Advertisement

ಐರೋಪ್ಯಕ್ಕೆ ಪ್ರತಿಭಟನೆ ಬಿಸಿ; ಸ್ವಿಜರ್ಲೆಂಡ್‌, ಆಸ್ಟ್ರಿಯಾ, ನೆದರ್ಲೆಂಡ್‌ಗಳಲ್ಲಿ ಆಕ್ರೋಶ

08:03 PM Nov 22, 2021 | Team Udayavani |

ಲಂಡನ್‌/ನವದೆಹಲಿ: ಐರೋಪ್ಯ ಒಕ್ಕೂಟದಲ್ಲಿ ಹೆಚ್ಚುತ್ತಿರುವ ಕೊರೊನಾ ತಡೆಯುವ ನಿಟ್ಟಿನಲ್ಲಿ ಕೆಲವು ರಾಷ್ಟ್ರಗಳಲ್ಲಿ ಲಾಕ್‌ಡೌನ್‌ ಸೇರಿದಂತೆ ಹಲವು ಪ್ರತಿಬಂಧಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅದರ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಪ್ರತಿಭಟನೆಗಳು ನಡೆದಿವೆ.

Advertisement

ಸ್ವಿಜರ್ಲೆಂಡ್‌ನ‌ಲ್ಲಿ ಈಗಾಗಲೇ ಶೇ.65 ಮಂದಿಗೆ ಲಸಿಕೆ ಹಾಕಲಾಗಿದ್ದರೂ, ಸೋಂಕು ಸಂಖ್ಯೆ ವ್ಯಾಪಕವಾಗಿದೆ. ಸಾರ್ವಜನಿಕ ಸ್ಥಳಗಳಿಗೆ ಪ್ರವೇಶ ಮಾಡಲು ಲಸಿಕೆ ಹಾಕಿದ ಬಗ್ಗೆ ಪ್ರಮಾಣ ಪತ್ರ ನೀಡಬೇಕು ಎಂದು ಆದೇಶ ಹೊರಡಿಸಲಾಗಿದೆ. ಅದರ ವಿರುದ್ಧ ಈಗಾಗಲೇ ಸ್ವಿಜರ್ಲೆಂಡ್‌ನ‌ ಹಲವು ಭಾಗಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ.

ಆಸ್ಟ್ರಿಯಾದಲ್ಲಿ ಸತತ 4ನೇ ಬಾರಿಗೆ ಲಾಕ್‌ಡೌನ್‌ ಘೋಷಣೆ ಮಾಡಲಾಗಿದೆ. ಅಲ್ಲಿ ಹೆಚ್ಚಿನವರಿಗೆ ಮನೆಯಿಂದಲೇ ಕೆಲಸ ಮಾಡಲು ಸೂಚಿಸಲಾಗಿದೆ ಮತ್ತು ಅನಗತ್ಯ ಎಂದು ಕಂಡುಬಂದ ವಾಣಿಜ್ಯ ಮಳಿಗೆಗಳನ್ನು ಮುಚ್ಚಲು ಆದೇಶಿಸಲಾಗಿದೆ.

ಹೀಗಾಗಿ, ಕ್ರುದ್ಧಗೊಂಡ ಸಾರ್ವಜನಿಕರು ಬೀದಿಗೆ ಇಳಿದು ಪ್ರತಿಭಟಿಸುತ್ತಿದ್ದಾರೆ. ಪ್ರಧಾನಿ ಅಲೆಕ್ಸಾಂಡರ್‌ ಸ್ಕಲೆನ್‌ಬರ್ಗ್‌ ಇನ್ನೂ 20 ದಿನಗಳ ಕಾಲ ಲಾಕ್‌ಡೌನ್‌ ಇರಲಿದೆ ಎಂದಿದ್ದಾರೆ.

ಬೆಲ್ಜಿಯಂನ ಬ್ರುಸೆಲ್ಸ್‌ನಲ್ಲಿ 35 ಸಾವಿರ ಮಂದಿ ಪೊಲೀಸರ ಜತೆಗೆ ಘರ್ಷಣೆಗೆ ಕೂಡ ಇಳಿದಿದ್ದಾರೆ. ಸರ್ಕಾರ ಜಾರಿಗೊಳಿಸಿದ ಕಠಿಣ ನಿಯಮಗಳನ್ನು ವಿರೋಧಿಸಿ ಅವರು, ಮೆರವಣಿಗೆ ನಡೆಸಿದ್ದಾರೆ. ನೆದರ್ಲೆಂಡ್‌ನ‌ಲ್ಲಿಯೂ ಕೂಡ ಹಿಂಸಾಕೃತ್ಯಗಳು ನಡೆದಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ 50ಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಗಿದೆ.

