ನವದೆಹಲಿ: ಕೇವಲ 100 ಗ್ರಾಂ ತೂಕ ಹೆಚ್ಚಳವಾದ ಕಾರಣ ಒಲಿಂಪಿಕ್ಸ್‌ನಿಂದ ಅನರ್ಹಗೊಂಡ ಕುಸ್ತಿಪಟು ವಿನೇಶ್ ಫೋಗಾಟ್ (Vinesh Phogat) ಜೊತೆ ಇಡೀ ಕ್ರೀಡಾ ಲೋಕವೇ ನಿಂತಿದೆ. ಫೈನಲ್ ಪ್ರವೇಶಿಸಿ ಇತಿಹಾಸ ಬರೆಯಬೇಕಿದ್ದ ನಮ್ಮ ಭಾರತೀಯ ನಾರಿಯ ಕನಸು ನುಚ್ಚುನೂರಾಗಿದೆ.
ಅನರ್ಹಗೊಂಡದ್ದು ಯಾಕೆ?:
ಈ ಮೊದಲು 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದ ವಿನೇಶ್ ಈ ಬಾರಿ ಅವಕಾಶ ಸಿಗದ ಕಾರಣ 50 ಕೆಜಿ ವಿಭಾಗದಲ್ಲಿ ಸ್ಪರ್ಧೆಗೆ ಇಳಿದಿದ್ದರು. ಹೀಗಾಗಿ ಸ್ಪರ್ಧೆ ಆರಂಭವಾಗುವ ದಿನ ಬೆಳಿಗ್ಗೆ ನಡೆಸುವ ತೂಕ ಪರಿಶೀಲನೆಯಲ್ಲಿ ಸ್ಪರ್ಧಿ 50 ಅಥವಾ ಅದಕ್ಕಿಂತ ಕಡಿಮೆ ಭಾರ ಹೊಂದಿರಬೇಕು. ವಿನೇಶ್ ಅವರ ತೂಕ 50 ಕೆಜಿ, 100 ಗ್ರಾಂ ಇದ್ದ ಕಾರಣ ಅವರನ್ನು ಅನರ್ಹಗೊಳಿಸಲಾಯಿತು.
2.8 ಕೆಜಿ ತೂಕ ಇಳಿಸಲು ರಾತ್ರಿಯಿಡೀ ಸೈಕ್ಲಿಂಗ್, ಸ್ಕಿಪ್ಪಿಂಗ್, ರನ್ನಿಂಗ್ ಮಾಡಿದ ವಿನೇಶ್, ಒಂದೂ ತೊಟ್ಟು ನೀರು ಕೂಡ ಕುಡಿಯದೇ ಬೆವರು ಸುರಿಸಿದ್ದರು. ಆದರೂ 100 ಹೆಚ್ಚಿಗೆ ಇದ್ದ ಕಾರಣ ಅವರನ್ನು ಅನರ್ಹಗೊಳಿಸಲಾಗಿದೆ.
ಇದರಿಂದ ಕುಗ್ಗಿಹೋಗಿರುವ ವಿನೇಶ್ ಫೋಗಾಟ್ ಕುಸ್ತಿ ಜಗತ್ತಿಗೆ ವಿದಾಯ ಹೇಳಿದ್ದಾರೆ. ತಾನು ಕುಸ್ತಿಗೆ ನಿವೃತ್ತಿ ಹೇಳುತ್ತಿದ್ದೇನೆ ಎಂದು ಫೋಗಾಟ್ ಭಾವನಾತ್ಮಕವಾಗಿ ಟ್ವೀಟ್ ಮಾಡಿದ್ದಾರೆ.
ಟ್ವೀಟ್ ನಲ್ಲಿ ಏನಿದೆ?: ಕುಸ್ತಿಯಲ್ಲಿ ಫೈನಲ್ ಪ್ರವೇಶಿಸಿ ಪದಕ ಖಚಿತಪಡಿಸಿದ್ದ ವಿನೇಶ್ ಅನರ್ಹಗೊಂಡ ಬಳಿಕ ನಿರ್ಜಲೀಕರಣದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಅನರ್ಹಗೊಂಡು ಆಘಾತಕ್ಕೆ ಒಳಗಾಗಿರುವ ಅವರು, ಕುಸ್ತಿ ಜೀವನಕ್ಕೆ ವಿದಾಯ ಹೇಳಿದ್ದಾರೆ.
“‘ಅಮ್ಮಾ, ನನ್ನ ವಿರುದ್ಧ ಕುಸ್ತಿ ಗೆದ್ದಿದೆ, ನಾನು ಸೋತೆ, ಕ್ಷಮಿಸಿ. ನಿನ್ನ ಕನಸು, ನನ್ನ ಧೈರ್ಯ ಎಲ್ಲ ಭಗ್ನವಾಯಿತು. ನನ್ನ ಧೈರ್ಯ ಛಿದ್ರವಾಗಿದೆ. ಈಗ ಹೆಚ್ಚಿನ ಶಕ್ತಿ ಉಳಿದಿಲ್ಲ. ನಿಮ್ಮೆಲ್ಲರ ಬೆಂಬಲಕ್ಕೆ ನಾನು ಸದಾ ಋಣಿ ಆಗಿರುತ್ತೇನೆ” ಎಂದು ಭಾವನಾತ್ಮಕವಾಗಿ 29 ವರ್ಷದ ವಿನೇಶ್ ಕುಸ್ತಿಗೆ ವಿದಾಯ ಹೇಳಿದ್ದಾರೆ.
ಅನರ್ಹತೆ ಪ್ರಶ್ನಿಸಿ ಕ್ರೀಡಾ ನ್ಯಾಯಾಲಯಕ್ಕೆ ಮನವಿ
ಪ್ಯಾರಿಸ್: ಕುಸ್ತಿಯಲ್ಲಿ ಅನರ್ಹತೆಯನ್ನು ಪ್ರಶ್ನಿಸಿ ವಿನೇಶ್ ಫೋಗಾಟ್ ಅಂತಾರಾಷ್ಟ್ರೀಯ ಮಧ್ಯವರ್ತಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದಾರೆ.
100 ಗ್ರಾಂ ಹೆಚ್ಚಳ ಎಂಬ ಕಾರಣಕ್ಕೆ ಅನರ್ಹಗೊಳಿಸಲಾಗಿದೆ. ಹೀಗಾಗಿ ಜಂಟಿ ಬೆಳ್ಳಿ ಪದಕ ನೀಡಬೇಕು ಎಂದು ವಿನೇಶ್ ಫೋಗಾಟ್ ಮನವಿ ಸಲ್ಲಿಸಿದ್ದಾರೆ.