ವಿನೋದ್ ಪ್ರಭಾಕರ್ ಅಭಿನಯದ “ಕ್ರ್ಯಾಕ್’ ರಿಲೀಸ್ ಆಗಿದೆ. ಅಬ್ಬರ ಅಲ್ಲದಿದ್ದರೂ, ದಿನ ಕಳೆದಂತೆ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಈಗ ಹೊಸ ವಿಷಯವೇನೆಂದರೆ, ವಿನೋದ್ ಪ್ರಭಾಕರ್ “ಕ್ರ್ಯಾಕ್’ ಬಳಿಕ ಯಾವ ಸಿನಿಮಾ ಮಾಡುತ್ತಾರೆ ಎಂಬ ಪ್ರಶ್ನೆ ಇತ್ತು. ಅದಕ್ಕೀಗ ಸ್ವತಃ ವಿನೋದ್ ಪ್ರಭಾಕರ್ ಅವರೇ ಉತ್ತರಿಸಿದ್ದಾರೆ. ವಿನೋದ್ ಹೊಸ ಚಿತ್ರಕ್ಕೆ ಸದ್ಯಕ್ಕೆ “ರಗಡ್’ ಎಂದು ನಾಮಕರಣ ಮಾಡಲಾಗಿದ್ದು, ಅಕ್ಟೋಬರ್ 13 ರಂದು ಚಿತ್ರಕ್ಕೆ ಚಾಲನೆ ಸಿಗಲಿದೆ.
ದರ್ಶನ್ ಅವರ ಹಲವು ಚಿತ್ರಗಳಿಗೆ ಅಸೋಸಿಯೇಟ್ ಆಗಿ ಕೆಲಸ ಮಾಡಿದ್ದ ಮಹೇಶ್ ಗೌಡ ಅವರೊಂದು ಕಥೆ ಹೇಳಿದ್ದು, ಅದೊಂದು ಬೇರೆ ಜಾನರ್‌ನ ಸಿನಿಮಾ ಅಂತೆ. “ಇಲ್ಲಿ ಲವ್ ಮತ್ತು ಆ್ಯಕ್ಷನ್ ವಿಶೇಷವಾಗಿದೆ. ಸಾಕಷ್ಟು ಟ್ವಿಸ್ಟ್, ಟರ್ನ್ ಆ ಕಥೆಯಲ್ಲಿದೆ. ಅಲ್ಲಿ ನನ್ನದು ಮುಗ್ಧತೆಯ ಪಾತ್ರ. ಆದರೂ ಸಖತ್ ಆ್ಯಕ್ಷನ್ ಇರಲಿದೆ. ಅಂದಹಾಗೆ, ಆ ಚಿತ್ರಕ್ಕೆ “ರಗಡ್’ ಎಂಬ ಶೀರ್ಷಿಕೆ ಇಡಬೇಕು ಎಂದು ನಿರ್ದೇಶಕರು ನಿರ್ಧರಿಸಿದ್ದಾರೆ.
ಅದಿನ್ನೂ ನೋಂದಣಿಯಾಗಿಲ್ಲ. ಇಷ್ಟರಲ್ಲೇ ಶೀರ್ಷಿಕೆ ಪಕ್ಕಾ ಆಗಲಿದೆ. ಈ ಚಿತ್ರವನ್ನು ಅರುಣ್ ಕುಮಾರ್ ಎಂಬುವರು ನಿರ್ಮಾಣ ಮಾಡುತ್ತಿದ್ದಾರೆ. ಮಹೇಶ್‌ಗೌಡ ಅವರಿಗೆ ಇದು ಮೊದಲ ನಿರ್ದೇಶನದ ಚಿತ್ರ. ಚಿತ್ರಕ್ಕೆ ಅಭಿಮನ್ ರಾಯ್ ಸಂಗೀತವಿದೆ. ಈಗಾಗಲೇ ರಾಗ ಸಂಯೋಜನೆಗೆ ಚಾಲನೆ ಸಿಕ್ಕಿದೆ. ಇನ್ನು “ಮರಿ ಟೈಗರ್’ ಚಿತ್ರ ಕೂಡ ರಿಲೀಸ್‌ಗೆ ರೆಡಿಯಾಗಿದೆ. ಇಷ್ಟರಲ್ಲೇ ಅದು ಪ್ರೇಕ್ಷಕರ ಮುಂದೆ ಬರಲಿದೆ’ ಎಂಬುದು ವಿನೋದ್ ಮಾತು.
