ಗ್ರಾಮಗಳು ಜಾತಿಸೂಚಕ ಹೆಸರು ಬದಲಾವಣೆಯ ನಿರೀಕ್ಷೆಯಲ್ಲಿವೆ.
Advertisement
ದಾವಣಗೆರೆ, ಹರಿಹರ, ಹೊನ್ನಾಳಿ, ಚನ್ನಗಿರಿ, ನ್ಯಾಮತಿ ಮತ್ತು ಜಗಳೂರು ತಾಲೂಕು ಹೊಂದಿರುವ ದಾವಣಗೆರೆ ಜಿಲ್ಲೆಯಲ್ಲಿ ಒಟ್ಟು 862 ಗ್ರಾಮಗಳಿವೆ. ಅವುಗಳಲ್ಲಿ ಗೊಲ್ಲರಹಳ್ಳಿ, ವಡ್ಡರಹಟ್ಟಿ, ಗೊಲ್ಲರಹಟ್ಟಿ ಜೊತೆಗೆ ಮೀನುಗರಹಳ್ಳಿ, ಮುಚ್ಚಿಗರಹಳ್ಳಿ, ಅಗಸನಹಳ್ಳಿ, ಕುರುಬನಹಳ್ಳಿ, ಅಯ್ಯನಹಳ್ಳಿ, ಬೇಡರ ಬೆನಕನಹಳ್ಳಿ, ಶೆಟ್ಟಿಗೊಂಡಿನಹಳ್ಳಿ ಎಂಬ ಜಾತಿ ಸೂಚಕಹೆಸರಿನ ಗ್ರಾಮಗಳಿವೆ. ಜಗಳೂರು ತಾಲೂಕಿನಲ್ಲಿ ಅತಿ ಹೆಚ್ಚು 10ಕ್ಕೂ ಹೆಚ್ಚು ಜಾತಿ ಸೂಚಕ ಗ್ರಾಮಗಳಿವೆ.
ಭೋವಿ ಸಮಾಜದ ಮತ್ತೂಂದು ಪರ್ಯಾಯ ಪದ ಒಡ್ಡರು ವಾಸಿಸುವ ಹಟ್ಟಿ (ಪ್ರದೇಶ) ಕ್ರಮೇಣ ವಡ್ಡಿನಹಳ್ಳಿ ಆಗಿದೆ ಎನ್ನುತ್ತಾರೆ ಇಲ್ಲಿನ ಕೆಲವರು. ದಾವಣಗೆರೆ ತಾಲೂಕಿನ ಅಣಜಿ ಗ್ರಾಮದ ಸಮೀಪದಲ್ಲಿ ಗೊಲ್ಲರಹಳ್ಳಿ ಎಂಬ ಗ್ರಾಮ ಇದೆ. ಯಾದವ ಸಮಾಜ ಹೆಚ್ಚಾಗಿ ಇರುವ ಕಾರಣದಿಂದ ಯಾದವ ಸಮಾಜದ ಪರ್ಯಾಯ ಪದ
ಗೊಲ್ಲರಹಳ್ಳಿ ಎಂದು ಕರೆಯಲಾಗುತ್ತದೆ. ಹೊನ್ನಾಳಿ ಸಮೀಪವೂ ಗೊಲ್ಲರಹಳ್ಳಿ ಎಂಬ ಗ್ರಾಮವಿದೆ. ಒಂದೇ ಸಮುದಾಯದವರೇ ಹೆಚ್ಚಿನ ಸಂಖ್ಯೆಯಲ್ಲಿ ವಾಸ ಮಾಡುತ್ತಿದ್ದರೂ ಜಾತಿ ಸೂಚಕದ ಹೆಸರಿನ ಬದಲಾಗಿ ಬೇರೆ ಹೆಸರಿನ ಗ್ರಾಮಗಳೂ ಇವೆ.
Related Articles
Advertisement
ದಾವಣಗೆರೆಗೆ ಹೊಂದಿಕೊಂಡಿರುವ ತೋಳಹುಣಸೆ, ಚಟ್ಟೋಬನಹಳ್ಳಿ, ದೊಡ್ಡಓಬಜ್ಜಿಹಳ್ಳಿ ಗ್ರಾಮದಲ್ಲಿ ಬಂಜಾರ ಸಮಾಜದವರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುತ್ತಾರೆ. ಆದರೂ ಜಾತಿ ಸೂಚಕ ಹೆಸರುಗಳನ್ನು ಈ ಗ್ರಾಮಗಳು ಹೊಂದಿಲ್ಲ ಎನ್ನುವುದು ವಿಶೇಷ.
