ತಿರುವನಂತಪುರಂ: ಭಾನುವಾರ ಭಾರತ-ವಿಂಡೀಸ್ ನಡುವೆ ನಡೆದ 2ನೇ ಟಿ20 ಪಂದ್ಯದ ವೇಳೆ, ರಿಷಭ್ ಪಂತ್‌ರನ್ನು ಅಣಕಿಸುತ್ತಿದ್ದ ಅಭಿಮಾನಿಗಳಿಗೆ ಸುಮ್ಮನಿರುವಂತೆ ನಾಯಕ ವಿರಾಟ್ ಕೊಹ್ಲಿ ಸೂಚಿಸಿದ್ದಾರೆ. ಅದು ಸದ್ಯದ ಚರ್ಚಾ ವಿಷಯ.
ವಿಂಡೀಸ್ ಇನಿಂಗ್ಸ್‌ನ 5ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ರಿಷಭ್ ಪಂತ್ ಎವಿನ್ ಲೆವಿಸ್ ಕ್ಯಾಚ್ ಕೈ ಚೆಲ್ಲಿದರು. ಆಗ ತಕ್ಷಣ ಕೇರಳ ಅಭಿಮಾನಿಗಳು, ಧೋನಿ, ಧೋನಿ ಎಂದು ಕೂಗತೊಡಗಿದರು. ಇದರಿಂದ ಸಿಟ್ಟಾದ ಕೊಹ್ಲಿ ಅಭಿಮಾನಿಗಳತ್ತ ಕೈತೋರಿ ಸುಮ್ಮನಿರುವಂತೆ ತಿಳಿಸಿದರು.
ಇತ್ತೀಚೆಗೆ ರಿಷಭ್ ಪಂತ್ ತಪ್ಪು ಮಾಡಿದಾಗೆಲ್ಲ ಅಭಿಮಾನಿಗಳು ಧೋನಿ, ಧೋನಿ ಎಂದು ಕೂಗುವುದು ಸಾಮಾನ್ಯವಾಗಿದೆ. ಕೇರಳದಲ್ಲಿ ಈ ಘಟನೆಗೆ ಇನ್ನೂ ಒಂದು ಆಯಾಮವಿದೆ. ಸ್ಥಳೀಯ ಆಟಗಾರ ಸಂಜು ಸ್ಯಾಮ್ಸನ್‌ರನ್ನು ಭಾನುವಾರವಾದರೂ ತಂಡಕ್ಕೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ ಎಂದು ಅಭಿಮಾನಿಗಳು ಭಾವಿಸಿದ್ದರು. ಅದು ಸಾಧ್ಯವಾಗದ ಸಿಟ್ಟೂ ಕೂಡ ಇಲ್ಲಿ ಕೆಲಸ ಮಾಡಿದೆ. ಒಂದು ವೇಳೆ ಭುವನೇಶ್ವರ್ ಅವರ ಆ ಓವರ್‌ನಲ್ಲಿ ಎವಿನ್ ಲೆವಿಸ್ ಹಾಗೂ ಲೆಂಡ್ಲ್ ಸಿಮನ್ಸ್ ನೀಡಿದ ಕ್ಯಾಚನ್ನು ಪಂತ್, ವಾಷಿಂಗ್ಟನ್ ಸುಂದರ್ ಕೈಚೆಲ್ಲದಿದ್ದರೆ, ಭಾರತಕ್ಕೆ ಗೆಲ್ಲುವ ಅವಕಾಶವೂ ಇತ್ತು.
ಈ ಅಂಶವೂ ಅಭಿಮಾನಿಗಳನ್ನು ಕೆರಳಿಸಿದೆ. ಕೊಹ್ಲಿ ನೇರ ನಡೆನುಡಿ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ನೇರ ನಡೆನುಡಿಗೆ ಹೆಸರುವಾಸಿ. ಮೈದಾನದಲ್ಲಿ ಅವರ ವರ್ತನೆ ಕೆಲವೊಮ್ಮೆ ಅತಿರೇಕ ಅನಿಸಿದರೂ, ಅವರಲ್ಲಿ ಅಪೂರ್ವ ಮಾನವೀಯ ಗುಣವಿದೆಯೆನ್ನುವುದು ಹಲವು ಬಾರಿ ಸಾಬೀತಾಗಿದೆ.
ತಿರುವನಂತಪುರಂನಲ್ಲಿ ಅಭಿಮಾನಿಗಳನ್ನು ಸುಮ್ಮನಾಗಿಸಿದ ಅವರು, ಇದೇ ವರ್ಷ ಇಂಗ್ಲೆಂಡ್‌ನಲ್ಲಿ ನಡೆದ ವಿಶ್ವಕಪ್ ವೇಳೆಯೂ ಹೀಗೆಯೇ ಮಾಡಿದ್ದರು. ಆಗ ಆಸ್ಟ್ರೇಲಿಯ ಕ್ರಿಕೆಟ್ ತಂಡದ ಮಾಜಿ ನಾಯಕ ಸ್ಟೀವ್ ಸ್ಮಿತ್‌ರನ್ನು ಭಾರತೀಯ ಅಭಿಮಾನಿಗಳು, ಚೆಂಡು ವಿರೂಪ ಮಾಡಿದ ಹಿನ್ನೆಲೆಯಲ್ಲಿ ಅಣಕಿಸುತ್ತಿದ್ದರು. ಆಗಲೂ ಅಭಿಮಾನಿಗಳಿಗೆ ಸನ್ನೆ ಮಾಡಿ ಸುಮ್ಮನಿರುವಂತೆ ತಿಳಿಸಿದ್ದರು.
ಅನುಷ್ಕಾ ಶರ್ಮರನ್ನು ಮದುವೆಯಾಗುವ ಮುನ್ನ ಕೊಹ್ಲಿ ಸ್ವಲ್ಪ ಕಳಪೆ ಲಯದಲ್ಲಿದ್ದರು. ಆ ವೇಳೆ ಅವರ ಕಳಪೆಯಾಟಕ್ಕೆ ಅನುಷ್ಕಾ ಕಾರಣವೆಂದು ಅಭಿಮಾನಿಗಳು ಸತತವಾಗಿ ಟೀಕಿಸುತ್ತಿದ್ದರು. ಆ ವೇಳೆ ಅಭಿಮಾನಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಕೊಹ್ಲಿ, ಅನುಷ್ಕಾರನ್ನು ಸಮರ್ಥಿಸಿಕೊಂಡಿದ್ದರು. ಆಗಟೀಕೆಗಳು ನಿಂತುಹೋಗಿದ್ದವು.