ಓಂಪ್ರಕಾಶ್ ರಾವ್ ನಿರ್ದೇಶನದ ಒಂದು ಚಿತ್ರದಲ್ಲಿ ವಿನೋದ್ ನಟಿಸುತ್ತಿದ್ದಾರೆ ಎಂಬ ಸುದ್ದಿ ಇದೇ “ಬಾಲ್ಕನಿ’ಯಲ್ಲಿ ಓದಿರುತ್ತೀರಿ. ಆ ಚಿತ್ರಕ್ಕೂಚಾಲನೆ ಸಿಕ್ಕಿದ್ದು, ನವೆಂಬರ್‌ನಲ್ಲಿ ಚಿತ್ರ ಪ್ರಾರಂಭವಾಗಲಿದೆ. ಶೀರ್ಷಿಕೆ ನೋಡಿದರೆ, ಅದೊಂದು ಹಿಂದು, ಮುಸ್ಲಿಂ ಭಾವೈಕ್ಯತೆಯ ಸಿನಿಮಾ ಇರಬಹುದಾ ಎಂಬ ಪ್ರಶ್ನೆ ಮೂಡುವುದು ಸಹಜ. ಇಲ್ಲಿ “ಹಿಂದುಸ್ಥಾನ್ ಮೇರಾ ಜಾನ್’ ಎಂಬ ಅಡಿಬರಹವಿದೆ.
ಅಲ್ಲಿಗೆ ಇದೊಂದು ಪಕ್ಕಾ ದೇಶಪ್ರೇಮದ ಕಥೆ ಎಂಬುದನ್ನು ಸೂಚಿಸುತ್ತದೆ. ಇಲ್ಲಿ “786′ ಎಂಬುದು ಹೀರೋಗೆ ಲಕ್ಕಿ ನಂಬರ್. ಅದರಲ್ಲೂ ದೇಶದ ಯೋಧನ ರೀತಿಯ ಕಥೆ ಅದು. ಒಂದು ಪಕ್ಕಾ ಆ್ಯಕ್ಷನ್ ಸಿನಿಮಾ ಆಗಿರುವುದರಿಂದ ಫುಲ್ ತಯಾರಿ ಮಾಡಿಕೊಂಡೇ ಕ್ಯಾಮೆರಾ ಮುಂದೆ ನಿಲ್ಲಲು ನಿರ್ಧರಿಸಿದ್ದಾರೆ ವಿನೋದ್ ಪ್ರಭಾಕರ್. “ಟೈಸನ್’ ಬಳಿಕ ಓಂ ಪ್ರಕಾಶ್ ರಾವ್, ಎರಡು ಕಥೆಗಳನ್ನು ಹೇಳಿದ್ದರು.
ಎರಡು ಕಥೆಗಳು ಚೆನ್ನಾಗಿದ್ದವು. ಆಮೇಲೆ, “786′ ಕಥೆ ಹೇಳಿದಾಗ, ಅದನ್ನು ಮಾಡುವ ಬಗ್ಗೆ ನಿರ್ಧರಿಸಿದೆವು. ದೊಡ್ಡ ಕ್ಯಾನ್ವಾಸ್‌ನಲ್ಲಿ ಆ ಸಿನಿಮಾ ಶುರುವಾಗಲಿದೆ. ಈ ಚಿತ್ರಕ್ಕೆ ಉಮೇಶ್‌ರೆಡ್ಡಿ ನಿರ್ಮಾಪಕರು. ಸದ್ಯಕ್ಕೆ ಸ್ಕ್ರಿಪ್ಟ್ ಕೆಲಸಗಳು ಮುಗಿದಿವೆ. ನವೆಂಬರ್‌ನಲ್ಲಿ ಸಿನಿಮಾಗೆ ಚಾಲನೆ ಸಿಗಲಿದೆ ಎಂದು ವಿವರ ಕೊಡುತ್ತಾರೆ ವಿನೋದ್.