ಲಕ್ನೋ: ಸೋಮವಾರ ರಾತ್ರಿಯ ಲಕ್ನೋ-ಆರ್‌ಸಿಬಿ ನಡುವಿನ ಪಂದ್ಯ ಬೇಡದ ಕಾರಣಕ್ಕಾಗಿಯೂ ಸುದ್ದಿಯಾಯಿತು. ಇದರ ಹಿನ್ನೆಲೆಯಲ್ಲಿದ್ದವರು ವಿರಾಟ್ ಕೊಹ್ಲಿ ಮತ್ತು ಲಕ್ನೋ ತಂಡದ ಮೆಂಟರ್ ಗೌತಮ್ ಗಂಭೀರ್.
ಪಂದ್ಯದ ಬಳಿಕ ಇವರಿಬ್ಬರ ನಡುವೆ ವಾಕ್ಸಮರ ನಡೆದಿದೆ. ಇಬ್ಬರೂ ಕಾಲು ಕೆರೆದು ಜಗಳಕ್ಕೆ ಮುಂದಾ ಗಿದ್ದರು. ಪರಿಣಾಮ, ಇಬ್ಬರಿಗೂ ಪಂದ್ಯದ ಸಂಭಾವನೆಯ ಶೇ. 100ರಷ್ಟು ದಂಡ ವಿಧಿಸಲಾಗಿದೆ.
ಲಕ್ನೋದ ವಿಕೆಟ್ ಬಿದ್ದಾಗಲೆಲ್ಲ ವಿರಾಟ್ ಕೊಹ್ಲಿ ಅತಿರೇಕದ, ಆಕ್ರಮಣಕಾರಿ ವರ್ತನೆ ತೋರು ತ್ತಿದ್ದರು. ಇದಕ್ಕೆ ಕಾರಣ, ಬೆಂಗಳೂರಿನಲ್ಲಿ ನಡೆದ ಇತ್ತಂಡಗಳ ಮೊದಲ ಸುತ್ತಿನ ಪಂದ್ಯ. ಅಂದು ಲಕ್ನೋ ಅಂತಿಮ ಎಸೆತದಲ್ಲಿ ಆರ್‌ಸಿಬಿಯನ್ನು ಒಂದು ವಿಕೆಟ್ ಅಂತರದಿಂದ ರೋಚಕವಾಗಿ ಮಣಿಸಿತ್ತು. ಆಗ ಗಂಭೀರ್ ಆರ್‌ಸಿಬಿ ಅಭಿಮಾನಿಗಳನ್ನು ಗುರಿಯಾಗಿರಿ ಸಿಕೊಂಡು, ಸನ್ನೆ ಮೂಲಕ ಸುಮ್ಮನಿರುವಂತೆ ಸೂಚಿಸಿದ್ದರು. ಗಂಭೀರ್ ಅವರ ಅಂದಿನ ಈ ವರ್ತನೆ ಸಹಜವಾಗಿಯೇ ಕೊಹ್ಲಿ ಅವರನ್ನು ಕೆಣಕುವಂತೆ ಮಾಡಿತ್ತು. ತಮ್ಮ ಆಕ್ರೋಶವನ್ನು ಅವರು ಲಕ್ನೋ ಪಂದ್ಯದ ವೇಳೆ ಹೊರಗೆಡಹಿದರು.
ಆದರೆ ಪರಿಸ್ಥಿತಿ ವಿಕೋಪಕ್ಕೆ ಹೋದದ್ದು ಪಂದ್ಯ ಮುಗಿದ ಬಳಿಕ. ಆಗ ಕೊಹ್ಲಿ ಲಕ್ನೋ ತಂಡದ ಕೈಲ್ ಮೇಯರ್ ಜತೆ ಮಾತಾಡುತ್ತಿದ್ದರು. ಅಲ್ಲಿಗೆ ಬಂದ ಗಂಭೀರ್, ಕೊಹ್ಲಿ ಜತೆ ಮಾತಾಡುವುದು ಬೇಡ ಎಂಬ ರೀತಿಯಲ್ಲಿ ಮೇಯರ್ ಅವರನ್ನು ಕರೆದುಕೊಂಡು ಹೋದರು. ಇದು ಕೊಹ್ಲಿಯನ್ನು ಇನ್ನಷ್ಟು ಕೆರಳಿಸಿತು. ಇಬ್ಬರ ನಡುವೆಯೂ ಮಾತಿಗೆ ಮಾತು ಬೆಳೆಯಿತು.
ಆದರೆ ಘಟನೆಯ ಬಳಿಕ ಇಬ್ಬರೂ ಹಸ್ತಲಾಘವ ಮಾಡಿಕೊಂಡು ರಾಜಿಯಾದದ್ದು ಬೇರೆ ವಿಷಯ!
ಇದೇ ವೇಳೆ ಲಕ್ನೋ ಬೌಲರ್ ನವೀನ್ ಉಲ್ ಹಕ್ ಅವರಿಗೆ ಪಂದ್ಯದ ಸಂಭಾವನೆಯ ಶೇ. 50ರಷ್ಟು ದಂಡ ವಿಧಿಸಲಾಗಿದೆ. ಪಂದ್ಯದ ವೇಳೆ ಅವರು ಕೊಹ್ಲಿ ಜತೆ ಮಾತಿನ ಚಕಮಕಿ ನಡೆಸಿದ್ದೇ ಇದಕ್ಕೆ ಕಾರಣ.