Advertisement

ಇದನ್ನೂ ಓದಿ:ಮಳೆ ಹಾನಿ ಪ್ರದೇಶವನ್ನು ಪರಿಶೀಲಿಸಿದ ಶಾಸಕ ಡಾ. ಜಿ ಪರಮೇಶ್ವರ್

538 ದಿನಗಳಿಗೆ ಕನಿಷ್ಠ ಕೇಸು
ದೇಶದಲ್ಲಿ ಭಾನುವಾರದಿಂದ ಸೋಮವಾರದ ಅವಧಿಯಲ್ಲಿ 8,488 ಹೊಸ ಪ್ರಕರಣಗಳು ದಾಖಲಾಗಿವೆ. ಇದು 538 ದಿನಗಳಿಗೆ ಹೋಲಿಕೆ ಮಾಡಿದರೆ ಅತ್ಯಂತ ಕನಿಷ್ಠದ್ದಾಗಿದೆ. 24 ಗಂಟೆಗಳಲ್ಲಿ ಸೋಂಕಿನಿಂದಾಗಿ 249 ಮಂದಿ ಅಸುನೀಗಿದ್ದಾರೆ. ಸಕ್ರಿಯ ಸೋಂಕು ಪ್ರಕರಣಗಳ ಸಂಖ್ಯೆ 1,18,443ಕ್ಕೆ ಇಳಿಕೆಯಾಗಿದೆ. ಸೋಂಕಿನಿಂದ ಚೇತರಿಕೆ ಪ್ರಮಾಣ ಶೇ.98.31 ಆಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. 2020ರ ಮಾರ್ಚ್‌ ಬಳಿಕ ಈ ಪ್ರಮಾಣ ದಾಖಲೆಯ ಏರಿಕೆಯಾಗಿದೆ.

2 ವಾರಗಳಲ್ಲಿ ತೀರ್ಮಾನ:
ಮಕ್ಕಳಿಗಾಗಿ ಲಸಿಕೆ ನೀಡುವ ಬಗ್ಗೆ ಇನ್ನು ಎರಡು ವಾರಗಳಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತದೆ. ಇದರ ಜತೆಗೆ, ದೇಶದಲ್ಲಿ ಹೆಚ್ಚುವರಿ ಅಥವಾ ಬೂಸ್ಟರ್‌ ಡೋಸ್‌ ನೀಡಬೇಕೇ ಬೇಡವೆ ಎಂಬ ಬಗ್ಗೆ ಲಸಿಕೆ ಹಾಕುವುದಕ್ಕಾಗಿನ ರಾಷ್ಟ್ರೀಯ ತಾಂತ್ರಿಕ ಸಮಿತಿ (ಎನ್‌ಟಿಎಜಿಐ) ಪರಿಶೀಲನೆ ನಡೆಸಿ ತೀರ್ಮಾನ ಕೈಗೊಳ್ಳಲಿದೆ. ಇತರ ಆರೋಗ್ಯ ಸಮಸ್ಯೆಗಳು ಇರುವ (ಕೊ-ಮಾರ್ಬಿಡಿಟಿ) ಮಕ್ಕಳಿಗೆ ಜನವರಿಯಿಂದ ಲಸಿಕೆ ನೀಡುವ ಸಾಧ್ಯತೆಗಳಿವೆ.

ದೇಶಕ್ಕೆ ಬಾಧಿಸದು 3ನೇ ಅಲೆ?
ಕೆಲವೊಂದು ರಾಷ್ಟ್ರಗಳಲ್ಲಿ ಸೋಂಕು ಸಂಖ್ಯೆ, ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದರೂ, ದೇಶದಲ್ಲಿ 3ನೇ ಅಲೆ ಬಾಧಿಸುವ ಸಾಧ್ಯತೆ ಕಡಿಮೆ. ಹೀಗೆಂದು ಸರ್ಕಾರ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ನಡೆದ “ಪ್ರಾಜೆಕ್ಟ್: ಜೀವನ್‌ ರಕ್ಷಾ’ ಎಂಬ ವಿಶ್ಲೇಷಣಾತ್ಮಕ ಅಧ್ಯಯನದಲ್ಲಿ ಅಭಿಪ್ರಾಯಪಡಲಾಗಿದೆ. ಈ ಬಗ್ಗೆ “ದ ಇಂಡಿಯನ್‌ ಎಕ್ಸ್‌ಪ್ರೆಸ್‌’ ಜತೆಗೆ ಮಾತನಾಡಿದ ಅಧ್ಯಯನದ ಸಂಚಾಲಕ ಮೈಸೂರು ಸಂಜೀವ್‌ ಕೊರೊನಾ ಬಗ್ಗೆ ವೈದ್ಯ ವಿಮೆ ಕ್ಲೇಮುಗಳ ಪ್ರಮಾಣ ಶೇ.72ರಷ್ಟು ಕಡಿಮೆಯಾಗಿದೆ.

