ನವದೆಹಲಿ: “ಬಹಳ ಕಾಲದ ಬಳಿಕ ಒಂದು ದೂರದ ಪ್ರಯಾಣ ದೆಹಲಿ ಸ್ಟೇಡಿಯಂನ ಕಡೆಗೆ… ಮನೆಗೆ ಹತ್ತಿರವಾಗುತ್ತಿರುವ ಭಾವ” ಹೀಗೆಂದು ಬರೆದುಕೊಂಡಿರುವುದು ಬೇರಾರೂ ಅಲ್ಲ. ಟೀಂ ಇಂಡಿಯಾದ ಮಾಜಿ ನಾಯಕ, ಸ್ಠಾರ್ ಬ್ಯಾಟರ್ ವಿರಾಟ್ ಕೊಹ್ಲಿ.
ಹೌದು. ತುಂಬಾ ಸಮಯದ ಬಳಿಕ ವಿರಾಟ್ ಕೊಹ್ಲಿ ತಮ್ಮ ತವರಿನಂಗಳದಲ್ಲಿ ಕ್ರಿಕೆಟ್ ಪಂದ್ಯವನ್ನು ಆಡಲಿದ್ದಾರೆ. ಫೆ. 17ರಿಂದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಪಂದ್ಯ ಈ ಮೊದಲು ಫಿರಾಜ್ ಷಾ ಕೋಟ್ಲಾ ಮೈದಾನ ಎಂದೇ ಪ್ರಸಿದ್ಧವಾಗಿದ್ದ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, ತವರಿನ ಮೈದಾನದಲ್ಲಿ ಆಡಲಿರುವ ಕೊಹ್ಲಿ ತಮ್ಮ ಉತ್ಸಾಹವನ್ನು ಇನ್ಸ್ಟಾಗ್ರಾಮ್ ಮೂಲಕ ಹೊರಹಾಕಿದ್ದಾರೆ.
ಒಟ್ಟಾರೆಯಾಗಿ 2019ರ ಮಾರ್ಚ್‌ನಲ್ಲಿ ತವರಿನಂಗಳದಲ್ಲಿ ಕೊನೆಯ ಪಂದ್ಯವಾಡಿದ್ದ ಕೊಹ್ಲಿ ಆ ಬಳಿಕ ಇದೇ ಮೊದಲ ಬಾರಿಗೆ ದೆಹಲಿಯಲ್ಲಿ ಪಂದ್ಯವೊಂದನ್ನು ಆಡುತ್ತಿದ್ದಾರೆ. 2019ರಲ್ಲಿ ಅವರು ದೆಹಲಿಯಲ್ಲಿ ಏಕದಿನ ಪಂದ್ಯವಾಡಿದ್ದರು. ಇನ್ನು ಟೆಸ್ಟ್ ಮ್ಯಾಚ್ ವಿಚಾರಕ್ಕೆ ಬಂದ್ರೆ, ಬರೋಬ್ಬರಿ 5 ವರ್ಷಗಳ ಬಳಿಕ ಕೊಹ್ಲಿ ತವರಿನಲ್ಲಿ ಟೆಸ್ಟ್ ಮ್ಯಾಚ್ ಆಡಲಿದ್ದಾರೆ. 2017 ರ ಡಿಸೆಂಬರ್‌ನಲ್ಲಿ ದೆಹಲಿಯಲ್ಲಿ ಅವರು ಆಡಿದ್ದ ಟೆಸ್ಟ್ ಪಂದ್ಯವೇ ಅವರ ಕೊನೆಯ ತವರಿನ ಟೆಸ್ಟ್ ಪಂದ್ಯವಾಗಿತ್ತು.
ನಾಗಪುರದಲ್ಲಿ ನಡೆದಿದ್ದ ಭಾರತ-ಆಸ್ಟ್ರೇಲಿಯಾ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕೇವಲ 12 ರನ್ನು ಗಳಿಸಿ ಟಾಡ್ ಮುರ್ಫಿ ಅವರಿಗೆ ವಿಕೆಟ್ ಒಪ್ಪಿಸಿದ್ದರು.
ಇದೀಗ ಕೊಹ್ಲಿ ತವರಿನ ಅಂಗಳದಲ್ಲಿ ಟೆಸ್ಟ್ ಆಡಲಿರುವ ಉತ್ಸಾಹದಲ್ಲಿದ್ದು ಆಸ್ಟ್ರೇಲಿಯಾವನ್ನು ಕಾಡುವರೇ ಎಂಬುದನ್ನು ಕಾದುನೋಡಬೇಕಾಗಿದೆ.