Advertisement
ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆಯುವುದಕ್ಕೂ ಮುನ್ನವೇ, ನಿರ್ದಿಷ್ಟವಾಗಿ ಹೇಳಬೇಕೆಂದರೆ 13 ಏಪ್ರಿಲ್ 1947ರಂದು ಭಾರತ ಮತ್ತು ರಷ್ಯಾ ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸಿದವು. ಈ ಮಹತ್ವಪೂರ್ಣ ಮೈಲಿಗಲ್ಲಿನ 70ನೇ ವಾರ್ಷಿಕೋತ್ಸವದ ನಿಮಿತ್ತವಾಗಿ ನಾನು ರಷ್ಯಾ ಮತ್ತು ಭಾರತದ ನಾಗರಿಕರಿಗೆ ಶುಭಕೋರುತ್ತೇನೆ. 1947ರಿಂದ ಜಗತ್ತು ನಾಟಕೀಯವಾಗಿ ಬದಲಾಗುತ್ತಾ ಬಂದಿದೆಯಾದರೂ ಭಾರತ ಮತ್ತು ರಷ್ಯಾ ನಡುವಿನ ಸಂಬಂಧ ಮಾತ್ರ ಮೊದಲಿನಿಂದಲೂ ಸ್ಥಿರವಾಗಿಯೇ ಇದೆ. ಅಷ್ಟೇ ಅಲ್ಲದೆ ಅದು ದಿನದಿಂದ ದಿನಕ್ಕೆ ಸದೃಢವಾಗುತ್ತ ಸಾಗುತ್ತಿದೆ. ಈ ಸಂಬಂಧವು ನಂಬಿಕೆ, ಪರಸ್ಪರ ಲಾಭ ಮತ್ತು ಸಮಾನತೆಯ ತಳಹದಿಯ ಮೇಲೆ ನಿಂತಿರುವುದು ಇದಕ್ಕೆ ಕಾರಣ.
Related Articles
Advertisement
ಇನ್ನು ರಷ್ಯಾದ ತೈಲ ಮತ್ತು ಅನಿಲ ಉತ್ಪಾದನಾ ಯೋಜನೆಗಳಾದ ಸಾಖಲಿನ್-1, ವಾನ್ಕೋರ್ ಮತ್ತು ತಾಸ್-ಯೂರ್ಯಾಖ್‌ನಲ್ಲಿ ಭಾರತದ ಹೂಡಿಕೆಗಳು, ಕೂಡಂಕುಲಂನಲ್ಲಿನ ಪವರ್ ಪ್ಲ್ರಾಂಟ್ ಮತ್ತು ಬ್ರಹ್ಮೋಸ್ ಯೋಜನೆಗಳು…ಇವೆಲ್ಲ ನಮ್ಮ ಸಮಕಾಲೀನ ಸಹಭಾಗಿತ್ವದ ಸಂಕೇತಗಳಾಗಿವೆ. ಆರ್ಥಿಕ ಕ್ಷೇತ್ರದ ವಿಷಯಕ್ಕೆ ಬಂದರೆ ಉತ್ಪಾದನೆಯಲ್ಲಿ ಪರಸ್ಪರ ಹೂಡಿಕೆಗಳನ್ನು ಹೆಚ್ಚಿಸುವ ದಿಕ್ಕಿನತ್ತ ಎರಡೂ ರಾಷ್ಟ್ರಗಳು ಹೆಜ್ಜೆ ಹಾಕುತ್ತಿವೆ. ರಷ್ಯಾದ ಔಷಧ ಉದ್ಯಮಗಳಿಗೆ ಪ್ರಮುಖ ಕೊಡುಗೆ ನೀಡುತ್ತಾ ಬರುತ್ತಿದೆ ಭಾರತ. ಆದರೆ ನಾವು ಯಾವುದೇ ಕಾರಣಕ್ಕೂ ನಮ್ಮ ಈ ಸಾಧನೆಗಳಿಂದ ತೃಪ್ತಿಪಟ್ಟುಕೊಂಡು ಸುಮ್ಮನಾಗಬಾರದು. ಬದಲಾಗಿ ಹೊಸ ಮಾರ್ಗಗಳಿಗಾಗಿ, ಮುನ್ನೋಟಕ್ಕಾಗಿ ಹಾತೊರೆಯಬೇಕು.
