Advertisement

ಬಾಲಿವುಡ್‌ ಮೇರು ನಟ ,ಸಂಸದ ವಿನೋದ್‌ ಖನ್ನಾ ವಿಧಿವಶ 

12:08 PM Apr 27, 2017 | Team Udayavani |

ಮುಂಬಯಿ : ಕಳೆದ ಕೆಲ ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಿವುಡ್‌ನ‌ ಮೇರು ನಟ , ಬಿಜೆಪಿ ಸಂಸದ ವಿನೋದ್‌ ಖನ್ನಾ ಗುರುವಾರ ವಿಧಿವಶರಾಗಿದ್ದಾರೆ.ಅವರಿಗೆ 70 ವರ್ಷ ಪ್ರಾಯವಾಗಿತ್ತು. 

Advertisement

1946 ಅಕ್ಟೋಬರ್‌ 6 ರಂದು  ಈಗಿನ ಪಾಕಿಸ್ಥಾನದ ಪೇಶಾವರ್‌ ಪ್ರಾಂತ್ಯದಲ್ಲಿ ಕಮಲಾ ಮತ್ತು ಕಿಶನ್‌ಚಂದ್‌ ಖನ್ನಾ ದಂಪತಿಗಳ ಮಗನಾಗಿ ಜನಿಸಿದ ಖನ್ನಾ ಮುಂಬಯಿಗೆ ಬಂದು ಚಿತ್ರರಂಗದಲ್ಲಿ ನೆಲೆ ಕಂಡು ಕೊಂಡಿದ್ದರು. 

1968 ರಲ್ಲಿ  ಸುನಿಲ್‌ ದತ್‌ ಅವರ ರಿಮೇಕ್‌ ಚಿತ್ರ ಅಧೂರ್ತಿ ಸುಬ್ಬರಾವ್‌ ನಲ್ಲಿ ಖಳನಟನಾಗಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದರು.  ಹೀಗೆ ಹಲವು ಚಿತ್ರಗಳಲ್ಲಿ  ಸಹ ನಟನಾಗಿ ನಟಿಸಿದ ಅವರು 1971 ರಲ್ಲಿ ಹಮ್‌ ತುಮ್‌ ಔರ್‌ ವೋ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡು ಬ್ರೇಕ್‌ ಪಡೆದರು. ಚಿತ್ರದಲ್ಲಿ ಭಾರತೀ ವಿಷ್ಣು ವರ್ಧನ್‌ ನಾಯಕಿಯಾಗಿದ್ದರು. 2013 ರ ವರೆಗೆ ಸುಮಾರು 141 ಚಿತ್ರಗಳಲ್ಲಿ ತಮ್ಮ ಮನೋಜ್ಞ ನಟನೆಯಿಂದ ಜನಪ್ರಿಯರಾಗಿದ್ದರು. 

4 ಬಾರಿ ಪಂಜಾಬ್‌ನ ಗುರುದಾಸ್‌ ಪುರ ಕ್ಷೇತ್ರದಿಂದ ಬಿಜೆಪಿ ಸಂಸದರಾಗಿ ಆಯ್ಕೆಯಾದ ಹೆಗ್ಗಳಿಗೆ ಖನ್ನಾ ಅವರದ್ದು , 2014 ರ ಚುನಾವಣೆಯಲ್ಲಿ ಭಾರೀ ಮತಗಳ ಅಂತರದಿಂದ ಜಯಗಳಿಸಿದ್ದರು. ಇದೀಗ ಅವರ ನಿಧನದಿಂದಾಗಿ ಕ್ಷೇತ್ರ ತೆರವಾಗಿದ್ದು ಉಪಚುನಾವಣೆ ನಡೆಯಬೇಕಾಗಿದೆ. 

1971 ರಲ್ಲಿ ಗೀತಾಂಜಲಿ ಅವರನ್ನು ವರಿಸಿದ್ದ ಖನ್ನಾ ಅವರು ದಾಂಪತ್ಯದಲ್ಲಿ ರಾಹುಲ್‌ ಖನ್ನಾ ಮತ್ತು ಅಕ್ಷಯ್‌ ಖನ್ನಾ ಇಬ್ಬರು ಪುತ್ರರನ್ನು ಪಡೆದಿದ್ದರು. ಓಶೋ ರಜನೀವ್‌ ಅವರ ಆಧ್ಯಾತ್ಮಿಕ ಚಟುವಟಿಕೆಯತ್ತ ಹೊರಳಿದ ಖನ್ನಾ ಅವರು ಮನೆಯಿಂದ ದೂರವಾಗಿದ್ದರು ಮಾತ್ರವಲ್ಲದೆ ಅಮೆರಿಕದಲ್ಲಿ 5 ವರ್ಷಗಳ ಕಾಲ ರಜನೀಶ್‌ ಅವರ ಸಹಾಯಕನಾಗಿ ಸೇವೆ ಸಲ್ಲಿಸಿದ್ದರು. ಅವರು ಗೀತಾಂಜಲಿ ಅವರಿಗೆ ವಿಚ್ಛೇಧನ ನೀಡಿದ್ದರು. 

Advertisement

ಹೊಸ ಜೀವನದ ತುಡಿತದಲ್ಲಿ 1990ರಲ್ಲಿ ಕವಿತಾ ಅವರನ್ನು ವಿವಾಹವಾದ ಖನ್ನಾ ಅವರಿಗೆ ಸಾಕ್ಷಿ ಮತ್ತು ಶೃದ್ಧಾ ಎನ್ನುವ ಇಬ್ಬರು ಪುತ್ರಿಯರಿದ್ದಾರೆ. 

ಖನ್ನಾ ನಿಧನಕ್ಕೆ ಬಾಲಿವುಡ್‌ನ‌ ದಿಗ್ಗಜರು ಸೇರಿದಂತೆ ಗಣ್ಯರು ತೀವ್ರ ಕಂಬನಿ ಮಿಡಿದಿದ್ದಾರೆ. 

ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರ ಕೃಶಕಾಯದ  ಫೋಟೋ ಸಾಮಾಜಿಕ ಜಾಲತಾಣ ಗಳಲ್ಲಿ ಹರಿದಾಡಿತ್ತು. ಪುತ್ರ ಮತ್ತು ಮತ್ತೋಬ್ಬರ ಆಸರೆಯಲ್ಲಿ ಅವರು ನಿಂತುಕೊಂಡಿ ರುವ ಫೋಟೋ ಹೆಚ್ಚಾಗಿ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಮುಂಬೈನ ರಿಲಯನ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next