ಬೆಂಗಳೂರು: ʼಕಿಸ್ʼ ಖ್ಯಾತಿಯ ವಿರಾಟ್ ನಾಯಕ ನಟನಾಗಿ ನಟಿಸುತ್ತಿರುವ ಹೊಸ ಸಿನಿಮಾ ʼರಾಯಲ್ʼ ಚಿತ್ರದ ಟೈಟಲ್ ಲಾಂಚ್ ಸೋಮವಾರ (ಫೆ.6 ರಂದು) ನೆರವೇರಿತು. ಸಿನಿಮಾದ ಟೈಟಲನ್ನು ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ರಿಲೀಸ್ ಮಾಡಿ ಚಿತ್ರ ತಂಡಕ್ಕೆ ಶುಭ ಹಾರೈಸಿದರು.
ದಿನಕರ್ ತೂಗುದೀಪ ನಿರ್ದೇಶನ ಮಾಡಲಿರುವ ಸಿನಿಮಾಕ್ಕೆ ʼರಾಯಲ್ʼ ಎಂದು ಟೈಟಲ್ ಇಡಲಾಗಿದ್ದು, ಈ ಹಿಂದೆ ʼಕಿಸ್ʼ ಸಿನಿಮಾದಲ್ಲಿ ನಟಿಸಿ ಗಮನ ಸೆಳೆದಿದ್ದ ವಿರಾಟ್ ನಾಯಕ ನಟನಾಗಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಸಿನಿಮಾಕ್ಕೆ ನಾಯಕಿಯಾಗಿ ಸಂಜನಾ ಆನಂದ್ ಅವರು ಆಯ್ಕೆಯಾಗಿದ್ದಾರೆ.
ಈ ಸಿನಿಮಾವನ್ನು ಜಯಣ್ಣ – ಭೋಗಣ್ಣ ಅವರ ಜಯಣ್ಣ ಫಿಲ್ಮ್ಸ್ ನಿರ್ಮಾಣ ಮಾಡಲಿದೆ. ಟೈಟಲ್ ರಿಲೀಸ್ ಸಂದರ್ಭದಲ್ಲಿ ಹೊಂಬಾಳೆ ಫಿಲ್ಮ್ಸ್ ನಿರ್ಮಾಪಕ ವಿಜಯ್ ಕಿರಗಂದೂರು ಅವರು ಕೂಡ ಅತಿಥಿಯಾಗಿ ಆಗಮಿಸಿದ್ದರು.
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ದಿನಕರ್ ತೂಗುದೀಪ ಅವರು ಪುನೀತ್ ರಾಜ್ ಕುಮಾರ್ ಅವರೊಂದಿಗೆ ಸಿನಿಮಾ ಮಾಡಬೇಕಿತ್ತು.