ಕೋಲ್ಕತ್ತಾ: ಪಂಚಾಯತ್ ಚುನಾವಣೆ ನಡೆಯುತ್ತಿರುವ ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಶನಿವಾರ ನಡೆದ ಘರ್ಷಣೆಯಲ್ಲಿ ಕನಿಷ್ಠ ಏಳು ಮಂದಿ ಸಾವನ್ನಪ್ಪಿದ್ದಾರೆ ಎಮದು ವರದಿಯಾಗಿದೆ.
ಹತ್ಯೆಯಾದವರಲ್ಲಿ ಐವರು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸದಸ್ಯರು ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ತಲಾ ಒಬ್ಬ ಕಾರ್ಯಕರ್ತರು ಸೇರಿದ್ದಾರೆ.
ಶನಿವಾರ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದೆ. ಬಿಗಿ ಭದ್ರತೆಯಲ್ಲಿ ಪಂಚಾಯತ್ ಚುನಾವಣೆ ನಡೆಸಲಾಗುತ್ತಿದೆ. ಗ್ರಾಮ ಪಂಚಾಯತ್ ಪ್ರದೇಶಗಳಲ್ಲಿ ವಾಸಿಸುವ 5.67 ಕೋಟಿ ಜನರು ಈ ಮತದಾನದಲ್ಲಿ ಭಾಗವಹಿಸುತ್ತಿದ್ದಾರೆ.
ಹಿಂಸಾಚಾರದಿಂದ ಹೆಚ್ಚು ಹಾನಿಗೊಳಗಾದ ಮುರ್ಷಿದಾಬಾದ್ ಜಿಲ್ಲೆಯಲ್ಲಿ, ಟಿಎಂಸಿ ಕಾರ್ಯಕರ್ತ ಬಾಬರ್ ಅಲಿಯನ್ನು ಕಪಾಸ್ದಂಗ ಪ್ರದೇಶದಲ್ಲಿ ಕೊಲ್ಲಲಾಯಿತು. ಅವರನ್ನು ಬಹರಂಪುರದ ಮುರ್ಷಿದಾಬಾದ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕರೆತಂದಾಗ ಅವರು ಮೃತಪಟ್ಟಿದ್ದಾರೆ ಎಂದು ದೃಢಪಡಿಸಲಾಯಿತು.
ಶುಕ್ರವಾರ ಮುರ್ಷಿದಾಬಾದ್ ಜಿಲ್ಲೆಯ ರೆಜಿನಗರದಲ್ಲಿ ಕಚ್ಚಾ ಬಾಂಬ್ ಸ್ಫೋಟದಲ್ಲಿ ಟಿಎಂಸಿ ಕಾರ್ಯಕರ್ತ ಸಾವನ್ನಪ್ಪಿದ್ದಾನೆ. ಜಿಲ್ಲೆಯ ಖಾರ್‌ಗ್ರಾಮ್‌ನಲ್ಲಿ ಮತ್ತೊಬ್ಬ ತೃಣಮೂಲ ಕಾರ್ಯಕರ್ತನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ.
ಕೂಚ್ ಬೆಹಾರ್ ಜಿಲ್ಲೆಯ ಫಲಿಮಾರಿಯಲ್ಲಿ ಶನಿವಾರ ಬಿಜೆಪಿ ಮತಗಟ್ಟೆ ಏಜೆಂಟ್ ಮಾಧವ್ ಬಿಸ್ವಾಸ್ ಅವರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ.