ಬೆಂಗಳೂರು: ಈ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆರಂಭವಾಗಲು ಇನ್ನೇನು ಕೆಲವೇ ವಾರಗಳು ಬಾಕಿಯಿದೆ. ಎಲ್ಲಾ ಹತ್ತು ತಂಡಗಳು ತಮ್ಮ ತಯಾರಿಯಲ್ಲಿದೆ. ಆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮಾತ್ರ ಇನ್ನೂ ತಮ್ಮ ನಾಯಕನ ಹೆಸರನ್ನೇ ಘೋಷಣೆ ಮಾಡಿಲ್ಲ.
ಕಳೆದ ಸೀಸನ್ ನ ಬಳಿಕ ವಿರಾಟ್ ಕೊಹ್ಲಿ ನಾಯಕತ್ವವನ್ನು ತೊರೆದಿದ್ದಾರೆ. ಒತ್ತಡವನ್ನು ನಿಭಾಯಿಸುವ ದೃಷ್ಟಿಯಿಂದ ವಿರಾಟ್ ಈ ನಿರ್ಧಾರ ಕೈಗೊಂಡಿದ್ದರು. ಸದ್ಯ ತಂಡದಲ್ಲಿರುವ ಗ್ಲೆನ್ ಮ್ಯಾಕ್ಸ್ ವೆಲ್ ಅಥವಾ ಫಾಫ್ ಡುಪ್ಲೆಸಿಸ್ ತಂಡದ ನಾಯಕನಾಗುವ ರೇಸ್ ನಲ್ಲಿದ್ದಾರೆ. ಈ ನಡುವೆ ವಿರಾಟ್ ಮತ್ತೆ ನಾಯಕನಾಗುತ್ತಾರೆ ಎಂಬ ವಾದವೂ ಕೇಳಿಬರುತ್ತಿದೆ.
ಆದಾಗ್ಯೂ, ವಿರಾಟ್ ಕೊಹ್ಲಿ ನಾಯಕತ್ವ ತ್ಯಜಿಸುವ ಮೂಲಕ ಸರಿಯಾದ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಆರ್‌ಸಿಬಿ ಮಾಜಿ ನಾಯಕ ಡೇನಿಯಲ್ ವೆಟ್ಟೋರಿ ಹೇಳಿದ್ದಾರೆ.
ಇದನ್ನೂ ಓದಿ:ಕದನ ಕಣದಲ್ಲಿ ಟೆನಿಸ್ ಸೇನಾನಿ! ಉಕ್ರೇನಿಯನ್ ಟೆನಿಸಿಗನ ನೆರವಿಗೆ ಜೊಕೋವಿಕ್
“ಇಲ್ಲ, ಕೊಹ್ಲಿ ನಾಯಕನಾಗಿ ಹಿಂತಿರುಗುವುದಿಲ್ಲ. ಫ್ರಾಂಚೈಸಿ ಕ್ರಿಕೆಟ್ ಅಥವಾ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅದು ಎಂದಿಗೂ ಕೆಲಸ ಮಾಡುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಒಮ್ಮೆ ನಾಯಕತ್ವ ಬದಲಾಯಿಸಿದರೆ ನಂತರ ಸ್ಥಾನ ಪಡೆಯಲು ಸಾಧ್ಯವಾಗದು” ಎಂದು ವೆಟ್ಟೋರಿ ಹೇಳಿದರು.
ಆರ್‌ಸಿಬಿಯು ಹರಾಜಿಗಿಂತ ಮೊದಲು ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಮೊಹಮ್ಮದ್ ಸಿರಾಜ್ ಅವರನ್ನು ಉಳಿಸಿಕೊಂಡಿತ್ತು. ಆದರೆ ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಫಾಫ್ ಡು ಪ್ಲೆಸಿಸ್ ಅವರ ಸೇರ್ಪಡೆ ನಾಯಕತ್ವದ ವಿಷಯದಲ್ಲಿ ಹೆಚ್ಚಿನ ಆಯ್ಕೆಗಳನ್ನು ನೀಡಿದೆ.