ಬಳ್ಳಾರಿ: ರಾಜ್ಯದಲ್ಲಿ ಕೋವಿಡ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕಡ್ಡಾಯಗೊಳಿಸಿರುವ ಮಾಸ್ಕ್, ಸಾಮಾಜಿಕ ಅಂತರ ನಿಯಮ ಉಲ್ಲಂಘಿಸಿದವರಿಂದ ಕಳೆದ ಒಂದು ತಿಂಗಳಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಸಂಗ್ರಹಿಸಿದ ದಂಡದ ಮೊತ್ತ ಬರೋಬ್ಬರಿ 11,54,700 ರೂಪಾಯಿಗಳು.
ಹೌದು…! ರಾಜ್ಯದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುತ್ತಿದೆ. ಪರಿಣಾಮ ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸುವುದು ಕಡ್ಡಾಯವಾಗಿದ್ದು, ಉಲ್ಲಂಘಿಸಿದಲ್ಲಿ ದುಬಾರಿ ದಂಡ ವಿಧಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಪಾಲನೆ ಮಾಡದಿದ್ದರೆ ಮತ್ತು ಮಾಸ್ಕ್ ಧರಿಸದಿದ್ದರೆ 250 ರೂ. ದಂಡ ವಿ ಧಿಸಲಾಗುತ್ತಿದ್ದು, ಕಳೆದ ಒಂದು ತಿಂಗಳಲ್ಲಿ (ಸೆ. 10ರಿಂದ ಅ.7ರವರೆಗೆ) ಜಿಲ್ಲೆಯಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಧರಿಸದೆ ಕೋವಿಡ್ ನಿಯಮ ಉಲ್ಲಂಘಿಸಿದವರಿಂದ 7714 ಪ್ರಕರಣ ದಾಖಲಿಸಿ, 11,54,700 ರೂ.ಗಳ ದಂಡವನ್ನು ಸಂಗ್ರಹಿಸಲಾಗಿದೆ.
ಮೂಲಗಳ ಪ್ರಕಾರ ರಾಜ್ಯಕ್ಕೆ ಈ ತಿಂಗಳ ಆರಂಭದ ಎಂಟೇ ದಿನದಲ್ಲಿ ಸುಮಾರು ಒಂದು ಕೋಟಿ ರೂಪಾಯಿನ ಆದಾಯ ಬಂದಿತ್ತು. ಈ ಪೈಕಿ ಗಣಿನಾಡು ಬಳ್ಳಾರಿ ಜಿಲ್ಲೆ ಮುಂಚೂಣಿಯಲ್ಲಿದೆ. ಬಳ್ಳಾರಿ ಜಿಲ್ಲೆಯಲ್ಲಿ ಇದುವರೆಗೆ 12 ಲಕ್ಷ ರೂ.ನಷ್ಟು ಆದಾಯ ದಂಡದ ರೂಪದಲ್ಲಿ ಸರ್ಕಾರದಬೊಕ್ಕಸಕ್ಕೆ ಬಂದು ಸೇರಿದೆ. ಇದು ಕೇವಲ ಮಾಸ್ಕ್ ಧರಿಸದೇ ಇರುವುದಕ್ಕೆ ಮತ್ತು ಸಾಮಾಜಿಕ ಅಂತರ ಕಾಪಾಡದೇ ಇರುವುದಕ್ಕೆ ವಿಧಿಸಿದ ದಂಡವಾಗಿದೆ. ಕೋವಿಡ್ ಪಸರಿಸುವುದನ್ನು ತಡೆಯುವ ನಿಟ್ಟಿನಲ್ಲಿ ಎಲ್ಲರೂ ಮಾಸ್ಕ್ ಧರಿಸದೇ ಇರುವವರಿಗೆ ದಂಡ ವಿಧಿಸುವ ಮೂಲಕ ಎಲ್ಲರೂ ಮಾಸ್ಕ್ ಧರಿಸುವಂತೆ ಪ್ರರೇಪಿಸುವುದು ಈ ನಿಯಮದ ಉದ್ದೇಶವಾಗಿದೆ.
ಜಿಲ್ಲೆಯಲ್ಲಿ ಸೆಪ್ಟೆಂಬರ್ 10ರಿಂದ ಅಕ್ಟೋಬರ್ 7 ವರೆಗೆ ಒಟ್ಟಾರೆ 7594 ಮಾಸ್ಕ್ ಧರಿಸದೇ ಇರುವ ಪ್ರಕರಣಗಳನ್ನು ದಾಖಲಿಸಲಾಗಿದೆ. ಇದರಿಂದ ಒಟ್ಟು 11,37,600 ರೂ. ದಂಡ ಸಂಗ್ರಹಿಸಲಾಗಿದೆ. ಇದೇರೀತಿ ಸಾಮಾಜಿಕ ಅಂತರ ಕಾಪಾಡಿಕೊಳ್ಳದೇ ಇರುವ ಕಾರಣಕ್ಕೆ ಒಟ್ಟು 120 ಪ್ರಕರಣಗಳನ್ನು ದಾಖಲಿಸಿದ್ದು ಇದರಿಂದ 17,100 ರೂ. ಸಂಗ್ರಹಿಸಲಾಗಿದೆ. ಸೆಪ್ಟೆಂಬರ್ 26ರಂದು ಒಂದೇ ದಿನ ದಾಖಲೆ ಪ್ರಮಾಣದಲ್ಲಿ 1030 ಪ್ರಕರಣ ದಾಖಲಿಸಿಕೊಂಡು 1,30,800 ರೂ. ಸಂಗ್ರಹಿಸಿರುವುದು ವಿಶೇಷ.
