ದುಬೈ: ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಅರ್ಧಶತಕ ಬಾರಿಸಿಯೂ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ನೂತನ ಐಸಿಸಿ ಟಿ20 ಬ್ಯಾಟಿಂಗ್ ಶ್ರೇಯಾಂಕದಲ್ಲಿ ಒಂದು ಸ್ಥಾನ ಕುಸಿದಿದ್ದಾರೆ. 4ರಿಂದ 5ನೇ ಸ್ಥಾನಕ್ಕೆ ಇಳಿದಿದ್ದಾರೆ.
ಜತೆಗೆ ಆರಂಭಿಕ ಆಟಗಾರ ಕೆ.ಎಲ್.ರಾಹುಲ್ ಅವರ ಶ್ರೇಯಾಂಕದಲ್ಲೂ ಕುಸಿತ ಸಂಭವಿಸಿದೆ. ಅವರು 2 ಸ್ಥಾನ ಕೆಳಗಿಳಿದು 8ಕ್ಕೆ ಬಂದಿದ್ದಾರೆ. ಕೊಹ್ಲಿ 725, ರಾಹುಲ್ 684 ಅಂಕ ಹೊಂದಿದ್ದಾರೆ.
ಭಾರತ ವಿರುದ್ಧ ಭರ್ಜರಿ ಬ್ಯಾಟಿಂಗ್ ನಡೆಸಿದ ಪಾಕ್ ಆರಂಭಕಾರ ಮೊಹಮ್ಮದ್ ರಿಜ್ವಾನ್ 3 ಸ್ಥಾನ ಮೇಲೇರಿ ವೃತ್ತಿ ಜೀವನದಲ್ಲೇ ಅತ್ಯುತ್ತಮವೆನಿಸಿದ 4ನೇ ಸ್ಥಾನ ತಲುಪಿದ್ದಾರೆ.
ಆಸೀಸ್ ಮತ್ತು ವಿಂಡೀಸ್ ವಿರುದ್ಧ ಕ್ರಮವಾಗಿ 40 ಹಾಗೂ 51 ರನ್ ಬಾರಿಸಿದ ದಕ್ಷಿಣ ಆಫ್ರಿಕಾದ ಐಡನ್ ಮಾಕ್ರìಮ್ 8 ಸ್ಥಾನಗಳ ಭರ್ಜರಿ ಪ್ರಗತಿ ಸಾಧಿಸಿ ಮೂರನೇ ಸ್ಥಾನದಲ್ಲಿ ಗುರುತಿಸಿಕೊಂಡಿದ್ದಾರೆ. ಇದು ಅವರ ಜೀವನಶ್ರೇಷ್ಠ ಶ್ರೇಯಾಂಕವಾಗಿದೆ. ಇಂಗ್ಲೆಂಡ್‌ನ ಡೇವಿಡ್ ಮಾಲನ್ (831), ಪಾಕ್ ನಾಯಕ ಬಾಬರ್ ಆಜಂ (820) ಮೊದಲೆರಡು ಸ್ಥಾನ ಕಾಯ್ದುಕೊಂಡಿದ್ದಾರೆ.
ಇದನ್ನೂ ಓದಿ:ಹಿಂದೂಗಳ ನಡುವೆ ನಮಾಜ್ : ಹೇಳಿಕೆಗಾಗಿ ಕ್ಷಮೆಯಾಚಿಸಿದ ವಕಾರ್ ಯೂನಿಸ್
ಬೌಲಿಂಗ್, ಆಲ್‌ರೌಂಡ್ ವಿಭಾಗ: ಬೌಲಿಂಗ್ ವಿಭಾಗದಲ್ಲಿ ಶಾಹೀನ್ ಶಾ ಅಫ್ರಿದಿ ಮತ್ತು ಹ್ಯಾರಿಸ್ ರೌಫ್ ಅಮೋಘ ಪ್ರಗತಿ ಸಾಧಿಸಿದ್ದಾರೆ. ಅಫ್ರಿದಿ ಅವರದು 11 ಸ್ಥಾನಗಳ ಜಿಗಿತ. ಅವರೀಗ 12ನೇ ಸ್ಥಾನಕ್ಕೆ ಏರಿದ್ದಾರೆ. ರೌಫ್ ಜೀವನಶ್ರೇಷ್ಠ 17ನೇ ಸ್ಥಾನದಲ್ಲಿದ್ದಾರೆ. ಆಲ್‌ರೌಂಡರ್ ರ್‍ಯಾಂಕಿಂಗ್‌ನಲ್ಲಿ ಬಾಂಗ್ಲಾದ ಶಕಿಬ್ ಅಲ್ ಹಸನ್ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ.