ಕಟಕ್ : ಕ್ಯಾನ್ಸರ್ ವಿರುದ್ಧದ ಹೋರಾಟದ ಬಳಿಕ ಒಂದು ಹಂತದಲ್ಲಿ ನಾನು ಕ್ರಿಕೆಟ್‌ನಿಂದಲೇ ನಿವೃತ್ತನಾಗಲು ಆಲೋಚಿಸಿದ್ದೆ; ಆದರೆ ಕ್ಯಾಪ್ಟನ್ ವಿರಾಟ್ ಕೊಹ್ಲಿ ನನ್ನ ಮೇಲಿಟ್ಟ ವಿಶ್ವಾಸದಿಂದಾಗಿ ನಾನು ಕ್ರಿಕೆಟ್‌ನಲ್ಲಿ ಮುಂದುವರಿಯುವಂತಾಗಿದೆ; ಕೊಹ್ಲಿ ನನ್ನ ಮೇಲಿಟ್ಟಿರುವ ವಿಶ್ವಾಸಕ್ಕೆ ಪ್ರತಿಯಾಗಿ ನಾನು ಮರಳಿ ಕಾಣಿಕೆ ನೀಡುವುದು ಅಗತ್ಯವಾಗಿದೆ’ ಎಂದು ಇಂಗ್ಲಂಡ್ ಎದುರಿನ ಎರಡನೇ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಪಂದ್ಯದಲ್ಲಿ 150 ರನ್ ಗಳ ಅಮೋಘ ಕಾಣಿಕೆ ನೀಡಿರುವ ಯುವರಾಜ್ ಸಿಂಗ್ ಹೇಳಿದ್ದಾರೆ.
“ನಿಮಗೆ ತಂಡದ ಹಾಗೂ ನಾಯಕನ ಬೆಂಬಲ ಇರುವುದಾದಲ್ಲಿ ಸಹಜವಾಗಿಯೇ ಯಾವತ್ತೂ ನಿಮಗೆ ಆತ್ಮ ವಿಶ್ವಾಸ ಇರಬಲ್ಲುದು. ಕ್ಯಾಪ್ಟನ್ ವಿರಾಟ್ ಕೊಹ್ಲಿ ನನ್ನ ಮೇಲೆ ಅಪಾರವಾದ ವಿಶ್ವಾಸವನ್ನು ಇರಿಸಿದ್ದಾರೆ. ಹಾಗೆಯೇ ತಂಡದ ಡ್ರೆಸ್ಸಿಂಗ್ ರೂಮ್‌ನಲ್ಲಿರುವ ಇತರರು ಕೂಡ ನನ್ನ ಮೇಲೆ ವಿಶ್ವಾಸ ಇರಿಸಿದ್ದಾರೆ. ಇದುವೇ ನನ್ನ ಆತ್ಮವಿಶ್ವಾಸವನ್ನು ಹಲವು ಪಟ್ಟು ಹೆಚ್ಚಿಸಿದೆ’ ಎಂದು ಯುವರಾಜ್ ಸಿಂಗ್ ಹೇಳಿದರು.
ಯುವರಾಜ್ ಅವರ ಸೂಪರ್ ಶತಕದ ಬಲದಲ್ಲಿ ಭಾರತ ನಿನ್ನೆಯ ಏಕದಿನ ಪಂದ್ಯವನ್ನು ಗೆಲ್ಲಲು ಸಾಧ್ಯವಾಯಿತಲ್ಲದೆ 3 ಪಂದ್ಯಗಳ ಈ ಸರಣಿಯನ್ನು 2-0 ಅಂತರದಲ್ಲಿ ಗೆಲ್ಲುವ ಸಾಧನೆ ಮಾಡಿದೆ.