ಭಾರತದ ರಾಜ್ಯಗಳು ಮತ್ತು ರಶ್ಯನ್ ಪ್ರದೇಶಗಳ ನಡುವಿನ ಸಹಕಾರವನ್ನು ಇನ್ನಷ್ಟು ವಿಸ್ತರಿಸಲು ನಾವು ಬಯಸುತ್ತಿದ್ದೇವೆ. ಯುರೇಷಿಯನ್ ಆರ್ಥಿಕ ಒಕ್ಕೂಟದ ಜೊತೆಗಿನ ವ್ಯಾಪಾರ ಸಂಬಂಧಗಳನ್ನು ವೃದ್ಧಿಸುವತ್ತಲೂ ನಾವು ಪ್ರಯತ್ನಿಸುತ್ತಿದ್ದೇವೆ. ರೈಲ್ವೆ, ಸಂಶೋಧನೆ, ಐಟಿ, ವಜ್ರ ವ್ಯಾಪಾರ ಮತ್ತು ಮೂಲಸೌಕರ್ಯಗಳಂಥ ಕ್ಷೇತ್ರಗಳಲ್ಲಿ ಸಹಭಾಗಿತ್ವದ ಸಾಧ್ಯತೆಗಳನ್ನು ಅನ್ವೇಷಿಸುತ್ತಿದ್ದೇವೆ. ಇದಷ್ಟೇ ಅಲ್ಲದೆ ಎರಡೂ ದೇಶಗಳ ವಿಜ್ಞಾನಿಗಳು, ವಿಶ್ವವಿದ್ಯಾಲಯಗಳು ಮತ್ತು ಬುದ್ಧಿಜೀವಿಗಳು, ಅದರಲ್ಲೂ ಮುಖ್ಯವಾಗಿ ಯುವ ಜನರ ನಡುವಿನ ಸಂಪರ್ಕವನ್ನು ವಿಸ್ತರಿಸಲು ಪ್ರಯತ್ನಿಸುತ್ತಿದ್ದೇವೆ. ಮೇಕ್ ಇನ್ ಇಂಡಿಯಾ, ಸ್ಟಾರ್ಟ್‌ಅಪ್ ಇಂಡಿಯಾ, ಸ್ಕಿಲ್ ಇಂಡಿಯಾ ಮತ್ತು ಡಿಜಿಟಲ್ ಇಂಡಿಯಾದಂಥ ಕಾರ್ಯಕ್ರಮಗಳಲ್ಲಿ ಜೊತೆಯಾಗಬೇಕೆಂದು ನಾವು ರಶ್ಯನ್ ಕಂಪನಿಗಳನ್ನು ಆಹ್ವಾನಿಸುತ್ತೇವೆ.
ನಮ್ಮ ಸಂಬಂಧದ ಮಹತ್ವವು ಕೇವಲ ದ್ವಿಪಕ್ಷೀಯ ವಲಯಕ್ಕಷ್ಟೇ ಸೀಮಿತವಾಗಿಲ್ಲ. ನಮ್ಮ ಪಾಲುದಾರಿಕೆಯು ಜಾಗತಿಕ ಶಾಂತಿ ಮತ್ತು ಭದ್ರತೆಯನ್ನು ಕಾಪಾಡುವಲ್ಲೂ ಕೊಡುಗೆ ನೀಡಿದೆ. ಅಂತಾರಾಷ್ಟ್ರೀಯ ರಾಜಕೀಯ, ಭದ್ರತೆ, ಆರ್ಥಿಕತೆಯ ಸದೃಢತೆಯನ್ನು ಕಾಪಾಡುವಲ್ಲಿ ಭಾರತ ಮತ್ತು ರಷ್ಯಾ ಪ್ರಮುಖ ಪಾತ್ರ ವಹಿಸುತ್ತಿವೆ. ವಿಶ್ವಸಂಸ್ಥೆ, ಬ್ರಿಕ್ಸ್, ಜಿ-20, ಪೂರ್ವ ಏಷ್ಯಾ ಶೃಂಗ, ಆರ್‌ಐಸಿ ಮತ್ತು ಅಂತಾರಾಷ್ಟ್ರೀಯ ಅಣುಶಕ್ತಿ ಸಂಸ್ಥೆಯಂಥ ವೇದಿಕೆಗಳಲ್ಲಿ ಎರಡೂ ದೇಶಗಳು ಜೊತೆಗೂಡಿ ಕೆಲಸ ಮಾಡುತ್ತಿವೆ. ಶಾಂಘೈ ಸಹಕಾರ ಸಂಸ್ಥೆಯ ಪೂರ್ಣಾವಧಿ ಸದಸ್ಯರಾಗುವುದನ್ನು ಭಾರತ ಎದುರುನೋಡುತ್ತಿದೆೆ. ಇದು ಸಾಧ್ಯವಾಗಿದ್ದು ರಷ್ಯಾದ ಪೂರ್ಣ ಬೆಂಬಲದಿಂದಾಗಿಯೇ.