ಕೋವಿಡ್ ಸೋಂಕು ನಿಯಂತ್ರಣಕ್ಕೆ ಬಾರದೇ ಇದ್ದುದು ಮತ್ತೆ ಲಾಕ್‌ಡೌನ್ ಮಾಡುವುದು ಅಸಾಧ್ಯ ಎಂಬ ಕಾರಣಕ್ಕೆ ಸರ್ಕಾರ ಜನಜೀವನ ಮಾಮೂಲಿಯಂತೆ ನಡೆಸಲು ಅವಕಾಶಮಾಡಿಕೊಟ್ಟಿತು. ಆದರೆ, ಜನರು ಜಾಗೃತಿ ಮಧ್ಯೆಯೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಮತ್ತು ಮಾಸ್ಕ್ ಧರಿಸುವ ಗೋಜಿಗೆ ಹೋಗಲೇಇಲ್ಲ. ಇದರಿಂದ ಸಹಜವಾಗಿ ಸೋಂಕು ಏರಿಕೆ ಕಾಣುತ್ತಾ ಹೋಯಿತು. ಇದೀಗ ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣ ಇಳಿಕೆ ಕಾಣುತ್ತಿದೆ. ವೈರಸ್ ಹಬ್ಬುವ ಸಾಮರ್ಥ್ಯ ಕಳೆದುಕೊಂಡಿದೆ. ಹೀಗಾಗಿ ಕಡಿಮೆ ಆಗಿದೆ ಎಂಬ ವಾದವಿದ್ದರೂ ಸಹ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ
ಕಾಪಾಡಿಕೊಳ್ಳುವುದೂ ಸಹ ಸೋಂಕು ಹರಡದೇ ಇರುವುದಕ್ಕೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಒಟ್ಟಿನಲ್ಲಿ ಸದ್ಯ ಸೋಂಕು ಹರಡುವ ಪ್ರಮಾಣ, ರೋಗದಿಂದ ಗುಣಮುಖರಾಗುವವರ ಪ್ರಮಾಣ ಗಮನಿಸಿದರೆ ಶೀಘ್ರವೇ ನಮ್ಮ ಜಿಲ್ಲೆ ಸೋಂಕು ಮುಕ್ತ ಆಗಬಹುದೆಂಬ ನಿರೀಕ್ಷೆ ಇದೆ. ಸದ್ಯ 2658 ಸಕ್ರಿಯ ಪ್ರಕರಣ ನಮ್ಮ ಜಿಲ್ಲೆಯಲ್ಲಿವೆ. ರೋಗದಿಂದ ಗುಣಮುಖರಾಗುವವರ ಪ್ರಮಾಣ ಹೊಸ ಸೋಂಕಿತರ ಪತ್ತೆಗಿಂತ ಹೆಚ್ಚಿದೆ. ಇದೇ ಕಾರಣಕ್ಕೆ ಜಿಲ್ಲಾಡಳಿತ ಜಿಲ್ಲಾಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆ ಪಟ್ಟಿಯಿಂದ ಹೊರತಂದು ಸಾಮಾನ್ಯ ಆಸ್ಪತ್ರೆ ಮಾಡಿದೆ.
ಕೋವಿಡ್ ನಿಯಮಾವಳಿ ಉಲ್ಲಂಘಿಸಿ ಸಾಮಾಜಿಕ ಅಂತರ ಪಾಲಿಸದ, ಮುಖಗವಸು ಧರಿಸದ, ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವವರಿಗೆ ದಂಡ ವಿಧಿಸದಿರುವುದರಿಂದ ಸಾರ್ವಜನಿಕರು ಸಾರ್ವಜನಿಕ ಸ್ಥಳಗಳಲ್ಲಿ ಮುಕ್ತವಾಗಿ ಸಂಚರಿಸುತ್ತಿದ್ದಾರೆ. ಇದರಿಂದ ಕೋವಿಡ್ ಸಾಂಕ್ರಾಮಿಕ ರೋಗ ಪ್ರಕರಣಗಳು ಹೆಚ್ಚಾಗಿರುವುದು ಆರೋಗ್ಯ ಇಲಾಖೆ ಅಂಕಿ-ಅಂಶಗಳಿಂದ ತಿಳಿದುಬಂದಿದೆ. ಹೀಗಾಗಿ ರಾಜ್ಯ ಸರ್ಕಾರ ಸಾಮಾಜಿಕ ಅಂತರ ಕಾಪಾಡದವರಿಗೆ, ಮಾಸ್ಕ್ ಧರಿಸದವರಿಗೆ ದಂಡ ವಿಧಿಸಲಾಗುತ್ತಿದೆ.