“ನಾನು ಕ್ಯಾನ್ಸರ್ ಗೆದ್ದ ಸಂದರ್ಭದಲ್ಲಿ ಅಸಂಖ್ಯಾತ ಅಭಿಮಾನಿಗಳು ನನ್ನ ಬೆಂಬಲಕ್ಕೆ ನಿಂತಿದ್ದರು. ಅಭಿಮಾನಿಗಳ ಬೆಂಬಲ ಯಾವತ್ತೂ ನನ್ನ ಪಾಲಿಗಿತ್ತು. ಆದರೂ ಒಂದು ಸಂದರ್ಭದಲ್ಲಿ ನನ್ನನ್ನು ತಂಡದಿಂದ ಕೈಬಿಡಲಾಯಿತು. ಆಗ ನಾನು ಕ್ರಿಕೆಟ್‌ನಿಂದ ನಿವೃತ್ತನಾಗಲು ಆಲೋಚಿಸಿದ್ದೆ. ಆದರೂ ಅಪಾರ ಜನಬೆಂಬಲ ನನ್ನ ಪಾಲಿಗಿತ್ತು. ಹಾಗಾಗಿ ನಾನು ಸೋಲೊಪ್ಪುವ ಪ್ರಶ್ನೆಯೇ ಇರಲಿಲ್ಲ; ನಾನು ನನ್ನ ಕಠಿನ ಪರಿಶ್ರಮವನ್ನು ಮುಂದುವರಿಸುತ್ತಲೇ ಹೋದೆ; ಕಾಲ ಖಂಡಿತ ಬದಲಾಗುತ್ತದೆ ಎಂಬ ನನ್ನ ನಂಬಿಕೆಯೇ ಕೊನೆಗೆ ಸತ್ಯವಾಯಿತು’ ಎಂದು 35ರ ಹರೆಯದ ಯುವರಾಜ್ ಸಿಂಗ್ ಹೇಳಿದರು.
2011ರಲ್ಲಿ ಚೆನ್ನೈನಲ್ಲಿ ನಡೆದಿದ್ದ ವಿಶ್ವ ಕಪ್ ಪಂದ್ಯದ ಬಳಿಕ ಸರಿ ಸುಮಾರು ಆರು ವರ್ಷಗಳ ಬಳಿಕ ಗ್ರೇಟ್ ಕಮ್ ಬ್ಯಾಕ್ ಮಾಡಿದ ಯುವರಾಜ್ ಸಿಂಗ್ ನಿನ್ನೆ ಗುರುವಾರದ ತಮ್ಮ 14ನೇ ಶತಕದ ಬಗ್ಗೆ ಅತ್ಯಂತ ಸಂತುಷ್ಟರಾಗಿದ್ದಾರೆ.
“ಆರು ವರ್ಷಗಳ ಬಳಿಕ ಶತಕದೊಂದಿಗಿನ ಈ ಕಮ್ ಬ್ಯಾಕ್ ಬಗ್ಗೆ ನನಗೆ ಗ್ರೇಟ್ ಅನ್ನಿಸುತ್ತಿದೆ. ಕ್ಯಾನ್ಸರ್‌ನಿಂದ ಚೇತರಿಸಿಕೊಂಡ ಬಳಿಕದ 2 – 3 ವರ್ಷಗಳ ಕಾಲ ತುಂಬಾ ಕಷ್ಟವಾಯಿತು. ಫಿಟ್‌ನೆಸ್‌ಗಾಗಿ ಸಾಕಷ್ಟು ಬೆವರು ಹರಿಸಿದೆ. ಆದರೆ ಅದಾಗಲೇ ನಾನು ತಂಡದಿಂದ ಹೊರಬಿದ್ದಿದ್ದೆ. ಅನಂತರದಲ್ಲಿ ನನಗೆ ತಂಡದಲ್ಲಿ ಶಾಶ್ವತ ಸ್ಥಾನ ಪಡೆಯಲು ಸಾಧ್ಯವಾಗಲೇ ಇಲ್ಲ’ ಎಂದು ಯುವರಾಜ್ ಆತ್ಮಾವಲೋಕನ ಮಾಡಿದರು.
“ನನ್ನ ಬಗ್ಗೆ ಯಾರು ಯಾವ ಪ್ರತಿಕ್ರಿಯೆ ನೀಡುತ್ತಿದ್ದಾರೆ ಎಂದು ನಾನು ತಲೆ ಕೆಡಿಸಿಕೊಳ್ಳುವುದಿಲ್ಲ; ನಾನು ಟಿವಿ ನೋಡುವುದಿಲ್ಲ; ಪೇಪರ್ ಓದುವುದಿಲ್ಲ; ನಾನು ನನ್ನ ಆಟದಲ್ಲಷ್ಟೇ ಮನಸ್ಸನ್ನು ಕೇಂದ್ರೀಕರಿಸುತ್ತೇನೆ. ಹಾಗಾಗಿ ಅಂತಾರಾಷ್ಟ್ರೀಯ ಕ್ರಿಕೆಟಿಗೆ ನಾನು ಈಗಲೇ ಅರ್ಹನಾಗಿ ಉಳಿದಿದ್ದೇನೆ; ನಿನ್ನೆಯದು ನಿಜಕ್ಕೂ ನನ್ನ ಪಾಲಿಗೆ ನನ್ನ ದಿನವೇ ಆದದ್ದು ನನಗೆ ಅತೀವ ಸಂತಸ ತಂದಿದೆ’ ಎಂದು ಯುವರಾಜ್ ತೃಪ್ತಿಯಿಂದ ಹೇಳಿದರು.