Advertisement

ಹೈಕೋರ್ಟ್ ಸೂಚನೆಯಂತೆ ವಿರೂಪಾಪೂರಗಡ್ಡಿ ಹಳೆ ರಸ್ತೆ ಒತ್ತುವರಿ ತೆರವು ಕಾರ್ಯಾಚರಣೆ

06:39 PM Jul 06, 2022 | Team Udayavani |

ಗಂಗಾವತಿ: ತಾಲೂಕಿನ ವಿರೂಪಾಪೂರಗಡ್ಡಿಯಲ್ಲಿ  ಹಳೆಯ ರಸ್ತೆಯನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದನ್ನು ತಹಶೀಲ್ದಾರ್ ಯು.ನಾಗರಾಜ ನೇತೃತ್ವದಲ್ಲಿ ತಾಲೂಕು ಆಡಳಿತ ಕಾರ್ಯಾಚರಣೆ ಮೂಲಕ ತೆರವುಗೊಳಿಸಿತು.

Advertisement

ವಿರೂಪಾಪೂರಗಡ್ಡಿ ನಿವಾಸಿ ಪ್ರಸಾದ ಎನ್ನುವವರು ಧಾರವಾಡದ ಹೈಕೋರ್ಟ್ ನಲ್ಲಿ ದಾವೆ ಹೂಡಿ ತಮ್ಮ ಗದ್ದೆಯಲ್ಲಿ ರಸ್ತೆ ನಿರ್ಮಿಸಲಾಗಿದೆ. ಗ್ರಾಮ ನಕ್ಷೆಯ ಪ್ರಕಾರ ಇರುವ ರಸ್ತೆಯನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದು ಕೂಡಲೇ ತೆರವು ಮಾಡಿ ತಮ್ಮ ಒಡೆತನದ ಭೂಮಿಯಲ್ಲಿರುವ ರಸ್ತೆ ಬಿಟ್ಟುಕೊಡುವಂತೆ ಮನವಿ ಮಾಡಿದ್ದರು.

ಮನವಿಯನ್ನು ಆಲಿಸಿದ ಧಾರವಾಡ ಹೈಕೋರ್ಟ್ ಹಳೆಯ ರಸ್ತೆ ಒತ್ತುವರಿ ತೆರವುಗೊಳಿಸಿ ರಸ್ತೆ ನಿರ್ಮಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಕಂದಾಯ, ಗ್ರಾಮೀಣಾಭಿವೃದ್ಧಿ, ಅರಣ್ಯ ಮತ್ತು ಸರ್ವೇ ಇಲಾಖೆ ಮತ್ತು ಗ್ರಾ.ಪಂ ಪಿಡಿಒಗೆ ಸೂಚನೆ ನೀಡಿತ್ತು. ಬುಧವಾರ ಬೆಳ್ಳಂಬೆಳ್ಳಿಗ್ಗೆ ಜೆಸಿಬಿಗಳ ಸಮೇತ ತಾಲೂಕು ಮಟ್ಟದ ಅಧಿಕಾರಿಗಳು ವಿರೂಪಾಪೂರ ಗಡ್ಡಿಗೆ ತೆರಳಿ ಗ್ರಾಮ ನಕ್ಷೆಯಂತೆ ಹಳೆಯ ರಸ್ತೆಯನ್ನು ಒತ್ತುವರಿ ಮಾಡಿದ್ದ ಸರ್ವೇ ನಂಬರ್ 40, 41,42,43, 45 ರಲ್ಲಿ ಒತ್ತುವರಿಯನ್ನು ತೆರವುಗೊಳಿಸಲಾಯಿತು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಯು.ನಾಗರಾಜ, ಅರಣ್ಯ ಸಂರಕ್ಷಣಾಧಿಕಾರಿ ಶಿವರಾಜ್ ಮೇಟಿ, ತಾ.ಪಂ.ಇಒ ಮಹಾಂತೇಶ ಗೌಡ ಪಾಟೀಲ್ ಸೇರಿ ಅರಣ್ಯ, ಆರ್‌ದಿಪಿಆರ್ ಇಲಾಖೆಯ ಅಧಿಕಾರಿಗಳಿದ್ದರು.

ವಿರೂಪಾಪೂರಗಡ್ಡಿಯಲ್ಲಿದ್ದ ಹಳೆಯ ರಸ್ತೆಯನ್ನು ಒತ್ತುವರಿ ಮಾಡಲಾಗಿದ್ದು ಸ್ವಂತ ಗದ್ದೆಯಲ್ಲಿ ಪ್ರಸ್ತುತ ರಸ್ತೆ ಇದ್ದು ಗ್ರಾಮ ನಕ್ಷೆಯಂತೆ ಹಳೆಯ ರಸ್ತೆ ತೆರವುಗೊಳಿಸುವಂತೆ ಧಾರವಾಡ ಹೈಕೋರ್ಟ್ ಸೂಚನೆಯಂತೆ ತೆರವು ಕಾರ್ಯಾಚರಣೆ ಮಾಡಲಾಗುತ್ತಿದೆ. ಸುಮಾರು 2 ಕಿ.ಮೀ.ನಷ್ಟು ಹಳೆಯ ರಸ್ತೆ ಒತ್ತುವರಿಯನ್ನು ಐದಾರು ರೈತರು ಮಾಡಿದ್ದು ತೆರವುಗೊಳಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗುತ್ತದೆ. ಸಂಬಂಧಪಟ್ಟ  ಇಲಾಖೆಯಿಂದ ಹಳೆಯ ರಸ್ತೆ ನಿರ್ಮಿಸಲಾಗುತ್ತದೆ ಎಂದು ತಹಶೀಲ್ದಾರ್ ಯು. ನಾಗರಾಜ ಉದಯವಾಣಿಗೆ ತಿಳಿಸಿದ್ದಾರೆ

Advertisement
Advertisement

Udayavani is now on Telegram. Click here to join our channel and stay updated with the latest news.

Next