ಚನ್ನಗಿರಿ ತಾಲೂಕಿನ ವಡ್ನಾಳ್ ಗ್ರಾಮದ ಹೆಸರು ಮೇಲ್ನೋಟಕ್ಕೆ ಜಾತಿ ಸೂಚಕವಾಗಿ ಕಂಡರೂ ಜಾತಿ ಸೂಚಕ ಅಲ್ಲ ಒಡ್ಡಿನಹಾಳ್ ಕ್ರಮೇಣ ವಡ್ನಾಳ್ ಆಗಿದೆ ಎಂಬ ಐತಿಹ್ಯ ಇದೆ. ಜಗಳೂರು ತಾಲೂಕಿನಲ್ಲಿ ಕೆಲ ಗ್ರಾಮಗಳ ಹೆಸರು ಜಾತಿಯನ್ನು ಸೂಚಿಸುತ್ತವೆ. ಬೆಸ್ತ ಸಮುದಾಯದವರು ಹೆಚ್ಚಿನ ಪ್ರಮಾಣದಲ್ಲಿ ವಾಸ ಮಾಡುತ್ತಿರುವ ಕಾರಣದಿಂದಾಗಿಯೇಮೀನುಗರಹಳ್ಳಿ ಎಂದೇ ಗ್ರಾಮದ ಹೆಸರಾಗಿದೆ. ಕೆಲ ಗ್ರಾಮೀಣ ಪ್ರದೇಶಗಳಲ್ಲಿ ಗಂಗಾಮತಸ್ಥರನ್ನು ಮೀನಿಗರು(ಮೀನು ಹಿಡಿಯುವ ಕೆಲಸ ಮಾಡುವ ಹಿನ್ನೆಲೆಯಲ್ಲಿ) ಎಂದು ಕರೆಯಲಾಗುತ್ತದೆ. ಹಾಗಾಗಿ ಮೀನುಗರಹಳ್ಳಿ ಎಂಬ ಹೆಸರು ಬಂದಿದೆ. ಮುಚ್ಚಗರಹಳ್ಳಿ ಎಂಬ ಗ್ರಾಮದ ಹೆಸರಿನ ಹಿಂದೆ ಮುಚ್ಚುಗಾರ ಸಮಾಜ ಹೆಚ್ಚಾಗಿ ಇರುವ ಕಾರಣದಿಂದ ಮುಚ್ಚುಗರಹಳ್ಳಿ ಎಂಬ ಹೆಸರು ಬಂದಿದೆ ಎನ್ನುತ್ತಾರೆ. ಅಗಸನಹಳ್ಳಿ ಎಂಬುದು
ಜಾತಿಸೂಚಕದಂತೆ ಕಂಡರೂ ಜಾತಿಯನ್ನು ಪ್ರತಿನಿಧಿಸುವುದಿಲ್ಲ. ಅಗಸ್ತ್ಯ ಮುನಿಗಳು ಈ ಭಾಗದಲ್ಲಿ ತಪಸ್ಸು ಮಾಡಿದ್ದರು. ಆ ಕಾರಣಕ್ಕೆ ಅಗಸ್ತ್ಯನಹಳ್ಳಿ ಎಂಬ ಹೆಸರು ಕ್ರಮೇಣವಾಗಿ ಆಡು ಮಾತಿನಲ್ಲಿ ಅಗಸನಹಳ್ಳಿ ಆಗಿದೆ. ಜಗಳೂರು ತಾಲೂಕಿನಲ್ಲಿ ಕುರುಬನಹಳ್ಳಿ, ಅಯ್ಯನಹಳ್ಳಿ, ಬೇಡರ ಬೆನಕನಹಳ್ಳಿ, ಶೆಟ್ಟಿಗೊಂಡನಹಳ್ಳಿ, ಗೌಡ ಗೊಂಡನಹಳ್ಳಿ. ಗೌಡಿಕಟ್ಟೆ ಎಂಬ ಗ್ರಾಮಗಳಿವೆ. ಕುರುಬ ಸಮಾಜದ ಹೆಚ್ಚಾಗಿ ಕಂಡು ಬರುತ್ತಿದ್ದ ಕಾರಣಕ್ಕೆ ಕುರುಬನಹಳ್ಳಿ ಹೆಸರು ಪ್ರಚಲಿತಕ್ಕೆ ಬಂದಿದೆ. ಬೇಡರ ಬೆನಕನಹಳ್ಳಿ ಹೆಸರಾಗಲು ಬೇಡ ಸಮುದಾಯ ಹೆಚ್ಚಾಗಿಯೇ
