾವತ್ತೂ ಅವರು ತಾವು ಮಾಡಿದ ಸಹಾಯದ ಕುರಿತು ಹೇಳಿಕೊಂಡವರೇ ಅಲ್ಲ.ವಿವಾದಗಳು ಅವರನ್ನು ಬೆನ್ನಟ್ಟಿ ಬಂದಾಗಲೂ ವಿಷ್ಣು ಮೌನಿಯಾಗಿದ್ದರು. ಅಂಬರೀಷ್ ಮತ್ತು ಅವರ ಸ್ನೇಹ ಚಿತ್ರರಂಗಕ್ಕೊಂದು ಮಾದರಿ ಎಂಬಂತಿತ್ತು. ವಿಷ್ಣುವರ್ಧನ್ ನಟಿಸಿದ ಚಿತ್ರಗಳ ಪೈಕಿ ನೆನಪಲ್ಲಿ ಉಳಿಯುವಂಥ ಚಿತ್ರಗಳ ಪಟ್ಟಿ ಸಾಕಷ್ಟು ದೊಡ್ಡದಿದೆ. “ಮುತ್ತಿನಹಾರ’ ಕನ್ನಡ ಚಿತ್ರರಂಗದಲ್ಲೇ ಒಂದು ಮೈಲಿಗಲ್ಲು. “ಬಂಧನ’, “ಆಪ್ತಮಿತ್ರ’, “ಆಪ್ತರಕ್ಷಕ’ಗಳ ನಡುವೆಯೇ ಅವರು “ಗಂಧರ್ವ ಗಿರಿ’ಯಂಥ ಸಿನಿಮಾ ಮಾಡಿದವರು. “ಹರಕೆಯ ಕುರಿ’ಯಂಥ ಅರ್ಥಪೂರ್ಣ ಚಿತ್ರದಲ್ಲಿ ನಟಿಸಿದವರು. “ಯಜಮಾನ’ ಚಿತ್ರದ ಗಳಿಕೆ ಇವತ್ತಿಗೂ ದಾಖಲೆಯಾಗಿಯೇ ಉಳಿದಿದೆ.
ಕನ್ನಡದಲ್ಲಷ್ಟೇ ಅಲ್ಲದೇ, ಹಿಂದಿ, ತೆಲುಗು, ತಮಿಳು ಚಿತ್ರಗಳಲ್ಲೂ ನಟಿಸಿದ್ದ ವಿಷ್ಣು, ಯಾವತ್ತೂ ಚಿತ್ರರಂಗದ ನಾಯಕನೆಂದು ತಮ್ಮನ್ನು ಕರೆದುಕೊಂಡವರೇ ಅಲ್ಲ. ನಾನು ತುಂಬ ಚಿಕ್ಕವನು, ನಾನು ಹಿಂದೆಯೇ ಇರಬೇಕು ಅನ್ನುತ್ತಿದ್ದವರು ಅವರು. ಎಲ್ಲರನ್ನೂ ಮುಂದೆ ಬಿಟ್ಟುಕೊಂಡು, “ಸ್ನೇಹಲೋಕ’ ಎಂಬ ತಂಡ ಕಟ್ಟಿ, ಸಮಾನ ಮನಸ್ಕರನ್ನು ಒಂದಾಗಿಸಿದ ಖ್ಯಾತಿಯೂ ಅವರದ್ದೇ.
ಇಂತಹ ತಮ್ಮ ನೆಚ್ಚಿನ ನಾಯಕನ ಹುಟ್ಟುಹಬ್ಬವನ್ನು ಅವರ ಅಭಿಮಾನಿಗಳು ನಾನಾ ರೀತಿಯ ಸಾಮಾಜಿಕ ಕಾರ್ಯಗಳ ಮೂಲಕ ಆಚರಿಸಲು ಸನ್ನದ್ಧರಾಗಿದ್ದಾರೆ. ಅಭಿಮಾನ್ ಸ್ಟುಡಿಯೋದಲ್ಲಿರುವ ವಿಷ್ಣು ಸ್ಮಾರಕ ಬಳಿ ತೆರಳಿ ಪೂಜೆ ಸಲ್ಲಿಸುವ ಜೊತೆಗೆ ಅನ್ನದಾನ, ರಕ್ತದಾನ ಶಿಬಿರವನ್ನು ಆಯೋಜಿಸಿದ್ದಾರೆ. ಡಾ.ವಿಷ್ಣು ಕನ್ನಡ ವೇದಿಕೆ ಬೆಂಗಳೂರು, ಹಿತೈಷಿ ಡಾ. ವಿಷ್ಣುವರ್ಧನ್ ಅಭಿಮಾನಿಗಳ ಬಳಗ ಮಲ್ಲತ್ತಹಳ್ಳಿ, ಶೃಂಗಾರ ಶಿಲ್ಪಿ ಡಾ. ವಿಷ್ಣುವರ್ಧನ್ ಅಭಿಮಾನಿಗಳ ಸಂಘ ಮಹಾಲಕ್ಷ್ಮೀ ಲೇಔಟ್, ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅಭಿಮಾನಿಗಳ ಸಂಘ ಕೆಂಗೇರಿ… ಹೀಗೆ ಸಾಕಷ್ಟು ಅಭಿಮಾನಿ ಸಂಘಗಳು ವಿಷ್ಣು ಅವರ 71ನೇ ಹುಟ್ಟುಹಬ್ಬಕ್ಕೆ ಹಲವಾರು ಕಾರ್ಯಕ್ರಮ ಹಮ್ಮಿಕೊಂಡಿವೆ. ಸಂಘದ ಪದಾಧಿಕಾರಿಗಳಾದ ಮಂಜು ಮಾಣಿಕ್ಯ, ಪ್ರತಾಪ್ ಎಸ್, ಎಂ.ಬಿ. ಲೋಕೇಶ್ ಗೌಡ, ಸಂಜೀವ ಕುಮಾರ್, ಮಂಜುನಾಥ್, ವೀರಕಪುತ್ರ ಶ್ರೀನಿವಾಸ್.. ಹೀಗೆ ಸಂಘದ ಅಭಿ ಮಾನಿ ಬಳಗ ವಿಷ್ಣುವರ್ಧನ್ ಹುಟ್ಟುಹಬ್ಬವನ್ನು ಆಚರಿಸಲು ಸಜ್ಜಾಗಿದೆ.
ವಿಷ್ಣುವರ್ಧನ್ ಅವರ “ಕೋಟಿಗೊಬ್ಬ’ ಚಿತ್ರ ನಿರ್ಮಿಸಿದ ನಿರ್ಮಾಪಕ ಸೂರಪ್ಪ ಬಾಬು ಈಗ ಸುದೀಪ್ ಅವರ ಜೊತೆ “ಕೋಟಿಗೊಬ್ಬ-3′ ಮಾಡುತ್ತಿದ್ದು, ಈ ಚಿತ್ರ ತಂಡ ಕೂಡಾ ತಮ್ಮದೇ ಶೈಲಿಯಲ್ಲಿ ವಿಷ್ಣು ನಮನ ಸಲ್ಲಿಸಲಿದೆ.