ನವದೆಹಲಿ: ಭಾರತೀಯ ಅರಣ್ಯ ಸೇವೆ (IFS)ಯ ಅಧಿಕಾರಿ ಸುಸಂತ ನಂದಾ ಅವರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದು, ವನ್ಯಜೀವಿಗಳ ಅದ್ಭುತವಾದ ವಿಡಿಯೋವನ್ನು ಹಂಚಿಕೊಳ್ಳುವ ಮೂಲಕ ಟ್ವೀಟರ್ ಫಾಲೋವರ್ಸ್ ಗೆ ಅಚ್ಚರಿಯ ಘಟನೆಯನ್ನು ಉಣಬಡಿಸುತ್ತಾರೆ. ಅದಕ್ಕೆ ಮತ್ತೊಂದು ಸೇರ್ಪಡೆ ಎಂಬಂತೆ ಜಿಂಕೆಯೊಂದು ಹಾವನ್ನು ಜಗಿದು ತಿನ್ನುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:Bengaluru; ಜನನಿಬಿಡ ರಸ್ತೆಯಲ್ಲಿ ಡಚ್ ಬ್ಲಾಗರ್ ಮೇಲೆ ಹಲ್ಲೆ: ವ್ಯಾಪಕ ಆಕ್ರೋಶ
ಗಮನಿಸಬೇಕಾದ ಅಂಶವೇನೆಂದರೆ ಜಿಂಕೆಯನ್ನು ಸಸ್ಯಹಾರಿ ಎಂದು ಪರಿಗಣಿಸುತ್ತೇವೆ. ಹುಲ್ಲು, ಎಳೆಯ ಎಲೆಗಳು ಜಿಂಕೆಯ ಆಹಾರವಾಗಿದೆ. ಆದರೆ ಜಿಂಕೆ ಹಾವನ್ನು ಜಗಿದು ತಿನ್ನುತ್ತಿರುವ ಅಪರೂಪದ ಘಟನೆಯ ವಿಡಿಯೋವನ್ನು ಕಾರಿನಲ್ಲಿ ಪ್ರಯಾಣಿಸುತ್ತಿದ್ದವರು ಸೆರೆ ಹಿಡಿದಿದ್ದು, ಅದನ್ನು ನಂದಾ ಅವರು ತಮ್ಮ ಟ್ವೀಟರ್ ಹ್ಯಾಂಡಲ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
“ಕಾಡಿನ ಪ್ರದೇಶದ ರಸ್ತೆ ಸಮೀಪ ನಿಂತಿದ್ದ ಜಿಂಕೆಯೊಂದು ಹಾವನ್ನು ಜಗಿದು ತಿನ್ನುತ್ತಿದ್ದು, ಕಾರಿನಲ್ಲಿದ್ದ ವ್ಯಕ್ತಿಯೊಬ್ಬ ವಿಡಿಯೋ ಚಿತ್ರೀಕರಣ ಮಾಡುತ್ತಾ..ಜಿಂಕೆ ಹಾವನ್ನು ತಿನ್ನುತ್ತಿದೆಯಾ ? ಎಂಬ ಅಚ್ಚರಿಯ ಉದ್ಘಾರ” ವಿಡಿಯೋದಲ್ಲಿ ಸೆರೆಯಾಗಿದೆ.
ವೈರಲ್ ಆದ ವಿಡಿಯೋದ ಜತೆಗೆ “ಕ್ಯಾಮರಾಗಳು ಕೂಡಾ ಈಗ ಪ್ರಕೃತಿಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ನೆರವು ನೀಡುತ್ತಿದೆ. ಹೌದು ಕೆಲವೊಮ್ಮ ಸಸ್ಯಹಾರಿ ಪ್ರಾಣಿಗಳು ಹಾವನ್ನು ತಿನ್ನುತ್ತವೆ” ಎಂಬ ಕ್ಯಾಪ್ಶನ್ ನೀಡಲಾಗಿದೆ.