ಸೆಪ್ಟೆಂಬರ್‌ನಲ್ಲಿ 1.55 ಲಕ್ಷ ಕ್ಲೇಮುಗಳು, ಅಕ್ಟೋಬರ್‌ನಲ್ಲಿ 0.41 ಲಕ್ಷಕ್ಕೆ ಇಳಿಕೆಯಾದವು ಎಂದು ಹೇಳಿದ್ದಾರೆ. ಕಳೆದ ತಿಂಗಳು ಸರಣಿ ಹಬ್ಬಗಳಿದ್ದರೂ, ಸೋಂಕು ಸಂಖ್ಯೆ ಏರಿಕೆಯಾಗಿಲ್ಲ ಎಂದು ಸಂಜೀವ್‌ ಹೇಳಿದ್ದಾರೆ. ಇದರ ಜತೆಗೆ ಸೋಂಕಿನಿಂದ ಉಂಟಾಗಿರುವ ಸಾವಿನ ಬಗ್ಗೆ ಕ್ಲೇಮುಗಳ ಪ್ರಮಾಣವೂ ಶೇ.60ಕ್ಕೆ ಕುಸಿದಿದೆ ಎಂದಿದ್ದಾರೆ.

ಲಸಿಕೆ ಬೇಡ ಎನ್ನುವವರ
ಸಂಖ್ಯೆ 11.5 ಕೋಟಿಗೆ ಏರಿಕೆ
ದೇಶದಲ್ಲಿ ಮೊದಲ ಮತ್ತು ಎರಡನೇ ಅಲೆಯ ಬಳಿಕ ಲಸಿಕೆ ಹಾಕಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗಿತ್ತು. ಸರ್ಕಾರ ಮತ್ತು ಜನರು ಜತೆಯಾಗಿ ಕೈಗೊಂಡ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದರಿಂದ ಕೊರೊನಾ ತೀವ್ರತೆ ಕಡಿಮೆಯಾಗಿದೆ. ಹೀಗಾಗಿ, ಸೋಂಕಿನ ಬಗ್ಗೆ ಇರುವ ಭೀತಿ ದೂರವಾಗುತ್ತಿದೆ. ಇದರ ಪರಿಣಾಮವಾಗಿ ಲಸಿಕೆ ಹಾಕಿಸಿಕೊಳ್ಳುವುದು ಬೇಡ ಎನ್ನುವವರ ಸಂಖ್ಯೆ ಹೆಚ್ಚಾಗಿದೆ.

“ಲೋಕಲ್‌ ಸರ್ಕಲ್‌’ ನಡೆಸಿದ ಅಧ್ಯಯನದ ಪ್ರಕಾರ ದೇಶದಲ್ಲಿ ಲಸಿಕೆ ಬೇಡ ಎನ್ನುವವರ ಸಂಖ್ಯೆ 11.5 ಕೋಟಿಗೆ ಏರಿಕೆಯಾಗಿದೆ. ಕಳೆದ ತಿಂಗಳ ಮೊದಲ ವಾರದಲ್ಲಿ ಬೇಡ ಎನ್ನುವವರ ಸಂಖ್ಯೆ 7.5 ಕೋಟಿ ಆಗಿತ್ತು. ದೇಶದ 309 ಜಿಲ್ಲೆಗಳಲ್ಲಿ ನಡೆಸಲಾಗಿರುವ ಮತ್ತೂಂದು ಸಮೀಕ್ಷೆ ಪ್ರಕಾರ ಶೇ.23ಮಂದಿ ಇನ್ನಷ್ಟೇ ಲಸಿಕೆ ಹಾಕಿಸಿಕೊಳ್ಳಬೇಕು, ಶೇ.23ಮಂದಿ ಲಸಿಕೆ ಹಾಕಿಸಿಕೊಳ್ಳಲು ಉತ್ಸುಕರಾಗಿದ್ದಾರೆ. ಶೇ.16 ಮಂದಿ ಲಸಿಕೆ ಮತ್ತಷ್ಟು ಪ್ರಭಾವಶಾಲಿಯಾಗಿ ಕೆಲಸ ಮಾಡುತ್ತದೆ ಎಂಬ ವರದಿಗಳು ಪ್ರಕಟವಾದ ಬಳಿಕ ಹಾಕಿಸಿಕೊಳ್ಳುವುದಾಗಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next