ಕೋಟ : ಬ್ರಹ್ಮಾವರ ಸಮೀಪ ಉಪ್ಪಿನಕೋಟೆಯ ಅಪಾರ್ಟ್ಮೆಂಟ್ ನಲ್ಲಿ ಜು.12ರಂದು ನಡೆದ ವಿಶಾಲ ಗಾಣಿಗ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರಿಗೆ ಮಹತ್ವದ ಮಾಹಿತಗಳು ಲಭ್ಯವಾಗಿದ್ದು, ವಿಶಾಲಾ ಅವರ ಪತಿ ರಾಮಕೃಷ್ಣ ಗಾಣಿಗನೇ ದುಬೈನಲ್ಲಿದ್ದುಕೊಂಡು ಪತ್ನಿಯ ಕೊಲೆಗೆ ಸಂಚುರೂಪಿಸಿ, ಅಂತರ್ ರಾಜ್ಯ ಬಾಡಿಗೆ ಹಂತಕರಿಗೆ ಸುಪಾರಿ ನೀಡಿದ್ದ ಎನ್ನುವ ಮಾಹಿತಿ ಇದೀಗ ಹರಿದಾಡುತ್ತಿದೆ.
ಗಂಗೊಳ್ಳಿ ಸಮೀಪ ಗುಜ್ಜಾಡಿ ನಾಯಕವಾಡಿಯ ನಿವಾಸಿ ವಾಸು ಗಾಣಿಗರ ಪುತ್ರಿ ವಿಶಾಲ ಗಾಣಿಗ ಉಪ್ಪಿನಕೋಟೆಯ ಅಪಾರ್ಟ್ಮೆಂಟ್ ನಲ್ಲಿ ನಿಗೂಢವಾಗಿ ಕೊಲೆಯಾಗಿದ್ದು, ಪ್ರಕರಣ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿತ್ತು.
ಜಿಲ್ಲಾ ಎಸ್.ಪಿ.ಯವರ ನೇತೃತ್ವದಲ್ಲಿ ರಚನೆಯಾದ ನಾಲ್ಕು ತನಿಖಾ ತಂಡಗಳು ಪ್ರಕರಣದ ಸತ್ಯಾಸತ್ಯತೆಯನ್ನು ಬಯಲಿಗೆಳೆಯಲು ಸಾಕಷ್ಟು ಶ್ರಮಿಸಿದ್ದು, ಹೊರ ರಾಜ್ಯದಲ್ಲು ಅವಿತಿದ್ದ ಇಬ್ಬರು ಹಂತಕರನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಕೊನೆಗೂ ಯಶಸ್ವಿಯಾಗಿದೆ ಎನ್ನುವ ಮಾಹಿತಿ ಕೇಳಿಬರುತ್ತಿದೆ. ಹಾಗೂ ರಾಮಕೃಷ್ಣ ಗಾಣಿಗನೇ ಕೊಲೆಗೆ ಸುಪಾರಿ ನೀಡಿರುವುದಾಗಿ ಹಂತಕರೇ ತಿಳಿಸಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ : ದರ್ಶನ್ ಬಗ್ಗೆ ಇಡೀ ಕರ್ನಾಟಕಕ್ಕೆ ಗೊತ್ತು: ಡಿ ಬಾಸ್ ಬೆಂಬಲಕ್ಕೆ ನಿಂತ ಸಂಸದ ಪಿ.ಸಿ ಮೋಹನ್
ರಾಮಕೃಷ್ಣ ಗಾಣಿಗನನ್ನು ಈಗಾಗಲೇ ಎರಡು-ಮೂರು ಬಾರಿ ಪೊಲೀಸರು ತನಿಖೆಗೊಳಪಡಿಸಿದ್ದು, ಜು.18 ರಂದು ಮತ್ತೊಮ್ಮೆ ವಶಕ್ಕೆ ಪಡೆದು ಮಹತ್ವದ ವಿಚಾರಗಳನ್ನು ಹೊರಗೆಡವಿದ್ದಾರೆ ಎಂದು ತಿಳಿದುಬಂದಿದೆ.
ಪ್ರಕರಣ ಇನ್ನೂ ವಿಚಾರಣೆಯ ಹಂತದಲ್ಲಿರುವ ಕಾರಣ ಪೊಲೀಸರು ಮಾಧ್ಯಮಗಳಿಗೆ ಯಾವುದೇ ಮಾಹಿತಿಗಳನ್ನು ಬಿಟ್ಟುಕೊಟ್ಟಿಲ್ಲ. ಕೊಲೆಗೆ ಕಾರಣವಾದ ಅಂಶಗಳೇನು? ಕೊಲೆ ಹೇಗೆ ನಡೆಯಿತು, ಯಾರೆಲ್ಲ ಪ್ರಕರಣದಲ್ಲಿ ಭಾಗಿಗಳಾಗಿದ್ದಾರೆ ಎನ್ನುವ ವಿಚಾರ ಪೊಲೀಸರ ಅಧಿಕೃತ ಹೇಳಿಕೆಯ ಅನಂತರವೇ ಹೊರಬೀಳಬೇಕಿದೆ.
ಇದನ್ನೂ ಓದಿ : ಬಾಹ್ಯಾಕಾಶ ಸಾಹಸ…ಜೆಫ್ ಬೆಝೋಸ್ ತಂಡಕ್ಕೆ ಮುಂಬೈನ ಯುವತಿ ಸಂಜಲ್ ಸಾಥ್!