ಇರುವ ಕಾರಣಕ್ಕೆ ಹೆಸರು ಬಂದಿದೆ. ಹೊನ್ನಾಳಿ ಸಮೀಪದಲ್ಲಿ ಗೊಲ್ಲರಹಳ್ಳಿ ಎಂಬ ಗ್ರಾಮ ಇದೆ. ಇಲ್ಲಿ ಗ್ರಾಮದ ಹೆಸರು ಸೂಚಿಸುವಂತೆ ಗೊಲ್ಲ (ಯಾದವ) ಸಮುದಾಯ ಹೆಚ್ಚಾಗಿ
ಕಾಣ ಸಿಗುವುದಿಲ್ಲವಾದರೂ ಗ್ರಾಮದ ಹೆಸರು ಜಾತಿಸೂಚಕವಾಗಿದೆ. ನ್ಯಾಮತಿ ತಾಲೂಕಿನಲ್ಲಿ ಗೊರವರಹಟ್ಟಿ ಎಂಬ ಬೇಚಾರಕ್ ಗ್ರಾಮ ಇದೆ. ದಾಸರಹಟ್ಟಿ ಎಂಬ ಜಾತಿ ಸೂಚಕ ಗ್ರಾಮ ಇಲ್ಲಿದೆ. ದಾಸರು ಹೆಚ್ಚಾಗಿ ಇರುವ ಕಾರಣಕ್ಕೆ ದಾಸರಹಟ್ಟಿ ಎನ್ನಲಾಗುತ್ತದೆ. ಅಧಿಕೃತ ಪ್ರಕಟಣೆ ಹೊರ ಬಿದ್ದಿಲ್ಲವಾದರೂ ಸರ್ಕಾರ ಈಚೆಗೆ ಜಾತಿಸೂಚಕ ಗ್ರಾಮಗಳ ಹೆಸರು ಬದಲಾಯಿಸುವುದಾಗಿ ಹೇಳಿದೆ. ಅಧಿಕೃತ ಆದೇಶವಾದಲ್ಲಿ ಜಾತಿಸೂಚಕ ಹೆಸರಿನ ಗ್ರಾಮಗಳು ಹೊಸ ಹೆಸರು ಹೊಂದಲಿವೆ. ಆದರೂ ಲೋಕಾರೂಢಿಯಾಗಿ ಬಳಕೆಯಲ್ಲಿರುವ ಗ್ರಾಮಗಳ
ಹೆಸರು ಮುಂದುವರೆಯುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಠರಾವು ಪಾಸ್ ಆಗಬೇಕು
ಜಾತಿಸೂಚಕವಾಗಿರುವಂತಹ ಬೇಚಾರ್ ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸುವ ಪ್ರಕ್ರಿಯೆ ಸಂದರ್ಭದಲ್ಲಿ ಗ್ರಾಮಗಳ ಹೆಸರನ್ನು ಬದಲಾಯಿಸುವ ಬಗ್ಗೆ
ಆಯಾ ಗ್ರಾಮ ಪಂಚಾಯತ್‌ನಲ್ಲಿ ಠರಾವು ಅಂಗೀಕರಿಸಿ ತಾಲೂಕು ಜಿಲ್ಲಾಡಳಿತಕ್ಕೆ ಕಳುಹಿಸಬೇಕು. ಅದನ್ನು ಸರ್ಕಾರಕ್ಕೆ ರವಾನಿಸಿ ಹೆಸರು ಬದಲಾವಣೆಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪ್ರಭಾರಿ ಅಪರ ಜಿಲ್ಲಾಧಿಕಾರಿ ಜಿ. ನಜ್ಮಾ ತಿಳಿಸಿದರು. – ರಾ. ರವಿಬಾಬು