ಇಂದು ಜಗತ್ತು ಹಲವಾರು ಸವಾಲುಗಳನ್ನು ಎದುರಿಸುತ್ತಿದೆ. ಇಂಥ ಸಮಯದಲ್ಲಿ ಎರಡೂ ದೇಶಗಳ ನಡುವಿನ ಸಹಕಾರ ಮತ್ತಷ್ಟು ಮುಖ್ಯವಾಗುತ್ತಿದೆ. ಇಂದು ವಿಶ್ವದ ಸಾಂಪ್ರದಾಯಿಕ ಶಕ್ತಿಯ ಸಮತೋಲನ ಸಡಿಲಗೊಳ್ಳುತ್ತಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಬದಲಾಗುತ್ತಿರುವ ಈ ವಾಸ್ತವಗಳನ್ನು ಪ್ರತಿಬಿಂಬಿಸುತ್ತಿಲ್ಲ. ಹೀಗಾಗಿ ಅದಕ್ಕೆ ಸುಧಾರಣೆಯ ತೀವ್ರ ಅಗತ್ಯವಿದೆ. ಇಂದು ಜಗತ್ತಿನಲ್ಲಿ ಹಲವು ಪ್ರಾದೇಶಿಕ ಅಪಾಯಗಳು ಕಾಣಿಸಿಕೊಂಡಿವೆ. ಇದರ ಪರಿಣಾಮ ಇಡೀ ಜಗತ್ತಿಗೆ ತಾಗುತ್ತಿದೆ. ಇಂದು ನಾಗರಿಕ ಸಮಾಜಕ್ಕೆ ಅತಿದೊಡ್ಡ ಅಪಾಯ ಎದುರಾಗಿರುವುದು ಉಗ್ರವಾದದಿಂದ. ಉಗ್ರವಾದ ಹಿಂದೆಂದಿಗಿಂತಲೂ ಹೆಚ್ಚು ಸಂಘಟಿತ ಮತ್ತು ಮಾರಕ ರೂಪ ಪಡೆದಿದೆ. ನಮ್ಮ ಜೀವನ ಕ್ರಮಕ್ಕೆ ಸವಾಲೆಸೆಯುತ್ತಿದೆ ಭಯೋತ್ಪಾದನೆ. ಭಾರತ ಮತ್ತು ರಷ್ಯಾ ಜೊತೆಗೂಡಿ ಉಗ್ರವಾದದ ವಿರುದ್ಧ ಹೋರಾಡುತ್ತಿವೆ. ರಷ್ಯಾದೊಂದಿಗೆ ಬಲಿಷ್ಠ ಸಂಬಂಧ ಸ್ಥಾಪಿಸುವ ನೀತಿಗೆ ಭಾರತದಾದ್ಯಂತ ಬೆಂಬಲವಿದೆ. 1947ರಿಂದಲೂ ನಮ್ಮಲ್ಲಿನ ಪ್ರತಿಯೊಂದು ಸರ್ಕಾರವೂ ರಶ್ಯನ್ ಸರ್ಕಾರ ಮತ್ತು ಅದರ ಜನರ ಜೊತೆ ಆಪ್ತ ಸಂಬಂಧವನ್ನು ಬೆಳೆಸಿಕೊಳ್ಳುವುದಕ್ಕೆ ಪ್ರಮುಖ ಆದ್ಯತೆ ಕೊಡುತ್ತಲೇ ಬಂದಿವೆ. ನನ್ನ ಸರ್ಕಾರ ಇದೇ ನೀತಿಯನ್ನು ಮುಂದುವರಿಸುವುದಷ್ಟೇ ಅಲ್ಲ, ಬದಲಾಗಿ, ಎರಡೂ ದೇಶಗಳ ನಡುವಿನ ಸಂಬಂಧವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಬದ್ಧವಾಗಿದೆ.
