ಲಾಹೋರ್: 26/11 ಭಯೋತ್ಪಾದಕ ದಾಳಿಕೋರರು ಇನ್ನೂ ಕೂಡಾ ದೇಶದಲ್ಲಿ ಮುಕ್ತವಾಗಿ ಓಡಾಡಿಕೊಂಡಿರಲು ಅವಕಾಶ ನೀಡಲಾಗಿದೆ…ಇದು ಪಾಕಿಸ್ತಾನ ನೆಲದಲ್ಲಿ ನಿಂತು ಕವಿ ಜಾವೇದ್ ಅಖ್ತರ್ ವಾಗ್ದಾಳಿ ನಡೆಸಿರುವ ಪರಿ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ:ಏ.1ರಿಂದಲೇ ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸ್: ಸಿಎಂ ಬೊಮ್ಮಾಯಿ
ಜಾವೇದ್ ಅಖ್ತರ್ ಇತ್ತೀಚೆಗೆ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರು. ಅವರು ಭಾನುವಾರ ಲಾಹೋರ್ ನಲ್ಲಿ ಮುಕ್ತಾಯಗೊಂಡಿದ್ದ ಅಲ್ಹಮ್ರಾ ಆರ್ಟ್ಸ್ ಕೌನ್ಸಿಲ್ ನಲ್ಲಿ ಆಯೋಜಿಸಿದ್ದ ಫೈಜ್ ಫೆಸ್ಟಿವಲ್ ನಲ್ಲಿ ಭಾಗವಹಿಸಿದ್ದರು.
“ನಾವು ಒಬ್ಬರನ್ನೊಬ್ಬರು ದೂಷಿಸಬಾರದು. ಇದರಿಂದ ಯಾವುದೂ ಪರಿಹಾರವಾಗುವುದಿಲ್ಲ. ಉಭಯ ದೇಶಗಳಲ್ಲಿನ ವಾತಾವರಣ ಉದ್ವಿಗ್ನಗೊಂಡಿದೆ. ಅದನ್ನು ನಾವು ತಣಿಸಬೇಕಾಗಿದೆ. ನಾವು ಮುಂಬೈಯವರು, ನಾವು ನಮ್ಮ ನಗರದ ಮೇಲೆ ನಡೆದ ದಾಳಿಯನ್ನು ನೋಡಿದ್ದೇವೆ. ದಾಳಿಕೋರರು ನಾರ್ವೇ ಅಥವಾ ಈಜಿಪ್ಟ್ ನಿಂದ ಬಂದವರಲ್ಲ. ಆ ದಾಳಿಕೋರರು ಈವಾಗಲೂ ನಿಮ್ಮ ದೇಶದಲ್ಲಿ (ಪಾಕ್) ಮುಕ್ತವಾಗಿ ಓಡಾಡಿಕೊಂಡಿದ್ದಾರೆ. ಹೀಗಾಗಿ ಭಾರತೀಯರ ಅಂತರಾಳದಲ್ಲಿ ನೋವಿದ್ದರೆ, ಅದನ್ನು ನೀವು ತಪ್ಪಾಗಿ ಭಾವಿಸಬಾರದು” ಎಂದು ಅಖ್ತರ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಭಾರತ ಪಾಕಿಸ್ತಾನದ ಅತಿಥಿಗಳಿಗೆ ಗೌರವಯುತ ಆತಿಥ್ಯ ನೀಡಿತ್ತು, ಆದರೆ ಅದೇ ರೀತಿ ಭಾರತೀಯ ಕಲಾವಿದರನ್ನು ಪಾಕಿಸ್ತಾನ್ ಸ್ವಾಗತಿಸಿಲ್ಲ ಎಂದು ಜಾವೇದ್ ಆಖ್ತರ್ ಆರೋಪಿಸಿದರು.
“ನಾವು ಭಾರತದಲ್ಲಿ ನುಸ್ರತ್ ಫತೇಹ್ ಅಲಿ ಖಾನ್ ಮತ್ತು ಮೆಹದಿ ಹಸನ್ ಕಾರ್ಯಕ್ರಮಗಳನ್ನು ಆಯೋಜಿಸಿದ್ದೇವು. ಆದರೆ ನೀವು (ಪಾಕಿಸ್ತಾನ) ಯಾವತ್ತೂ ಲತಾ ಮಂಗೇಶ್ಕರ್ ಅವರ ಕಾರ್ಯಕ್ರಮ ಮಾಡಿಲ್ಲ” ಎಂದು ಸಭೆಯಲ್ಲಿ ಹೇಳಿದ್ದು, ಇದಕ್ಕೆ ಸಭೆಯಲ್ಲಿ ಭರ್ಜರಿ ಶಿಳ್ಳೆ, ಚಪ್ಪಾಳೆ ಹೊಡೆಯುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.