ನವದೆಹಲಿ: ಭಾರತ ಕ್ರಿಕೆಟ್ ತಂಡದ ನೂತನ ಕೋಚ್ ಆಗಿ ಗೌತಮ್ ಗಂಭೀರ್ ಆಯ್ಕೆಯಾಗುವುದರೊಂದಿಗೆ ಉಳಿದ ವಿಭಾಗದ ಕೋಚ್‌ಗಳ ಬಗ್ಗೆ ಕುತೂಹಲ ಆರಂಭವಾಗಿದೆ. ಇತ್ತೀಚೆಗೆ ಬೌಲಿಂಗ್ ಕೋಚ್ ಆಗಿ ಗೌತಮ್ ಆಪ್ತ, ರಾಜ್ಯದ ವಿನಯ್ ಕುಮಾರ್ ಆಯ್ಕೆಯಾಗಲಿದ್ದಾರೆಂದು ಹೇಳಲಾಗಿತ್ತು. ಆದರೆ ಇದೀಗ ವಿನಯ್ ಹೆಸರಿಗೆ ಬಿಸಿಸಿಐ ಒಪ್ಪಿಗೆ ನೀಡಲ್ಲ ಎಂದು ವರದಿಯಾಗಿದೆ.
ಬೌಲಿಂಗ್ ಕೋಚ್ ಸ್ಥಾನಕ್ಕೆ ಭಾರತ ತಂಡದ ಖ್ಯಾತ ಮಾಜಿ ವೇಗಿ ಜಹೀರ್ ಖಾನ್ ಬರಲಿದ್ದಾರೆಂದು ಹೇಳಲಾಗಿದೆ. ಇನ್ನೊಬ್ಬ ವೇಗಿ ತಮಿಳುನಾಡಿನ ಲಕ್ಷ್ಮೀಪತಿ ಬಾಲಾಜಿ ಕೂಡ ಪೈಪೋಟಿಯಲ್ಲಿದ್ದಾರೆ ಎಂದು ಮೂಲಗಳು ಹೇಳಿವೆ. ಇದುವರೆಗೆ ಬೌಲಿಂಗ್ ಕೋಚ್ ಆಗಿದ್ದ ಪರಾಸ್ ಮ್ಹಾಂಬ್ರೆ ಸ್ಥಾನಕ್ಕೆ ಇಬ್ಬರಲ್ಲೊಬ್ಬರು ಬರಲಿದ್ದಾರೆ.
92 ಟೆಸ್ಟ್ ಪಂದ್ಯಗಳನ್ನಾಡಿರುವ ಜಹೀರ್ ಖಾನ್ 311 ವಿಕೆಟ್ ಪಡೆದಿದ್ದಾರೆ. ಒಟ್ಟಾರೆ 309 ಅಂತಾರಾಷ್ಟ್ರೀಯ ಪಂದ್ಯವನ್ನಾಡಿರುವ ಮುಂಬೈನ ಎಡಗೈ ವೇಗಿ ಒಟ್ಟು 610 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಜಹೀರ್ ಖಾನ್ ಅವರನ್ನು ಭಾರತ ತಂಡ ಶ್ರೇಷ್ಠ ಎಡಗೈ ವೇಗಿ ಎಂದು ಪರಿಗಣಿಸಲಾಗುತ್ತದೆ.
ಮತ್ತೊಂದೆಡೆ ಜಹೀರ್ ಸಮಕಾಲಿನರಾಗಿದ್ದ ತಮಿಳುನಾಡು ವೇಗಿ ಲಕ್ಷ್ಮೀಪತಿ ಬಾಲಾಜಿ ಅವರು ಎಂಟು ಟೆಸ್ಟ್ ಪಂದ್ಯಗಳನ್ನಾಡಿ 27 ವಿಕೆಟ್ ಕಿತ್ತಿದ್ದಾರೆ. 30 ಏಕದಿನ ಪಂದ್ಯವಾಡಿರುವ ಬಾಲಾಜಿ 34 ವಿಕೆಟ್ ಪಡೆದಿದ್ದಾರೆ.
ಭಾರತೀಯ ಪುರುಷರ ಕ್ರಿಕೆಟ್ ತಂಡದ ನೂತನ ಮುಖ್ಯ ಕೋಚ್ ಆಗಿ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅವರನ್ನು ನೇಮಕ ಮಾಡಲಾಗಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ ಮಂಗಳವಾರ ಪ್ರಕಟಿಸಿದ್ದರು.