ಅಡಿಲೇಡ್: ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರು ಐಸಿಸಿ ಟಿ20 ವಿಶ್ವಕಪ್ ನಲ್ಲಿ ತಮ್ಮ ಹಳೆಯ ಖದರ್ ಗೆ ವಾಪಾಸಾಗಿದ್ದಾರೆ. ಆಡಿದ ನಾಲ್ಕು ಪಂದ್ಯಗಳಲ್ಲಿ ಮೂರು ಅರ್ಧಶತಕ ಗಳಿಸಿರುವ ವಿರಾಟ್ ಕೊಹ್ಲಿ ಕೂಟದ ಅತ್ಯಧಿಕ ರನ್ ಗಳಿಸಿದ ಬ್ಯಾಟರ್ ಆಗಿದ್ದಾರೆ.
ಇದೇ ವೇಳೆ ವಿರಾಟ್ ಕೊಹ್ಲಿ ಟಿ20 ವಿಶ್ವಕಪ್ ಇತಿಹಾಸದಲ್ಲೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ದಾಖಲೆಗೆ ಪಾತ್ರರಾದರು. ಶ್ರೀಲಂಕಾದ ಮಾಜಿ ಬ್ಯಾಟರ್ ಮಹೇಲಾ ಜಯವರ್ಧನೆ ಅವರನ್ನು ಹಿಂದಿಕ್ಕಿದ ವಿರಾಟ್ ತನ್ನ ದಾಖಲೆಗೆಳ ಕಿರೀಟಕ್ಕೆ ಮತ್ತೊಂದು ಗರಿಯನ್ನು ಸಿಕ್ಕಿಸಿಕೊಂಡರು.
ಅಷ್ಟೇ ಅಲ್ಲದೆ ಬಾಂಗ್ಲಾದೇಶ ವಿರುದ್ಧದ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಭಾರತದ ದಂತಕಥೆ ಸಚಿನ್ ತೆಂಡೂಲ್ಕರ್ ಅವರನ್ನು ಹಿಂದಿಕ್ಕಿ ಆಸ್ಟ್ರೇಲಿಯಾದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯರೆನಿಸಿಕೊಂಡರು.
ಅಡಿಲೇಡ್ ನಲ್ಲಿ ಚೊಚ್ಚಲ ಟೆಸ್ಟ್ ಶತಕ ಸಿಡಿಸಿದ್ದ ಕೊಹ್ಲಿ, ಇದೀಗ ಅದೇ ಅಂಗಳದಲ್ಲಿ ಸಚಿನ್ ದಾಖಲೆ ಮುರಿದರು. ವಿರಾಟ್ ಕೊಹ್ಲಿ ಆಸ್ಟ್ರೇಲಿಯಾದಲ್ಲಿ 68 ಇನ್ನಿಂಗ್ಸ್ ಗಳಲ್ಲಿ 3,350 ರನ್ ಗಳಿಸಿದ್ದಾರೆ. ಸಚಿನ್ ಅವರು ಆಸ್ಟ್ರೇಲಿಯಾದಲ್ಲಿ 84 ಇನ್ನಿಂಗ್ಸ್ ಗಳಲ್ಲಿ 3,300 ರನ್ ಗಳಿಸಿದ್ದರು.
ಇದನ್ನೂ ಓದಿ:ಬಿಂದಿ ಧರಿಸದ ಕಾರಣಕ್ಕೆ ಪತ್ರಕರ್ತೆಯೊಂದಿಗೆ ಮಾತನಾಡಲು ನಿರಾಕರಿಸಿದ ಸಂಭಾಜಿ ಭಿಡೆ
ಬಾಂಗ್ಲಾದೇಶ ವಿರುದ್ಧ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ 44 ಎಸೆತಗಳಲ್ಲಿ ಅಜೇಯ 64 ರನ್ ಗಳಿಸಿದರು. ಪಂದ್ಯವನ್ನು ಭಾರತ ತಂಡವು 5 ರನ್ ಅಂತರದಿಂದ ಜಯಿಸಿದ್ದು, ವಿರಾಟ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.