ದುಬೈ: ಏಷ್ಯನ್ ಕ್ರಿಕೆಟಿಂಗ್ ದೇಶಗಳ ನಡುವೆ ಸದ್ಯ ಯುಎಇ ನಲ್ಲಿ ಏಷ್ಯಾ ಕಪ್ ನಡೆಯುತ್ತಿದೆ. ಇಂದು ಸೂಪರ್ 4 ಹಂತದ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ಥಾನ ತಂಡಗಳು ಮುಖಾಮುಖಿಯಾಗಲಿದೆ.
ಕಳೆದ ಕೆಲವು ಸಮಯದಿಂದ ಕಳಪೆ ಫಾರ್ಮ್ ನಲ್ಲಿರುವ ಮಾಜಿ ನಾಯಕ ವಿರಾಟ್ ಕೊಹ್ಲಿ ಇದೀಗ ಏಷ್ಯಾಕಪ್ ನಲ್ಲಿ ಫಾರ್ಮ್ ಕಂಡು ಕೊಳ್ಳುತ್ತಿದ್ದಾರೆ. ಪಾಕ್ ವಿರುದ್ಧದ ಮೊದಲ ಪಂದ್ಯದಲ್ಲಿ 35 ರನ್ ಮತ್ತು ಹಾಂಕಾಂಗ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಅರ್ಧಶತಕ ಸಿಡಿದಿದ್ದರು. ಆದರೆ ಪಾಕಿಸ್ಥಾನದ ಮಾಜಿ ನಾಯಕ ರಶೀದ್ ಲತೀಫ್ ಪ್ರಕಾರ, ವಿರಾಟ್ ಕೊಹ್ಲಿ ಅವರು ಸೂರ್ಯಕುಮಾರ್ ಯಾದವ್ ರಂತೆ ಉತ್ತಮ ಬ್ಯಾಟರ್ ಸಾಧ್ಯವೇ ಇಲ್ಲವಂತೆ.
ಟಿ20 ಕ್ರಿಕೆಟ್‌ಗೆ ಬಂದರೆ ಮುಂಬೈ ಬ್ಯಾಟರ್ ಸೂರ್ಯಕುಮಾರ್ ಯಾದವ್ ಅವರಂತೆ ಕೊಹ್ಲಿ ಎಂದಿಗೂ ಉತ್ತಮವಾಗುವುದಿಲ್ಲ ಎಂದು ಪಾಕಿಸ್ತಾನದ ಮಾಜಿ ನಾಯಕ ರಶೀದ್ ಲತೀಫ್ ಹೇಳಿಕೆ ನೀಡಿದ್ದಾರೆ.
ಪಾಕಿಸ್ತಾನಿ ಸುದ್ದಿ ವಾಹಿನಿಯೊಂದರ ಜೊತೆ ಮಾತನಾಡಿದ ರಶೀದ್ ಲತೀಫ್, “ಏಕದಿನ ಕ್ರಿಕೆಟ್ ನಲ್ಲಿ ವಿರಾಟ್ ಕೊಹ್ಲಿಗೆ ಯಾರೂ ಹತ್ತಿರವಾಗುವುದಿಲ್ಲ, ಆದರೆ ಅವರು ಎಂದಿಗೂ ಉತ್ತಮ ಟಿ20 ಆಟಗಾರನಾಗಿರಲಿಲ್ಲ. ಅವರು ಉತ್ತಮ ಸರಾಸರಿ ಹೊಂದಿದ್ದಾರೆ, ಆದರೆ ಸ್ಟ್ರೈಕ್ ರೇಟ್ ಉತ್ತಮವಾಗಿಲ್ಲ” ಎಂದಿದ್ದಾರೆ.
“ವಿರಾಟ್ ಕೊಹ್ಲಿ ನಿಧಾನವಾಗಿ ಆಡುತ್ತಾರೋ ಅಥವಾ ವೇಗವಾಗಿ ಆಡುತ್ತಾರೋ ಎಂಬುದು ಮುಖ್ಯವಲ್ಲ. ಅವರು 30-35 ಎಸೆತಗಳನ್ನು ಆಡಿದ ನಂತರ ಹೊಡೆಯಲು ಪ್ರಾರಂಭಿಸುತ್ತಾರೆ. ರೋಹಿತ್ ಶರ್ಮಾ ಪವರ್ ಪ್ಲೇ ಬಳಸುವ ರೀತಿಯ ಆಟಗಾರ. ವಿರಾಟ್ ಎಂದಿಗೂ ಸೂರ್ಯಕುಮಾರ್ ಯಾದವ್ ಅಥವಾ ರೋಹಿತ್ ಶರ್ಮಾ ಆಗಲು ಸಾಧ್ಯವಿಲ್ಲ. ಅವರ ಆಟದ ಶೈಲಿ ಆರ್ ಸಿಬಿ ಯಲ್ಲಿಯೂ ಹಾಗೆಯೇ ಉಳಿದಿದೆ, ಅದಕ್ಕಾಗಿಯೇ ಅವರು ಎಂದಿಗೂ ಚಾಂಪಿಯನ್ ಆಗಲು ಸಾಧ್ಯವಾಗಲಿಲ್ಲ” ಲತೀಫ್ ಹೇಳಿದರು.