Advertisement

ವಿಡಿಯೋ ಪಡೆಯಲು ವಿನಯ್‌ ಅಪಹರಣ ಸ್ಕೆಚ್‌? 

06:35 AM Jul 25, 2017 | Team Udayavani |

ಬೆಂಗಳೂರು: ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಕೆ.ಎಸ್‌.ಈಶ್ವರಪ್ಪ ಅವರ ಆಪ್ತ ಸಹಾಯಕ ವಿನಯ್‌
ಮೇಲಿನ ಹಲ್ಲೆ ಮತ್ತು ಅಪಹರಣ ಯತ್ನ ಪ್ರಕರಣಕ್ಕೆ ಮತ್ತೂಂದು ತಿರುವು ಸಿಕ್ಕಿದೆ.

Advertisement

ಈಶ್ವರಪ್ಪ ಅವರಿಗೆ ಸಂಬಂಧಿಸಿದ ವಿಡಿಯೋ ಪಡೆದುಕೊಳ್ಳುವ ಸಲುವಾಗಿ ಅವರ ಆಪ್ತ ಸಹಾಯಕ ವಿನಯ್‌ ಅಪಹರಣಕ್ಕೆ ಯತ್ನಿಸಲಾಗಿತ್ತು ಎಂಬುದು ಪೊಲೀಸ್‌ ತನಿಖೆಯಲ್ಲಿ ಗೊತ್ತಾಗಿದೆ ಎಂದು ಸರ್ಕಾರಿ ಅಭಿಯೋಜಕ ನಾಗಪ್ಪ ಸೆಷನ್ಸ್‌ ಕೋರ್ಟ್‌ಗೆ ಸೋಮವಾರ ತಿಳಿಸಿದ್ದಾರೆ. 

ಈ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರ ಆಪ್ತ ಸಹಾಯಕ ಎನ್‌. ಆರ್‌.ಸಂತೋಷ್‌ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ವೇಳೆ ಸರ್ಕಾರಿ ಅಭಿಯೋಜಕ ನಾಗಪ್ಪ ಈ ವಿಚಾರವನ್ನು ನ್ಯಾಯಾಲಯದ ಗಮನಕ್ಕೆ ತಂದರು. ಪೊಲೀಸ್‌ ಕಸ್ಟಡಿಯಲ್ಲಿರುವ ಪ್ರಕರಣದ ಮತ್ತೋರ್ವ ಆರೋಪಿ ರಾಜೇಂದ್ರ ಅರಸ್‌ ವಿಚಾರಣೆ ವೇಳೆ, ಈಶ್ವರಪ್ಪನವರಿಗೆ ಸಂಬಂಧಿಸಿದ ವಿಡಿಯೋ ವಿನಯ್‌ ಮೊಬೈಲ್‌ನಲ್ಲಿದ್ದು ಅದನ್ನು ಪಡೆದುಕೊಳ್ಳುವ ಸಲುವಾಗಿ ಯಡಿಯೂರಪ್ಪಅವರ ಪಿಎ ಸಂತೋಷ್‌ ನಮಗೆ ತಿಳಿಸಿದ್ದ.

ಹೀಗಾಗಿ ಪ್ರಶಾಂತ್‌ ಮೂಲಕ ವಿನಯ್‌ ಅವರನ್ನು ಅಪಹರಣ ಮಾಡುವ ಸಂಚು ರೂಪಿಸಲಾಗಿತ್ತು ಎಂದು ಹೇಳಿದ್ದಾನೆ. ಈ ಪ್ರಕರಣದ ಸತ್ಯಾಸತ್ಯತೆ ಹೊರಬರಬೇಕಾಗಿರುವುದರಿಂದ ಸಂತೋಷ್‌ಗೆ ಜಾಮೀನು ಮಂಜೂರು ಮಾಡದಂತೆ ಕೋರಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಂತೋಷ್‌ ಪರ ವಕೀಲ ಸ್ವರೂಪ್‌, ರಾಜಕೀಯ ದುರುದ್ದೇಶದಿಂದ ಈ ಪ್ರಕರಣದಲ್ಲಿ ಮೂರನೇ ವ್ಯಕ್ತಿಯನ್ನು ಸಿಲುಕಿಸಲು ಸರ್ಕಾರ ಯತ್ನಿಸುತ್ತಿದೆ. ಪ್ರಕರಣದ ದಿಕ್ಕು ತಪ್ಪಿಸುವಸಲುವಾಗಿ ಪೊಲೀಸರಿಂದ ತನಿಖೆ ನಡೆಸಲಾಗುತ್ತಿದೆ.  ವಕೀಲರ ಸಮ್ಮುಖದಲ್ಲಿಯೇ ಅರ್ಜಿದಾರರನ್ನು ವಿಚಾರಣೆಗೊಳಪಡಿಸಲು ನ್ಯಾಯಾಲಯ ಆದೇಶಿಸಬೇಕು ಎಂದು ಕೋರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸರ್ಕಾರಿ ಅಭಿಯೋಜಕ ನಾಗಪ್ಪ, ವಿನಯ್‌, ಸಂತೋಷ್‌ ಇಬ್ಬರೂ ಪ್ರತಿಪಕ್ಷದವರಾಗಿದ್ದಾರೆ. ಪ್ರಕರಣದಲ್ಲಿ ಹಸ್ತಕ್ಷೇಪ ಮಾಡಲು ಸರ್ಕಾರಕ್ಕೆ ಯಾವುದೇ ಹಿತಾಸಕ್ತಿಯಿಲ್ಲ, ಅರ್ಜಿದಾರರ ಪರ ಆರೋಪದಲ್ಲಿ ಹುರುಳಿಲ್ಲ ಎಂದರು. ವಾದ- ಪ್ರತಿವಾದ ಆಲಿಸಿದ ನ್ಯಾಯಪೀಠ, ಸಂತೋಷ್‌ ನಿರೀಕ್ಷಣಾ ಜಾಮೀನು ಅರ್ಜಿಯ ಆದೇಶ ಕಾಯ್ದಿರಿಸಿ ವಿಚಾರಣೆ ಮುಂದೂಡಿತು.

