Advertisement

ಗಜಪಡೆ ತಾಲೀಮಿಗೆ ವಿಂಟೇಜ್‌ ಕಾರುಗಳ ಸಾಥ್‌

11:09 AM Oct 02, 2018 | Team Udayavani |

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಆಕರ್ಷಣೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮೊದಲ ದಿನವೇ ದಸರೆಯ ಸಂಭ್ರಮವನ್ನು ಇಮ್ಮಡಿಗೊಳಿಸಿದ್ದ ವಿಂಟೇಜ್‌ ಕಾರುಗಳು ಸೋಮವಾರ ದಸರಾ ಗಜಪಡೆಯೊಂದಿಗೆ ಕಾಣಿಸಿಕೊಂಡು ಗಮನ ಸೆಳೆದವು.

Advertisement

ದಸರಾ ಮಹೋತ್ಸವಕ್ಕೆ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಲು ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಹಾಗೂ ಫೆಡರೇಷನ್‌ ಆಫ್ ಹಿಸ್ಟಾರಿಕ್‌ ವೆಹಿಕಲ್‌ ಆಫ್ ಇಂಡಿಯಾ ವತಿಯಿಂದ ದಸರೆ ಉತ್ಸವಕ್ಕೆ ವಿಂಟೇಜ್‌ ಕಾರುಗಳ ಬಂಧವನ್ನು ಬೆಸೆಯಲಾಗಿದೆ.

ಈ ಹಿನ್ನೆಲೆಯಲ್ಲಿ ಸೆ.30ರಂದು ನಗರದೆಲ್ಲೆಡೆ ಸಂಚರಿಸುವ ಮೂಲಕ ಎಲ್ಲರ ಆಕರ್ಷಣೆಗೆ ಕಾರಣವಾಗಿದ್ದ ವಿಂಟೇಜ್‌ ಕಾರುಗಳು, ದಸರಾ ಗಜಪಡೆ ತಾಲೀಮಿಗೆ ಸಾಥ್‌ ನೀಡಿದವು. ಗಜಪಡೆಯ 12 ಆನೆಗಳ ತಾಲೀಮಿನಲ್ಲಿ ಸಾಗಿದ ವಿಂಟೇಜ್‌ ಕಾರುಗಳ ಆಕರ್ಷಣೆಗೆ ನಗರದ ಜನತೆ ಮನಸೋತರು. 

ತಾಲೀಮಿನಲ್ಲಿ 10 ಕಾರು: ವಿಂಟೇಜ್‌ ಕಾರುಗಳ ರ್ಯಾಲಿ ಹಿನ್ನೆಲೆಯಲ್ಲಿ ಹಲವು ದಶಕಗಳ ಹಿಂದೆ ರಾಜಮಹಾರಾಜರು, ಸಿರಿವಂತರು ಸೇರಿದಂತೆ ಹಲವು ಗಣ್ಯರು ಬಳಸುತ್ತಿದ್ದ ಅಂದಾಜು 50 ಕಾರುಗಳು ಪಾಲ್ಗೊಂಡಿದ್ದವು. ರ್ಯಾಲಿಯಲ್ಲಿ ಕೇವಲ ಭಾರತ ಮಾತ್ರವಲ್ಲದೆ ವಿದೇಶದ ವಿಂಟೇಜ್‌ ಕಾರುಗಳು ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು. 

ದಸರಾ ಗಜಪಡೆಗೆ ಯಾವುದೇ ತೊಂದರೆ ಆಗಬಾರದೆಂಬ ಉದ್ದೇಶದಿಂದ ಆನೆಗಳ ತಾಲೀಮಿನಲ್ಲಿ 10 ವಿಂಟೆಜ್‌ ಕಾರುಗಳು ಭಾಗಿಯಾಗಿವೆ. ಅರಮನೆ ಅಂಗಳದಿಂದ ಜಂಬೂಸವಾರಿ ಮೆರವಣಿಗೆ ಸಾಗುವ ಮಾರ್ಗದಲ್ಲಿ ಸಾಗಿದ ವಿಂಟೇಜ್‌ ಕಾರುಗಳ ಜತೆಗೆ ಅರ್ಜುನ ನೇತೃತ್ವದ ಗಜಪಡೆ ಗಾಂಭೀರ್ಯದಿಂದ ಹೆಜ್ಜೆಹಾಕಿ ನೋಡುಗರ ಮನತಣಿಸಿದವು.

Advertisement

ತಾಲೀಮು ಆರಂಭಕ್ಕೂ ಮುನ್ನ ಅಂಬಾರಿ ಹೊರುವ ಕ್ಯಾಪ್ಟನ್‌ ಅರ್ಜುನ ನೇತೃತ್ವದ ಗಜಪಡೆ, ಅರಮನೆ ಮುಂಭಾಗ ನಿಲ್ಲಿಸಿದ್ದ ವಿಂಟೇಜ್‌ ಕಾರುಗಳ ಎದುರು ನಿಲ್ಲಿಸಿದ್ದ ವಿಂಟೇಜ್‌ ಕಾರುಗಳೊಂದಿಗೆ ಫೋಟೋ ಫೋಸ್‌ ನೀಡಿ ಗಮನ ಸೆಳೆದವು.

ಬೆಟ್ಟದಲ್ಲಿ ವಿಂಟೇಜ್‌ ಹವಾ: ದಸರಾ ಹಿನ್ನೆಲೆಯಲ್ಲಿ ನಗರಕ್ಕಾಗಮಿಸಿ ರ್ಯಾಲಿ ನಡೆಸಿದ ವಿಂಟೇಜ್‌ ಕಾರುಗಳ ಆಕರ್ಷಣೆಯ ಹವಾ ಚಾಮುಂಡಿಬೆಟ್ಟದಲ್ಲೂ ಕಂಡು ಬಂದಿತು. ಸೋಮವಾರ ಬೆಳಗ್ಗೆ ಗಜಪಡೆಯೊಂದಿಗೆ ನಡೆದ ರ್ಯಾಲಿಯಲ್ಲಿ ಪಾಲ್ಗೊಂಡ ಬಳಿಕ ಚಾಮುಂಡಿಬೆಟ್ಟಕ್ಕೆ ತೆರಳಿ, ನಾಡದೇವತೆಯ ಸನ್ನಿಧಿಯಲ್ಲಿದ್ದ ಪ್ರವಾಸಿಗರನ್ನು ಗಮನ ಸೆಳೆದವು.

ಜಂಬೂಸವಾರಿ ಮೆರವಣಿಗೆ ಮಾರ್ಗದಲ್ಲಿ ಗಜಪಡೆಯೊಂದಿಗೆ ಪ್ರಮುಖ ರಸ್ತೆಗಳಲ್ಲಿ ಸಾಗಿ, ಎಲ್ಲರ ಆಕರ್ಷಣೆ ಹೆಚ್ಚಿಸಿದ ವಿಂಟೇಜ್‌ ಕಾರುಗಳು ಚಾಮುಂಡಿ ಬೆಟ್ಟಕ್ಕೂ ತೆರಳಿದವು. ಅಧಿದೇವತೆ ಚಾಮುಂಡೇಶ್ವರಿ ದೇಗುಲವನ್ನು ಒಂದು ಸುತ್ತು ಪ್ರದಕ್ಷಿಣೆ ಹಾಕಿದ ವಿಂಟೇಜ್‌ ಕಾರುಗಳ ಮಾಲಿಕರು ನೋಡುಗರ ಗಮನ ಸೆಳೆದರು. 

Advertisement

Udayavani is now on Telegram. Click here to join our channel and stay updated with the latest news.

Next