ರಷ್ಯಾಕ್ಕೆ ಮೊದಲ ಬಾರಿ ಭೇಟಿ ನೀಡಿದ ಸಂದರ್ಭವನ್ನು ನನಗೆಂದಿಗೂ ಮರೆಯಲಾಗದು. 2001ರಲ್ಲಿ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರೊಂದಿಗೆ ನಾನು ಈ ದೇಶಕ್ಕೆ ಬಂದಿದ್ದೆ. ರಷ್ಯಾ ದ ಸಾಧನೆಗಳು, ತನ್ನ ದೇಶದ ಇತಿಹಾಸದ ಬಗ್ಗೆ ಅದಕ್ಕಿರುವ ಅರಿವು ಮತು ರಶ್ಯನ್ ನಾಗರಿಕರಲ್ಲಿನ ಆತ್ಮಾಭಿಮಾನವನ್ನು ಕಂಡು ನನಗೆ ಅಚ್ಚರಿಯಾಗಿತ್ತು. ಅದಾದ ನಂತರ ನಾನು ಈ ದೇಶಕ್ಕೆ ಕೆಲವು ಬಾರಿ ಬಂದಿದ್ದೇನೆ. ಪ್ರತಿಬಾರಿಯೂ, ಭಾರತ ಮತ್ತು ಭಾರತೀಯರ ಬಗ್ಗೆ ರಶ್ಯನ್ನರಿಂದ ಅತೀವ ಸದ್ಭಾವನೆ ಎದುರಾಗುವುದನ್ನು ನೋಡಿದ್ದೇನೆ.
ಪ್ರಸಿಡೆಂಟ್ ಪುಟಿನ್ ಅವರು 17ನೇ ವಾರ್ಷಿಕ ದ್ವಿಪಕ್ಷೀಯ ಶೃಂಗಸಭೆಯಲ್ಲಿ ಪಾಲ್ಗೊಳ್ಳುವುದಕ್ಕಾಗಿ ಅಕ್ಟೋಬರ್ 2016ರಂದು ಗೋವಾಕ್ಕೆ ಬಂದಿದ್ದರು. ಆಗ ಈ ಮಹತ್ವದ ಸಂದರ್ಭವನ್ನು ಆಚರಿಸುವುದಕ್ಕಾಗಿ ನೀಲನಕ್ಷೆಯೊಂದಕ್ಕೆ ಸಹಮತ ವ್ಯಕ್ತಿಪಡಿಸಿದ್ದೆವು. ನಮ್ಮ ಎರಡೂ ರಾಷ್ಟ್ರಗಳ ನಡುವಿನ ಅನನ್ಯ ಸಂಬಂಧದ ಅಭಿವೃದ್ಧಿಗೆ ಶ್ರಮಿಸಿದ, ಕೊಡುಗೆ ನೀಡಿದ ಜ್ಞಾತ ಮತ್ತು ಅಜ್ಞಾತರಿಗೆಲ್ಲ ನಾನು ಗೌರವಾರ್ಪಣೆ ಸಲ್ಲಿಸುತ್ತೇನೆ. ಅವರೆಲ್ಲರ ಕಠಿಣ ಪರಿಶ್ರಮದ ಮತ್ತು ಎಲ್ಲಕ್ಕಿಂತಲೂ ಮುಖ್ಯವಾಗಿ ಈ ಸಂಬಂಧದಲ್ಲಿ ಅವರಿಗಿದ್ದ ಅಚಲ ನಂಬಿಕೆಯ ಫಲಾನುಭವಿಗಳು ನಾವು. ಈ ಪರಂಪರೆಯನ್ನು ಬೆಳೆಸಲು ಮತ್ತು ಉತ್ತಮ ಜಗತ್ತಿನ ನಿರ್ಮಾಣಕ್ಕೆ ಕಾರಣವಾಗುವ ಈ ಬಲಿಷ್ಠ ಸಹಭಾಗಿತ್ವದ ಫಲವನ್ನು ನಮ್ಮ ಯುವ ಜನರಿಗೆ ತಲುಪಿಸಲು ನಾವು ಬದ್ಧರಾಗಿದ್ದೇವೆ. ಸುಂದರ ನಗರಿ ಸೇಂಟ್ ಪೀಟರ್ಸ್‌ಬರ್ಗ್ ಮತ್ತು ರಷ್ಯಾ ಅಧ್ಯಕ್ಷ ಪುಟಿನ್ ಜೊತೆಗಿನ ಭೇಟಿಯನ್ನು ನಾನು ಉತ್ಸಾಹದಿಂದ ಎದುರು ನೋಡುತ್ತಿದ್ದೇನೆ.
ಭಾರತ ಮತ್ತು ರಷ್ಯಾದ ಸ್ನೇಹ ದೀರ್ಘಾಯುವಾಗಲಿ!
– ನರೇಂದ್ರ ಮೋದಿ, ಪ್ರಧಾನ ಮಂತ್ರಿ