Advertisement

ರಹಸ್ಯ ವಿಡಿಯೋ ಯಾವುದು?
ವಿನಯ್‌ ಮೇಲಿನ ಹಲ್ಲೆ ಹಾಗೂ ಅಪಹರಣಕ್ಕೆ ಯತ್ನ ಪ್ರಕರಣದ ಹಿಂದಿರುವ ಅಸಲಿ ಕಾರಣದ ಬಗ್ಗೆ ದಿನಕ್ಕೊಂದು ಟ್ವಿಸ್ಟ್‌ ಪಡೆದುಕೊಳ್ಳುತ್ತಿದೆ. ಆರಂಭದಲ್ಲಿ ಯಡಿಯೂರಪ್ಪ ಅವರ ಪಿಎ ಸಂತೋಷ್‌ಗೆ ಸಂಬಂಧಿಸಿದ ಖಾಸಗಿ ವಿಡಿಯೋ ವಿನಯ್‌ ಬಳಿಯಿತ್ತು. ಅದನ್ನು ಪಡೆದುಕೊಳ್ಳುವ ಸಲುವಾಗಿ ವಿನಯ್‌ ಅಪಹರಣಕ್ಕೆ ಸ್ಕೆಚ್‌ ಹಾಕಲಾಗಿತ್ತು ಎಂಬ ಸಂಗತಿ ಪೊಲೀಸ್‌ ತನಿಖೆಯಲ್ಲಿ ಗೊತ್ತಾಗಿತ್ತು. ಆದರೆ ಪ್ರಕರಣ ಸಂಬಂಧ ರಾಜೇಂದ್ರ ಅರಸ್‌ ಬಂಧನವಾದ ಬಳಿಕ ಈಶ್ವರಪ್ಪನವರಿಗೆ ಸಂಬಂಧಿಸಿ ವಿಡಿಯೋಗಾಗಿ ಈ ಸ್ಕೆಚ್‌ ರೂಪಿಸಲಾಗಿತ್ತು ಎಂದು ಗೊತ್ತಾಗಿದೆ. ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ಹುಟ್ಟು ಹಾಕಿದ ನಂತರ ಯಡಿಯೂರಪ್ಪ ಹಾಗೂ ಈಶ್ವರಪ್ಪನ ನಡುವೆ ವೈಮನಸ್ಯ ಸ್ಫೋಟಗೊಂಡಿತ್ತು. ಬಿಎಸ್‌ವೈಗೆ ಬ್ರಿಗೇಡ್‌ ಮೂಲಕ ಈಶ್ವರಪ್ಪ ಸಡ್ಡುಹೊಡೆದಿದ್ದರು.

ಹೀಗಾಗಿ ಈಶ್ವರಪ್ಪಗೆ ಕಡಿವಾಣ ಹಾಕುವ ಸಲುವಾಗಿ ಅವರಿಗೆ ಸಂಬಂಧಿಸಿದ ಖಾಸಗಿ ವಿಡಿಯೋ ಇಟ್ಟುಕೊಂಡಿರುವ ವಿನಯ್‌ ಅವರನ್ನು ಅಪಹರಿಸಿ ವಿಡಿಯೋ ಪಡೆದುಕೊಳ್ಳುವುದಕ್ಕೆ ಸಂತೋಷ್‌ ಸೂಚಿಸಿದ್ದರು. ಹೀಗಾಗಿ ರೌಡಿಶೀಟರ್‌ ಪ್ರಶಾಂತ್‌ಗೆ ಸುಪಾರಿ ಕೊಟ್ಟು ವಿನಯ್‌ನನ್ನು ಅಪಹರಿಸಲು ಯತ್ನಿಸಲಾಗಿತ್ತು ಎಂದು ರಾಜೇಂದ್ರ ಅರಸ್‌ ತನಿಖಾಧಿಕಾರಿಗಳ ಮುಂದೆ ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ.

ಕಿಡ್ನಾಪ್‌ ಪ್ರಕರಣದಲ್ಲಿ ತಮ್ಮ ಹಾಗೂ ಯಡಿಯೂರಪ್ಪ ಅವರ ಹೆಸರನ್ನು ಪ್ರಸ್ತಾಪ ಮಾಡುತ್ತಿರುವುದೇಕೆ?
ಆಪ್ತ ಸಹಾಯಕರು ಇಬ್ಬರೂ ಸ್ನೇಹಿತರಾಗಿದ್ದರು. ತನಿಖೆ ನಡೆಯುತ್ತಿದೆ. ಸತ್ಯ ಹೊರಬರುತ್ತದೆ.

– ಕೆ.ಎಸ್‌. ಈಶ್ವರಪ್ಪ,
ವಿಧಾನಪರಿಷತ್‌ ಪ್ರತಿಪಕ್ಷ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next