ಬ್ಯಾಡಗಿ: ಉತ್ತಮ ಕೆಲಸ ನಿರ್ವಹಿಸುವವರಿಗೆ ಸಂಕಷ್ಟಗಳು ಎದುರಾಗುವುದು ಸಹಜ. ಹೀಗಾಗಿ, ಸುಭದ್ರ ಹಾಗೂ ಸಮೃದ್ಧ ರಾಷ್ಟ್ರ ನಿರ್ಮಾಣಕ್ಕೆ ಕಳೆದ 10 ವರ್ಷಗಳಿಂದ ಕಟಿಬದ್ಧರಾಗಿ ನಿಂತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಯುದ್ಧ, ಭಯೋತ್ಪಾದನೆ, ಕೊರೊನಾ ಸೇರಿದಂತೆ ನೆರೆಯ ಭೀತಿ ಎದುರಿಸಬೇಕಾಗಿದೆ ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಅಭಿಪ್ರಾಯಪಟ್ಟರು.
ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ತಾಲೂಕಿನ ದಾಸನಕೊಪ್ಪ ಗ್ರಾಮದಲ್ಲಿ ಸುಮಾರು 26 ಕೋಟಿ ರೂ. ವೆಚ್ಚದಲ್ಲಿ ಕೈಗೊಂಡಿರುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ದೇಶ ಬಹಳಷ್ಟು ಸಂದಿಗ್ಧ ಸ್ಥಿತಿ ಎದುರಿಸುತ್ತಿದೆ. ಇಂತಹ ಸಂಕಷ್ಟದ ದಿನಗಳನ್ನು ದೇಶ ಹಿಂದೆಂದೂ ನೋಡಿಯೇ ಇಲ್ಲ.
ರೈಲ್ವೆ ಸೇರಿದಂತೆ ಆದಾಯ ಬರುವಂತಹ ಬಹುತೇಕ ಇಲಾಖೆಗಳು ಕೊರೊನಾ ಕಾರಣಕ್ಕೆ ಸ್ಥಗಿತಗೊಂಡಿವೆ. ಪಕ್ಕದ ಚೀನಾದಿಂದ ಯದ್ಧ ಭೀತಿ ಎದುರಾಗಿದೆ. ಅಷ್ಟೇ ಅಲ್ಲ, ಅತಿವೃಷ್ಟಿಯಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಹೀಗಿರುವಾಗ ಅಭಿವೃದ್ಧಿ ಕಾರ್ಯಗಳಿಗೆ ಹಣಕಾಸಿನ ಕೊರತೆ ಇಲ್ಲದಂತೆ ನೋಡಿಕೊಳ್ಳುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು.
ಆತಂಕಗೊಳ್ಳುವ ಅವಶ್ಯಕತೆಯಿಲ್ಲ: ದೇಶದ ನಾಗರಿಕರು ಯಾವುದೇ ಕಾರಣಕ್ಕೂ ಆತಂಕಗೊಳ್ಳುವ ಅವಶ್ಯಕತೆ ಇಲ್ಲ. ಎಷ್ಟೇ ಕಷ್ಟಗಳು ಬಂದರೂ ಎದುರಿಸುವ ಶಕ್ತಿ ಪ್ರಧಾನಮಂತ್ರಿಗಳಿಗೆ ಇದೆ. ಜನರ ಸಂಕಷ್ಟಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ನೀಡುವುದು ಜವಾಬ್ದಾರಿಯುತ ಜನಪ್ರತಿನಿಧಿ ಗಳ ಕರ್ತವ್ಯ. ಹಿಂದಿನ ಸರ್ಕಾರಗಳಿಗೆ ಯಾವುದೇ ಕಾರಣಕ್ಕೂ ಹೋಲಿಕೆ ಮಾಡದಂತೆ ಮನವಿ ಮಾಡಿದರು.
ಗ್ರಾಮಗಳ ಅಭಿವೃದ್ಧಿಗೆ ಆದ್ಯತೆ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗ್ರಾಮಗಳ ಅಭಿವೃದ್ಧಿಗೆ ಆದ್ಯತೆ ನೀಡುತ್ತಿವೆ. ಇದರಿಂದ ಗ್ರಾಮೀಣ ಪ್ರದೇಶಗಳ ರಸ್ತೆಗಳನ್ನು ಅಭಿವೃದ್ಧಿಪಡಿಸುವ ಮೂಲಕ ಅಲ್ಲಿನ ಜನರಿಗೆ ಮೂಲ ಸೌಕರ್ಯ ಕಲ್ಪಿಸಲು ಬದ್ಧವಾಗಿ ನಿಂತಿದ್ದೇವೆ. ನಮ್ಮ ಅಧಿಕಾರದ ಅವಧಿಯಲ್ಲಿ ಎಲ್ಲ ರಸ್ತೆಗಳನ್ನು ಮೇಲ್ದರ್ಜೆಗೇರಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ವೀರಭದ್ರಪ್ಪ ಗೊಡಚಿ, ತಾಪಂ ಮಾಜಿ ಸದಸ್ಯ ಹನುಮಗೌಡ್ರ ಪಾಟೀಲ, ಉಮೇಶ ರಟ್ಟಿಹಳ್ಳಿ, ಇಂಜಿನಿಯರ್ ಬಳಿಗಾರ ಸೇರಿದಂತೆ ಗ್ರಾಮದ ಮುಖಂಡರು ಉಪ ಸ್ಥಿತರಿದ್ದರು.